Bengaluru: 100 ಸ್ಕೈವಾಕ್‌ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ

By Kannadaprabha NewsFirst Published Sep 4, 2022, 2:12 PM IST
Highlights

ಪಾದಚಾರಿಗಳು ರಸ್ತೆ ದಾಟುವಾಗ ಅಪಘಾತ, ವಾಹನ ಸಂಚಾರಕ್ಕೂ ಅಡಚಣೆ ಹಿನ್ನೆಲೆಯಲ್ಲಿ ಪ್ಲಾನ್‌

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.04):  ನಗರದಲ್ಲಿ ಅತಿ ಹೆಚ್ಚಿನ ವಾಹನ ದಟ್ಟಣೆ ಇರುವ ರಸ್ತೆ, ಜಂಕ್ಷನ್‌ ಸೇರಿದಂತೆ ಒಟ್ಟು 100 ಕಡೆ ಪಾದಚಾರಿಗಳ ಅನುಕೂಲಕ್ಕೆ ‘ಸ್ಕೈವಾಕ್‌’ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ಸಿದ್ಧಪಡಿಸುತ್ತಿದ್ದು, 40 ಸ್ಥಳಗಳಲ್ಲಿ ಆದ್ಯತೆಯಡಿ ‘ಸ್ಕೈವಾಕ್‌’ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ನಗರದ 40 ಸ್ಥಳಗಳಲ್ಲಿ ಬಿಬಿಎಂಪಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಕೈವಾಕ್‌ಗಳನ್ನು ನಿರ್ಮಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗಿದೆ. ಇನ್ನೂ 12 ಹೊಸ ಸ್ಕೈವಾಕ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 8 ಸ್ಕೈವಾಕ್‌ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿದೆ. ಈಗ 100 ಸ್ಥಳದಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಬಿಬಿಎಂಪಿ ಇದೀಗ ಮುಂದಾಗಿದೆ.

40 ಕಡೆ ಆದ್ಯತೆ ಮೇಲೆ ನಿರ್ಮಾಣ

ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆ, ಜಂಕ್ಷನ್‌ಗಳಾದ ಕೆಆರ್‌ ರಸ್ತೆ, ನಂದಿದುರ್ಗ ರಸ್ತೆ ಜಂಕ್ಷನ್‌, ಹೆಣ್ಣೂರು ಮುಖ್ಯ ರಸ್ತೆ (ರಿಲಾಯನ್ಸ್‌ ಫ್ರೆಶ್‌) ಸೇರಿದಂತೆ 40 ಕಡೆ ಪಾದಚಾರಿಗಳು ರಸ್ತೆ ದಾಟಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದಾಟುವ ವೇಳೆ ಅಪಘಾತಗಳು ಉಂಟಾಗುತ್ತಿದೆ. ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಹಾಗಾಗಿ ಈ ಸ್ಥಳದಲ್ಲಿ ತುರ್ತು ಸ್ಕೈವಾಕ್‌ ನಿರ್ಮಾಣ ಮಾಡುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸ್‌ ಇಲಾಖೆ ಸಲ್ಲಿಸಿದ ಪ್ರಸ್ತಾವನೆ ಆಧರಿಸಿ ಸ್ಕೈವಾಕ್‌ ನಿರ್ಮಿಸಲು ತೀರ್ಮಾನಿಸಿದೆ.

ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಮಾಡಿದವರಿಗೆ ಬಿಗ್ ಶಾಕ್ !

ಸ್ಥಳ ಗುರುತಿಸುವ ಕಾರ್ಯ

ಸಂಚಾರಿ ಪೊಲೀಸರು ನೀಡಿರುವ ಸ್ಥಳದಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಸೆಲ್‌ ಪರಿಶೀಲನೆ ನಡೆಸಿದ್ದು, ಸ್ಕೈವಾಕ್‌ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕಾರ್ಯ ಮಾಡಿದೆ. ಶೀಘ್ರದಲ್ಲಿ ಟೆಂಡರ್‌ ಆಹ್ವಾನಿಸಲಿದೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್‌ ನಿರ್ಮಿಸಲು ತೀರ್ಮಾನಿಸಲಾಗಿದೆ.

