ಚನ್ನಪಟ್ಟಣ: ಆನೆ ಸೆರೆ ಕಾರ್ಯಾಚರಣೆಗೆ ಗಜಪಡೆ ಸಿದ್ಧ..!

By Kannadaprabha News  |  First Published Aug 13, 2022, 11:57 AM IST

ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಲಿರುವ 5 ಪಳಗಿದ ಆನೆಗಳು 


ವಿಜಯ್‌ ಕೇಸರಿ

ಚನ್ನಪಟ್ಟಣ(ಆ.13):  ರೈತರಿಗೆ ಉಪಟಳ ನೀಡುತ್ತಿರುವ ಆನೆಗಳ ಸೆರೆ ಕಾರ್ಯಾಚರಣೆಗೆ ಮುಹೂರ್ತ ನಿಗದಿಯಾಗಿದ್ದು, ಶನಿವಾರದಿಂದ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಆನೆ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಲಿರುವ 5 ಪಳಗಿದ ಆನೆಗಳು ಚನ್ನಪಟ್ಟಣಕ್ಕೆ ಆಗಮಿಸಿದ್ದು, ಕಾರ್ಯಾಚರಣೆಗೆ ಕ್ಷಣಗಣನೆ ಶುರುವಾಗಿದೆ. ದುಬಾರೆ ಆನೆ ಶಿಬಿರದಿಂದ ಮೂರು ಮತ್ತು ನಾಗರಹೊಳೆ ಅರಣ್ಯವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಿಂದ 2 ಪಳಗಿದ ಆನೆಗಳು ಸೇರಿದಂತೆ ಒಟ್ಟು 5 ಆನೆಗಳು ತಾಲೂಕಿಗೆ ಆಗಮಿಸಿದ್ದು, ಬಿ.ವಿ.ಹಳ್ಳಿ ಬಳಿ ನಿರ್ಮಿಸಿರುವ ಬಿಡಾರದಲ್ಲಿ ಬೀಡುಬಿಟ್ಟಿವೆ.

Tap to resize

Latest Videos

ಒಂದು ದಿನ ರೆಸ್ಟ್‌: ಗುರುವಾರ ಬಿ.ವಿ.ಹಳ್ಳಿಗೆ ಆಗಮಿಸಿದ ಆನೆಗಳಿಗೆ, ವಿಶ್ವ ಆನೆಗಳ ದಿನಾಚರಣೆ ಹಾಗೂ ಕಾರ್ಯಾಚರಣೆ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿಲಾಗಿದೆ. ದೂರದಿಂದ ಆನೆಗಳ ಆಗಮಿಸಿರುವ ಹಿನ್ನೆಲೆ ಹಾಗೂ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಿ ಎಂಬ ಉದ್ದೆಶದಿಂದ ಆನೆಗಳಿಗೆ ಒಂದು ದಿನದ ವಿಶಾಂತ್ರಿ ಕಲ್ಪಿಸಲಾಗಿದೆ.

Ramanagara; ಕಾಡಾನೆ ದಾಳಿಗೆ ರೈತ ಮಹಿಳೆ ಸಾವು

5 ಆನೆಗಳ ಆಗಮನ: ಪುಂಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಮತ್ತಿಗೋಡು ಆನೆ ಶಿಬಿರದಿಂದ ಭೀಮಾ ಮತ್ತು ಗಣೇಶ್‌ ಎಂಬ ಆನೆಗಳು ಮತ್ತು ದುಬಾರೆ ಆನೆ ಶಿಬಿರದಿಂದ ಅಜಯ, ಲಕ್ಷತ್ರ್ಮಣ, ಹರ್ಷ ಎಂಬ ಮೂರು ಆನೆಗು ಸೇರಿದಂತೆ ಒಟ್ಟು ಐದು ಆನೆಗಳು ಆಗಮಿಸಿವೆ. ಹರ್ಷ ಆನೆ ಮುಂದಾಳತ್ವದಲ್ಲಿ ಈ ಪಳಗಿದ ಗಜಗಳು ಪುಂಡಾನೆಗಳ ಸೆರೆ ಕಾರ್ಯಾಚರಣೆ ನಡೆಸಲಿವೆ.

