Elephant Training: ತರಬೇತುದಾರರ ಕೊರತೆ ನೀಗಿಸಲು ನಿವೃತ್ತರು ಸಿದ್ಧ

By Kannadaprabha NewsFirst Published Sep 4, 2022, 2:33 PM IST
Highlights
  • ಆನೆ ತರಬೇತುದಾರರ ಕೊರತೆ ನೀಗಲು ನಿವೃತ್ತರು ಸಿದ್ಧ
  • - ಹೊಸ ತಲೆಮಾರಿನ ಜಮೇದಾರ, ಮಾವುತ, ಕಾವಾಡಿಗಳಿಗೆ ನಿವೃತ್ತರು ತರಬೇತಿ ನೀಡಲು ಉತ್ಸಾಹ
  • ಸರ್ಕಾರ ಸೈ ಎಂದರೆ ಫಲ ನಿಶ್ಚಿತ

ಗೋಪಾಲ್‌ ಯಡಗೆರೆ

 ಶಿವಮೊಗ್ಗ (ಸೆ.4) : ರಾಜ್ಯದ ಆನೆ ಬಿಡಾರಗಳಲ್ಲಿ ನುರಿತ ತರಬೇತುದಾರರ ಕೊರತೆ ಭೀತಿಯನ್ನು ಸಮರ್ಥವಾಗಿ ಎದುರಿಸಲು ಸೂಕ್ತ ಪರಿಹಾರವೊಂದನ್ನು ಸರ್ಕಾರದ ಮುಂದಿಡಲಾಗಿದೆ. ನಿವೃತ್ತ ನೌಕರರನ್ನು ಬಳಸಿಕೊಳ್ಳಬಹುದಾಗಿದೆ. ಸರ್ಕಾರ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಿವೃತ್ತಿ ಹೊಂದಿರುವ ಮಾವುತರು, ಜಮೇದಾರರು ಮತ್ತು ಕಾವಾಡಿಗಳಲ್ಲಿ ಬಹುತೇಕರು ತಮ್ಮ ಜೀವಿತಾವಧಿಯ ಸರಿಸುಮಾರು ಶೇ.90ರಷ್ಟುಅವಧಿಯನ್ನು ಇದೇ ಆನೆಗಳ ಜೊತೆ ಕಾಲ ಕಳೆದಿದ್ದಾರೆ. ಬಾಲ್ಯದಲ್ಲಿ ಕುಟುಂಬದ ಹಿರಿಯರ ಜೊತೆ ಆನೆಗಳ ಜೊತೆಗೆ ಇಟ್ಟಮೊದಲ ಹೆಜ್ಜೆಯನ್ನು ಹಿಂತೆಗೆದಿದ್ದು ನಿವೃತ್ತರಾದ ಬಳಿಕ. ಅದು ಅನಿವಾರ್ಯವಾಗಿ. ಇವರÜಲ್ಲಿ ಬಹುತೇಕರು ಅತ್ಯುತ್ತಮ ಆನೆ ತರಬೇತುದಾರರಾಗಿದ್ದು, ಆನೆಗಳ ವರ್ತನೆ, ಮನಃಸ್ಥಿತಿ ಎಲ್ಲವನ್ನೂ ಹತ್ತಿರದಿಂದ ಬಲ್ಲವರು. ಯಾವ ರೀತಿಯಲ್ಲಿ ಆನೆಗಳಿಗೆ ತರಬೇತಿ ನೀಡಿದರೆ ಸುಲಭವಾಗಿ ಪಳಗಿಸಬಹುದು ಎಂಬುದನ್ನು ಬಲ್ಲವರು. ಜೊತೆಗೆ ಅನೇಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಅನುಭವ ಗಳಿಸಿದವರು.