ಸ್ಕೈವಾಕ್‌ ತಪಾಸಣೆಗೆ ಸೂಚನೆ

ಈಗಾಗಲೇ ನಗರದಲ್ಲಿ ಸಾರ್ವಜನಿಕರು ಬಳಸುತ್ತಿರುವ ಸ್ಕೈವಾಕ್‌ಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಲಿಫ್ಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಭದ್ರತಾ ಸಿಬ್ಬಂದಿ ಇಲ್ಲ. ಸಿಸಿಟಿವಿ ಕ್ಯಾಮರಾಗಳಿಲ್ಲ. ಮೆಟ್ಟಿಲು ಹತ್ತಿ ಇಳಿಯುವುದಕ್ಕೆ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟಕಾರ್ಯಪಾಲಕ ಎಂಜಿನಿಯರ್‌ಗಳಿಗೆ ತಪಾಸಣೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿರ್ವಹಣೆಯಲ್ಲಿ ಲೋಪ ಕಂಡು ಬಂದರೆ ಸಂಬಂಧಪಟ್ಟಗುತ್ತಿಗೆ ಸಂಸ್ಥೆಗೆ ನೋಟಿಸ್‌ ಜಾರಿ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ‘ಕನ್ನಡಪ್ರಭ‘ಕ್ಕೆ ಮಾಹಿತಿ ನೀಡಿದ್ದಾರೆ.

BBMP: ಟ್ರಾನ್ಸ್‌ಫರ್‌ ಸ್ಟೇಷನ್‌ ನೆಪದಲ್ಲಿ ₹180 ಕೋಟಿ ಹಾಳು ಮಾಡಲು ಮುಂದಾದ ಬಿಬಿಎಂಪಿ?

ಆದ್ಯತೆಯ ಸ್ಕೈವಾಕ್‌ ಸ್ಥಳಗಳು

ಕೆ.ಆರ್‌ ಜಂಕ್ಷನ್‌ನ ಸಂತೋಷ್‌ ಚಿತ್ರಮಂದಿರದ ಬಳಿ, ನಂದಿದುರ್ಗ ರಸ್ತೆ ಜಂಕ್ಷನ್‌, ಹೆಣ್ಣೂರು ಮುಖ್ಯ ರಸ್ತೆ (ರಿಲಾಯನ್ಸ್‌ ಫ್ರೆಶ್‌ ಮುಂಭಾಗ), ತೂಬರಹಳ್ಳಿ ಬಸ್‌ ನಿಲ್ದಾಣ, ಎಚ್‌ಎಸ್‌ಆರ್‌ 4ನೇ ಹಂತ (ಅಗರ ಕೆರೆ ಬಳಿ), ವೈಟ್‌ಫಿಲ್ಡ್‌ ಮುಖ್ಯ ರಸ್ತೆ (ಶಾಂತಿನಿಕೇತನ ಅಪಾರ್ಚ್‌ಮೆಂಟ್‌), ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ವೃತ್ತ, ವಾಟಾಳ್‌ ನಾಗರಾಜ್‌ ರಸ್ತೆಯ ಆರ್‌ಆರ್‌ಆರ್‌ ಜಂಕ್ಷನ್‌, ಕೆ.ಜಿ.ರಸ್ತೆಯ ಪೋತಿಸ್‌ ಮಾಲ್‌ ಬಳಿ, ಸುಂಕದಕಟ್ಟೆಬಸ್‌ ನಿಲ್ದಾಣ, ಟ್ಯಾಂಕ್‌ ಬೆಡ್‌ ರಸ್ತೆ ಬಾಳೆಹಣ್ಣು ಮಾರುಕಟ್ಟೆ, ಜಾಲಹಳ್ಳಿಯ ಮದರ್‌ ತೆರೇಸಾ ಸ್ಕೂಲ್‌, ಯಶವಂತಪುರ ಮೆಟ್ರೋ ನಿಲ್ದಾಣದ ವೈಷ್ಣವಿ ಮಾಲ್‌ ಬಳಿ, ರೆಸಿಡೆನ್ಸಿ ರಸ್ತೆಯ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆ ಮುಂಭಾಗ, ಹೊಸಕೆರೆ ಹಳ್ಳಿಯ ಪಿಇಎಸ್‌ ಐಟಿ ಕಾಲೇಜ್‌ ಬಳಿ, ಚೌಡೇಶ್ವರಿ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಕಡೆ ಸಂಚಾರಿ ಪೊಲೀಸರು ತುರ್ತು ಸ್ಕೈವಾಕ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಗರದ ಸ್ಕೈವಾಕ್‌, ಪಾದಚಾರಿ ಮಾರ್ಗದ ಅಂಕಿ ಅಂಶ

ಬಳಕೆಯಲ್ಲಿರುವ ಸ್ಕೈವಾಕ್‌-40
ನಿರ್ಮಾಣ ಹಂತದ ಸೈವಾಕ್‌-12
ಟೆಂಡರ್‌ ಹಂತದಲ್ಲಿ-8
ಹೊಸದಾಗಿ ಯೋಜನೆ-100
ಆದ್ಯತೆಯಡಿ ನಿರ್ಮಾಣದ ಸ್ಕೈವಾಕ್‌-40
ಪಾದಚಾರಿ ಸುರಂಗ ಮಾರ್ಗ ಸಂಖ್ಯೆ-19
 

click me!