Mandya: ಹೆದ್ದಾರಿಗೆ ಉರುಳುತ್ತಿರುವ ವಿದ್ಯುತ್‌ ಟವರ್‌ಗಳು: ಪ್ರಾಧಿಕಾರದವರ ಭಂಡತನ

By Kannadaprabha News  |  First Published Jul 26, 2023, 9:03 PM IST

ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್‌ ಟವರ್‌ಗಳು ಗಾಳಿಗೆ ಉರುಳಿ ಬೀಳಲಾರಂಭಿಸಿವೆ. ಇದರಿಂದ ಹೆದ್ದಾರಿ ಪ್ರಯಾಣಿಕರಿಗೆ ಕಂಟಕ ಎದುರಾಗಿದೆ. 


ಮಂಡ್ಯ ಮಂಜುನಾಥ್‌

ಮಂಡ್ಯ (ಜು.26): ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್‌ ಟವರ್‌ಗಳು ಗಾಳಿಗೆ ಉರುಳಿ ಬೀಳಲಾರಂಭಿಸಿವೆ. ಇದರಿಂದ ಹೆದ್ದಾರಿ ಪ್ರಯಾಣಿಕರಿಗೆ ಕಂಟಕ ಎದುರಾಗಿದೆ. 18ರಿಂದ 21 ಮೀಟರ್‌ ಎತ್ತರದ ವಿದ್ಯುತ್‌ ಟವರ್‌ಗಳ ಕಂಬಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೋಳು ಬೋಳಾಗಿರುವ ಟವರ್‌ಗಳು ದುರ್ಬಲಗೊಂಡಿವೆ. ಹೆದ್ದಾರಿ ಪ್ರಾಧಿಕಾರದವರು ಸುಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಿಲ್ಲ. ಟವರ್‌ಗಳನ್ನು ಯಥಾಸ್ಥಿತಿಗೆ ತರದೆ ಸೆಸ್ಕಾಂನವರು ಹಸ್ತಾಂತರ ಮಾಡಿಕೊಳ್ಳುತ್ತಿಲ್ಲ. ಇದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ 200 ಟವರ್‌ಗಳು ಮುರಿದು ಬೀಳುವ ಹಂತ ತಲುಪಿವೆ.

Tap to resize

Latest Videos

ಹೆದ್ದಾರಿ ಕಾಮಗಾರಿ ದೃಷ್ಟಿಯಿಂದ ವಿದ್ಯುತ್‌ ಟವರ್‌ಗಳನ್ನು ಸ್ಥಳಾಂತರಿಸಿ ನಂತರ ಸೆಸ್‌್ಕಗೆ ಹಸ್ತಾಂತರ ಮಾಡುವ ಜವಾಬ್ದಾರಿ ಹೊತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟವರ್‌ಗಳ ವಿನ್ಯಾಸ ಹಾಳಾಗಿ ಗಾಳಿಗೆ ನೆಲಕ್ಕುರುಳುತ್ತಿದ್ದರೂ ಅಪಾಯದ ಪರಿವೇ ಇಲ್ಲದೆ ಬೇಜವಾಬ್ದಾರಿತನ ತೋರುತ್ತಾ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಸಂಸದೆ ಸುಮಲತಾ ಅಂಬರೀಶ್‌, ಮೈಸೂರು ಸಂಸದ ಪ್ರತಾಪ್‌ ಸಿಂಹ, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸೆಸ್ಕಾಂ ಇಲಾಖೆ ಅಧಿಕಾರಿಗಳವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸಿ ಸೆಸ್ಕಾಂ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದ್ದರೂ ಭಂಡತನ ಪ್ರದರ್ಶಿಸುತ್ತಿರುವ ಬಗ್ಗೆ ತೀವ್ರ ಸ್ವರೂಪದ ಆರೋಪಗಳು ಕೇಳಿಬರುತ್ತಿವೆ.

ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳ

400 ಟವರ್‌ಗಳ ಸ್ಥಳಾಂತರ: ಜಿಲ್ಲೆಯೊಳಗೆ ದಶಪಥ ಹೆದ್ದಾರಿ ಹಾದುಹೋಗಿರುವ ಮದ್ದೂರು ಗಡಿಭಾಗ ನಿಡಘಟ್ಟದಿಂದ ಶ್ರೀರಂಗಪಟ್ಟಣದಿಂದ ಗಡಿಭಾಗದಿಂದ ಕಳಸ್ತವಾಡಿವರೆಗೆ 400 ವಿದ್ಯುತ್‌ ಟವರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ಅಕ್ಕ-ಪಕ್ಕದ ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ಮಾಡಲಾಗುತ್ತಿತ್ತು. ದಶಪಥ ಹೆದ್ದಾರಿ ಕಾಮಗಾರಿಗೆ ಅನುಕೂಲವಾಗುವಂತೆ ರಸ್ತೆ ಪಕ್ಕದಲ್ಲಿದ್ದ ಟವರ್‌ಗಳನ್ನು ಸ್ಥಳಾಂತರಿಸಲು ಹೆದ್ದಾರಿ ಪ್ರಾಧಿಕಾರದವರಿಗೆ ಅನುಮತಿ ನೀಡಲಾಗಿತ್ತು. ಹೀಗೆ ಅನುಮತಿ ನೀಡುವ ವೇಳೆ ವಿದ್ಯುತ್‌ ಟವರ್‌ಗಳ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಯಥಾಸ್ಥಿತಿಯಲ್ಲಿ ಸ್ಥಳಾಂತರಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಷರತ್ತನ್ನು ವಿಧಿಸಲಾಗಿತ್ತು.

ಟವರ್‌ಗಳಿಗೆ ಅಳವಡಿಸಿದ್ದ ಕಬ್ಬಿಣ ಕಳವು: ಹೆದ್ದಾರಿ ಪ್ರಾಧಿಕಾರದವರು ದಶಪಥ ಹೆದ್ದಾರಿ ನಿರ್ಮಾಣಕ್ಕೆ ಸ್ಥಳಾಂತರಿಸಿದ್ದ ಟವರ್‌ಗಳು 18 ಮೀಟರ್‌ನಿಂದ 21 ಮೀಟರ್‌ ಎತ್ತರದ್ದವಾಗಿವೆ. ರಾತ್ರಿ ವೇಳೆ ಟವರ್‌ಗಳ ಜೋಡಣಾ ಕಂಬಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು ಟವರ್‌ನ ಅರ್ಧಭಾಗದಷ್ಟುಜೋಡಣಾ ಕಂಬಿಗಳೇ ಇಲ್ಲದೆ ಖಾಲಿಯಾಗಿದೆ. ಟವರ್‌ಗಳ ವಿನ್ಯಾಸ ಬಹುತೇಕ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಟವರ್‌ಗಳನ್ನು ಸ್ಥಳಾಂತರ ಮಾಡಿದ ಬಳಿಕ ಪೆಟ್ರೋಲಿಂಗ್‌ ಮಾಡುವ ಮೂಲಕ ಜೋಡಣಾ ಕಬ್ಬಿಣಗಳು ಕಳುವಾಗದಂತೆ ಎಚ್ಚರ ವಹಿಸಬೇಕಿತ್ತು. ಅವರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದ ವಿದ್ಯುತ್‌ ಟವರ್‌ಗಳು ಬೋಳು ಬೋಳಾಗಿ ನಿಂತಿವೆ.