60ಕ್ಕೂ ಹೆಚ್ಚು ಮಂದಿ ಭಾಗಿ: ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯಲಿದ್ದು, ಆನೆಗಳ ಜತೆಯಲ್ಲಿ 12 ಮಾವುತರು ಮತ್ತು 13 ಕಾವಾಡಿಗರು ಸೇರಿದಂತೆ ಒಟ್ಟು 25 ಮಂದಿ ಆಗಮಿಸಿದ್ದಾರೆ. ಇಬ್ಬರು ಪಶುವೈದ್ಯರು, ಒಬ್ಬರು ಶೂಟರ್‌, ಡಿಎಫ್‌ಒ, ಆರ್‌ಎಫ್‌ಗಳು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 60 ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಂಬ್ಯುಲೆನ್ಸ್‌ ಸನ್ನದ್ಧ:ಕಾರ್ಯಾಚರಣೆಯ ವೇಳೆ ಭಾಗಿಯಾಗವ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿತರಕ್ಷಣೆಯಿಂದ 108 ಆಂಬ್ಯುಲೆನ್ಸ್‌ ಸದಾ ಜತೆಯಲ್ಲಿರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆನೆ ಸೆರೆ ಕಾರ್ಯಾಚರಣಗೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದಿನಿಂದ ಕಾರ್ಯಾಚರಣೆ: 

ಕೆಲವು ಪರಿಣಿತರು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಸನ, ಮಡಿಕೇರಿ, ಮೈಸೂರಿನಿಂದ ಆಗಮಿಸಬೇಕಿದ್ದು, ಅವರೆಲ್ಲರ ಆಗಮನದ ನಂತರ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದ್ದು, ಇಂದಿನಿಂದ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಬಿ.ವಿ.ಹಳ್ಳಿಯಿಂದ ಕಾರ್ಯಾಚರಣೆ ಆರಂಭಗೊಳ್ಳಲಿದೆ.

ರೇಷ್ಮೆ ನಗರಿ ರಾಮನಗರದಲ್ಲಿ ಮುಂದುವರಿದ ಮಳೆ ಅಬ್ಬರ, ಅಪಾರ ಪ್ರಮಾಣದ ಬೆಳೆ ನಾಶ

ಎಚ್ಚರಿಕೆಯಿಂದ ಇರುವಂತೆ ಸೂಚನೆ: 

ಆನೆ ಸೆರೆ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆ ಅನಾಹುತ ಆಗದಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ಸೂಚನೆ ನೀಡಿದೆ. ವೃದ್ಧರು, ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕಾರ್ಯಾಚರಣೆಯ ಸಮಯದಲ್ಲಿ ಮನೆಯಿಂದ ಹೊರಗೆ ಬರದಂತೆ ಉಪಅರಣ್ಯ ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ.

ಗಡಿಭಾಗದ ರೈತರ ಬಹುದಿನದ ಬೇಡಿಕೆಯಾದ ಪುಂಡಾನೆಗಳ ಸ್ಥಳಾಂತರ ಕಾರ್ಯಾಚರಣೆಗೆ ಕಂಕಣ ಕೂಡಿಬಂದಿದ್ದು, ಜನರು ಕುತೂಹಲದಿಂದ ಕಾದಿದ್ದಾರೆ.

ಆನೆಗಳ ಸೆರೆ ಕಾರ್ಯಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿರುವ 5 ಪಳಗಿದ ಆನೆಗಳು ತಾಲೂಕಿಗೆ ಆಗಮಿಸಿವೆ. ಇಂದಿನಿಂದ ಕಾರ್ಯಾಚರಣೆ ಆರಂಭಗೊಳ್ಳಲಿದೆ ಅಂತ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ದಿನೇಶ್‌ ತಿಳಿಸಿದ್ದಾರೆ.  
 

click me!