ಚಿಕ್ಕಮಗಳೂರು: ಒಂದು ವಾರದಿಂದ ಕಾರ್ಯಚಾರಣೆ ನಡೆಸಿದರೂ ಸೆರೆಯಾಗದ ಒಂಟಿ ಸಲಗ, ಹೆಚ್ಚಿದ ಆತಂಕ..!

By Girish Goudar  |  First Published Nov 15, 2023, 1:00 AM IST

9 ಸಾಕಾನೆಗಳಿಂದ ಕಾರ್ಯಚಾರಣೆ ನಡೆಸಿದರು ನೋ ಯೂಸ್, ಇಬ್ಬರನ್ನು ಬಲಿ ಪಡೆದ ಒಂಟಿ ಸಲಗವನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.15): ಮಲೆನಾಡಿನ ಭಾಗದಲ್ಲಿ ಕಳೆದೆರಡು ತಿಂಗಳಿನಿಂದಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಅಪಾರ ಪ್ರಮಾಣದ ಹಾನಿಯನ್ನು ಮಾಡಿದ್ದು, ಇಬ್ಬರನ್ನುಬಲಿ ತೆಗೆದುಕೊಂಡಿದೆ.ಬೆಳೆ ಹಾನಿ, ಪ್ರಾಣ ಹಾನಿ ಮಾಡಿರುವ  ಒಂಟಿ ಸಲಗವನ್ನು ಸೆರೆ ಹಿಡಿಯಲು ಸರ್ಕಾರ ಒಪ್ಪಿಗೆ ನೀಡಿದ ತಕ್ಷಣ ಅರಣ್ಯ ಇಲಾಖೆ ಕಾರ್ಯಚಾರಣೆಗೆ ಇಳಿದರೂ ನೋ ಯೂಸ್, ಕಳೆದೊಂದು ವಾರದಿಂದಲೂ 9 ಸಾಕಾನೆಗಳ ಮೂಲಕ ನೂರಕ್ಕೂ ಹೆಚ್ಚು  ಸಿಬ್ಬಂದಿಗಳು, ಅರವಳಿಕೆ ತಜ್ಞರು ಕಾರ್ಯಚಾರಣೆ ನಡೆಸುತ್ತಿದ್ದು ಒಂಟಿ ಸಲಗ ಚಳ್ಳೆಹಣ್ಣು ತಿನ್ನಿಸುತ್ತಿದೆ. ಒಂಟಿ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿತ್ಯವೂ ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ..

Tap to resize

Latest Videos

undefined

9 ಸಾಕಾನೆಗಳಿಂದ ಕಾರ್ಯಚಾರಣೆ ನಡೆಸಿದರು ನೋ ಯೂಸ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಸಾರಗೋಡು, ಕೆಳಗೂರು, ಕುಂದೂರು ಮುಂತಾದ ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಮಾತ್ರವಲ್ಲ ಬೆಳೆದ ಬೆಳೆಗಳನ್ನೆಲ್ಲಾ ನಾಶ ಮಾಡ್ತಾ ಇದ್ದ ಆನೆಗಳು ಇದೀಗ ಜನರ ಪ್ರಾಣಕ್ಕೆ ಸಂಚಕಾರ ತರುತ್ತಿವೆ. ಜೊತೆಗೆ ಒಂಟಿ ಸಲಗವೊಂದು ಇಬ್ಬರನ್ನು ಈಗಾಗಲೇ ಬಲಿ ಪಡೆದುಕೊಂಡಿದೆ. ಈ ಒಂಟಿ ಸಲಗವನ್ನು ಸೆರೆ ಹಿಡಿಯಲು ಸರಕಾರ ಒಪ್ಪಿಗೆ ನೀಡಿದೆ. ಸರ್ಕಾರ ನೀಡಿದ ಅನುಮತಿ ಮೇರೆಗೆ ಒಂದು ವಾರದಿಂದ ಕಾರ್ಯಚಾರಣೆ ನಡೆಸಿದರೂ ಒಂಟಿ ಸಲಗ ಮಾತ್ರ ಸೆರೆಯಾಗುತ್ತಿಲ್ಲ , ಇದರಿಂದ ಕಾರ್ಯಾಚರಣೆಯು ಇದುವರೆಗೂ ಯಶಸ್ಸು ಕಂಡಿಲ್ಲ, ಕಳೆದ ಬುಧವಾರ ಬೆಳಗ್ಗೆ ಆಲ್ದೂರು ಸಮೀಪದ  ಹೆಡದಾಳು ಗ್ರಾಮದಲ್ಲಿ  ತೋಟದ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯನ್ನು ಕಾಡಾನೆ ದಾಳಿಮಾಡಿ ಸಾಯಿಸಿತ್ತು.ಅದೇ ದಿನ ಸಿಎಂ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸಿದ್ದರು. ಸಿಎಂ ಸೂಚನೆಯ ಮೇರೆಗೆ ಕಾಡಾನೆ ಹಿಡಿಯಲು ಅರಣ್ಯ ಇಲಾಖೆ ಆದೇಶ ಮಾಡಿತ್ತು.ಈ ಕಾಡಾನೆ ಸೆರೆಗಾಗಿ ಒಟ್ಟು ಒಂಬತ್ತು ಸಾಕಾನೆಗಳು ಆಗಮಿಸಿವೆ. ಮೂಡಿಗೆರೆ ತಾಲೂಕಿನ ತಳವಾರ ಸಮೀಪ ದೊಡ್ಡಳ್ಳ ಎಂಬಲ್ಲಿ ಆನೆ ಕ್ಯಾಂಪ್ ಹಾಕಿದ್ದು ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.