Chikkamagaluru: ರೈತರ ಗೆದ್ದೆ ತೋಟಗಳಿಗೆ ದಾಳಿ‌‌ ಮಾಡುತ್ತಿದ್ದ ಕಾಡಾನೆ ಸೆರೆ

ಇವರನ್ನು ಹೊಸ ತಲೆಮಾರಿನ ಜಮೇದಾರ, ಮಾವುತ ಮತ್ತು ಕಾವಾಡಿಗಳಿಗೆ ತರಬೇತಿ ನೀಡುವಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬಹುದು. ವಾಸ್ತವವಾಗಿ ಈ ರೀತಿಯಲ್ಲಿ ತರಬೇತಿ ನೀಡಲು ಇವರು ಸಹ ಉತ್ಸುಕರಾಗಿದ್ದಾರೆ. ಆದರೆ ಆ ಉತ್ಸಾಹ ಸರ್ಕಾರಕ್ಕೂ ಬರಬೇಕಾಗಿದೆ. ಸೇವೆಯಿಂದ ನಿವೃತ್ತರಾಗಿದ್ದರೂ, ಇವರಲ್ಲಿ ಇರುವ ಅನುಭವ ಅಪಾರ. ಈ ಅನುಭವ ಬಳಸಿಕೊಂಡು ಹೊಸ ತಲೆಮಾರಿಗೆ ತರಬೇತಿ ನೀಡುವ ಕಾಯಂ ವ್ಯವಸ್ಥೆಯೊಂದನ್ನು ಸರ್ಕಾರ ಜಾರಿಗೆ ತರಬೇಕಾಗಿದೆ ಎನ್ನುತ್ತಾರೆ ನಿವೃತ್ತ ಆನೆ ಸಿಬ್ಬಂದಿ.

ಸರ್ಕಾರ ಈಗಲಾದರೂ ನಿವೃತ್ತರ ಸಲಹೆ ಕುರಿತು ಗಮನಹರಿಸದೇ ಇದ್ದರೆ ಇರುವ ಕೊನೆಯ ಅವಕಾಶವನ್ನು ಸಹ ಕಳೆದುಕೊಂಡಂತಾಗುತ್ತದೆ. ಇವರಲ್ಲಿರುವ ಜ್ಞಾನ ಮುಂದಿನ ತಲೆಮಾರಿಗೆ ಬರುವ ರೀತಿಯಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಇದರಿಂದ ವ್ಯವಸ್ಥೆ ಶಿಸ್ತುಬದ್ಧವಾಗಿ ಮುಂದುವರಿಯುವುದರ ಜೊತೆಗೆ ಈ ನಿವೃತ್ತರ ಬದುಕೂ ಸ್ವಲ್ಪ ಹಸನಾಗುತ್ತದೆ.

ಕುಮ್ಕಿ ಆನೆಗಳ ತಂಡ: ಸಧ್ಯ ದುಬಾರೆ ಆನೆ ಬಿಡಾರದಲ್ಲಿ ತರಬೇತಿ ಪಡೆದ ಕುಮ್ಕಿ ಆನೆಗಳ ತಂಡವಿದೆ. ಅಭಿಮನ್ಯು, ಗೋಪಾಲಸ್ವಾಮಿ, ವಿಕ್ರಮ್‌, ಕೃಷ್ಣ, ಭೀಮ ಈ ತಂಡದ ಸದಸ್ಯ ಆನೆಗಳಾಗಿದ್ದು, ಹುಲಿ, ಕಾಡಾನೆ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಸಂದರ್ಭದಲ್ಲಿ ಈ ತಂಡ ಗಮನಾರ್ಹ ಸಾಧನೆ ತೋರಿದೆ. ಆ ಮೂಲಕ ಸಮಸ್ಯೆ ಎದುರಿಸುತ್ತಿದ್ದ ಗ್ರಾಮೀಣ ಪ್ರದೇಶದ ಜನರು ನಿಟ್ಟುಸಿರುವ ಬಿಡುವಂತೆ ಮಾಡಿವೆ.

ಇದೇ ರೀತಿ ಸಕ್ರೆಬೈಲು ಆನೆ ಬಿಡಾರದಲ್ಲಿ ಇಂತಹ ತಂಡ ಕಟ್ಟುವ ಉತ್ಸುಕತೆ ಮಾವುತರಲ್ಲಿ ಇದೆ. ಆದರೆ, ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರಿಗಳಲ್ಲಿ ಇಲ್ಲ. ಈ ಹಿಂದೆ ಕುಮ್ಕಿ ತಂಡದ ಸದಸ್ಯರಾಗುವ ಅರ್ಹತೆ ಇದ್ದ ನ್ಯೂ ಟಸ್ಕರ್‌, ರಂಗ, ಗಂಗೆ, ರಾಜೇಂದ್ರ ಇದ್ದವು. ಆದರೆ, ಈಗ ಇವ್ಯಾವೂ ಬದುಕಿಲ್ಲ. ಆದರೆ ಈಗ ಬಾಲಣ್ಣ, ಸೋಮಣ್ಣ, ಬಹದ್ದೂರ್‌, ಸಾಗರ, ಭಾನುಮತಿ ಹೆಸರಿನ ಆನೆಗಳಿವೆ. ಇವುಗಳಿಗೆ ಈ ರೀತಿಯ ವಿಶೇಷ ತರಬೇತಿ ಬೇಕಾಗಿದೆ. ಈ ಆನೆಗಳ ನುರಿತ ಮಾವುತರು ಇದೀಗ ನಿವೃತ್ತರಾಗಿದ್ದಾರೆ ಎನ್ನುವುದು ಬೇಸರದ ಸಂಗತಿ ಎನ್ನುತ್ತಾರೆ ವೈಲ್ಡ್‌ ಟಸ್ಕರ್‌ ಟ್ರಸ್ಟ್‌ನ ಪಿ.ಜೇಸುದಾಸ್‌.

ಸಕ್ರೆಬೈಲು ಆನೆ ಬಿಡಾರದಲ್ಲಿ ಸಂಭ್ರಮ : ಹೆಣ್ಣು ಮರಿಗೆ ಜನ್ಮ ನೀಡಿದ ಭಾನುಮತಿ

ರಾಜ್ಯದ ಅರಣ್ಯದಲ್ಲಿ 6500 ಸಾವಿರ ಆನೆಗಳು:

ರಾಜ್ಯದಲ್ಲಿ ಸಧ್ಯಕ್ಕೆ 6500 ಆನೆಗಳಿವೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಆನೆಗಳ ಹತ್ಯೆಯ ಮೇಲೆ ಇರುವ ಕಠಿಣ ನಿಯಂತ್ರಣ, ಅರಣ್ಯ ಇಲಾಖೆಯ ಕಾರ್ಯವೈಖರಿ ಇತ್ಯಾದಿ. ಹೀಗಾಗಿ ಆನೆಗಳ ಸಂಖ್ಯೆ ಹೆಚ್ಚುತ್ತಿದೆ. ಆನೆಗಳ ಸಂಖ್ಯೆಗೆ ಅನುಗುಣವಾಗಿ ಕಾಡಿನ ವಿಸ್ತೀರ್ಣ ಹೆಚ್ಚುತ್ತಿಲ್ಲ. ಅಂತಿಮವಾಗಿ ಆನೆಗಳು ನಾಡಿಗೆ ನುಗ್ಗುತ್ತದೆ. ಈ ಸಂದರ್ಭದಲ್ಲಿ ಆನೆಗಳ ಉಪಟಳ ನಿಯಂತ್ರಿಸಿ, ಜನರನ್ನು, ಫಸಲನ್ನು ರಕ್ಷಿಸಿ ಆನೆಗಳನ್ನು ಮತ್ತೆ ಕಾಡಿಗಟ್ಟಲು ಬೇಕಾದ ತಜ್ಞ ತರಬೇತುದಾರರು ಲಭ್ಯವಿಲ್ಲ.

click me!