ರಾಜಕೀಯ ಬಿಟ್ಟು ಸುಮ್ಮನೆ ಕೂರುವೆ ಆದರೆ ಬೇರೆ ಪಕ್ಷ ಸೇರಲ್ಲ: ಸಿಟಿ ರವಿ

ಅಭಿಮನ್ಯು ಎಂಟ್ರಿ ಆದ್ರೂ ಪ್ರಯೋಜನವಿಲ್ಲ

ಮೂಡಿಗೆರೆ ತಾಲೂಕಿನ ಕುಂದೂರು ಸಮೀಪ ಅರಣ್ಯದಲ್ಲಿ ಒಂಟಿ ಸಲಗ ಇದೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಲ್ಲಿಂದ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಸತತ ಮೂರು ದಿನಗಳಿಂದ ಕುಂದೂರು, ಸಾರಗೋಡು, ಬಾಸ್ತಿ ಸುತ್ತಮುತ್ತ ನಡೆಸುತ್ತಿರುವ ಕಾರ್ಯಾಚರಣೆ ಇದುವರೆಗೂ ಯಶಸ್ವಿಯಾಗಿಲ್ಲ. ಇಂದು ಈ ಭಾಗದಲ್ಲಿರುವ ಇತರೆ ಕಾಡಾನೆಗಳು ಕಣ್ಣಿಗೆ ಬಿದ್ದಿದ್ದು, ಸೆರೆ ಹಿಡಿಯಲು ಗುರುತಿಸಿರುವ ನಿರ್ಧಿಷ್ಟ ಆನೆ ಪತ್ತೆಯಾಗಿಲ್ಲ ಎನ್ನಲಾಗಿದೆ.ನೂರಾರು ಅರಣ್ಯ ಸಿಬ್ಬಂದಿ ಒಂಬತ್ತು ಸಾಕಾನೆಗಳೊಂದಿಗೆ ಒಂಟಿ ಸಲಗವನ್ನು ಸೆರೆಹಿಡಿಯಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.ಆರಂಭದಲ್ಲಿ ಏಳು ಸಾಕಾನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿತ್ತು ಆದರೆ ಸೆರೆಹಿಡಿಯಬೇಕಾದ ಕಾಡಾನೆ ಸದೃಢವಾಗಿದ್ದು ಅದನ್ನು ಸೆರೆ ಹಿಡಿಯಲು ಅಭಿಮನ್ಯುವೇ ಆಗಬೇಕು ಎಂಬ ಹಿನ್ನೆಲೆಯಲ್ಲಿ ಕಾಡಾನೆ ಸೆರೆಯಲ್ಲಿ ಹೆಸರು ಮಾಡಿರುವ ಅಭಿಮನ್ಯು ಮತ್ತು ಮಹೇಂದ್ರ ಆನೆಗಳನ್ನು ನಾಗರಹೊಳೆಯಿಂದ ಕಾರ್ಯಾಚರಣೆಗೆ ಕರೆತರಲಾಗಿದೆ.ನಿಖರವಾಗಿ ಪತ್ತೆ ಹಚ್ಚುವ ಕೆಲಸ ನಿತ್ಯವೂ ನಡೆಯುತ್ತಿದ್ದರೂ ಪುಂಡಾನೆ ಸಂಚಾರಿಯಾಗಿರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.ಆನೆ ಕಾರ್ಯಪಡೆ (ಇಟಿಎಫ್) ತಂಡದ ಸದಸ್ಯರು ಆನೆಗಳನ್ನು ಹಿಂಬಾಲಿಸುತ್ತ ಯಾವುದೇ ಅವಘಡ ನಡೆಯದಂತೆ ಸಮೀಪದ ಗ್ರಾಮಗಳಿಗೆ ಆನೆ ಬಗ್ಗೆ ಸುದ್ದಿ ಮುಟ್ಟಿಸಿ ಎಚ್ಚರಿಸುತ್ತಿದ್ದಾರೆ.

ಒಟ್ಟಾರೆ 9 ಸಾಕಾನೆ, 100ಕ್ಕೂ ಹೆಚ್ಚು ಸಿಬ್ಬಂದಿಗಳು, ಅರವಳಿಕೆ ತಜ್ಞರಿಗೆ ಒಂಟಿ ಸಲಗ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇಬ್ಬರನ್ನು ಬಲಿ ಪಡೆದಿರುವ  ಒಂಟಿ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು ಅಭಿಮನ್ಯು ಎಂಟ್ರಿ ಆದ್ರೂ ಪ್ರಯೋಜನವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

click me!