ನೆಲಕ್ಕುರುಳುತ್ತಿರುವ ಟವರ್‌ಗಳು: ವಿದ್ಯುತ್‌ ಟವರ್‌ಗಳು ಸುಭದ್ರವಾಗಿರುವಂತೆ ಅಳವಡಿಸಿದ್ದ ಜೋಡಣಾ ಕಂಬಿಗಳನ್ನು ಕಳ್ಳರು ಕದ್ದೊಯ್ದಿರುವುದರಿಂದ ಟವರ್‌ಗಳು ದುರ್ಬಲ ಸ್ಥಿತಿಯಲ್ಲಿವೆ. ಗಾಳಿಗೆ ನೆಲಕ್ಕುರುಳಲಾರಂಭಿಸಿವೆ. ಈಗಾಗಲೇ ಮದ್ದೂರಿನ ರುದ್ರಾಕ್ಷಿಪುರ, ಶ್ರೀರಂಗಪಟ್ಟಣದ ತೂಬಿನಕೆರೆ ಸೇರಿದಂತೆ ಹಲವೆಡೆ ನಾಲ್ಕೈದು ಟವರ್‌ಗಳು ಹೆದ್ದಾರಿ ರಸ್ತೆಗೆ ಉರುಳಿಬಿದ್ದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್‌ ಟವರ್‌ಗಳು ಉರುಳಿ ಬೀಳುತ್ತಿರುವುದು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಆತಂಕ ಸೃಷ್ಟಿಸಿದೆ. ಯಾವ ಸಮಯದಲ್ಲಿ ಎಲ್ಲಿ ಉರುಳಿಬೀಳುವುದೋ ಎಂಬ ಭಯ ಕಾಡುತ್ತಿದೆ. ಈಗಾಗಲೇ ನಾಲ್ಕೈದು ಟವರ್‌ಗಳು ರಸ್ತೆಗೆ ಉರುಳಿಬಿದ್ದಿದ್ದರೂ ಅವುಗಳನ್ನು ಸುಸ್ಥಿತಿಗೆ ತರದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂಬ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.

ಅಪಾಯದ ಸ್ಥಿತಿಯಲ್ಲಿ 200 ಟವರ್‌ಗಳು: ಒಟ್ಟು 400 ಟವರ್‌ಗಳ ಪೈಕಿ ಇದುವರೆಗೆ 200 ಟವರ್‌ಗಳನ್ನಷ್ಟೇ ಪ್ರಾಧಿಕಾರದ ಅಧಿಕಾರಿಗಳು ಸುಸ್ಥಿತಿಗೆ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆದ್ದಾರಿ ಉದ್ಘಾಟನೆಗೆ ಬರುವವರೆಗೆ ವೇಗಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದ ಅಧಿಕಾರಿಗಳು ಅವರು ಬಂದುಹೋದ ನಂತರ ನಮ್ಮ ಕೆಲಸವೆಲ್ಲಾ ಮುಗಿದೇಹೋಯಿತು ಎಂದು ಉದಾಸೀನವಾಗಿ ವರ್ತಿಸುತ್ತಿದ್ದಾರೆ. ಸೆಸ್ಕಾಂ ಇಲಾಖೆಯಿಂದ ಟವರ್‌ಗಳ ವಿನ್ಯಾಸವನ್ನು ಸರಿಪಡಿಸಿಕೊಡುವಂತೆ ಎಷ್ಟೇ ಮನವಿ ಸಲ್ಲಿಸಿದರೂ ಒಂದಕ್ಕೂ ಉತ್ತರ ನೀಡುತ್ತಿಲ್ಲ. ಕಾಮಗಾರಿಯನ್ನೂ ನಡೆಸುತ್ತಿಲ್ಲ ಎಂದು ಸೆಸ್ಕಾಂ ಇಲಾಖೆ ಅಧಿಕಾರಿಗಳು ದೂರಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಆರಂಭವಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಅಧೀಕ್ಷಕರವರೆಗೆ ವಿದ್ಯುತ್‌ ಟವರ್‌ಗಳ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರೂ ಗಂಭೀರವಾಗಿ ಪರಿಗಣಿಸಿಲ್ಲ. ಸಂಸದೆ ಸುಮಲತಾ ಅಂಬರೀಶ್‌ ಅವರು ದಿಶಾ ಸಭೆ ನಡೆಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೋಳಾಗಿ ನಿಂತಿರುವ ವಿದ್ಯುತ್‌ ಟವರ್‌ಗಳ ಸ್ಥಿತಿ ಬದಲಾಗಿಲ್ಲ.

ಪ್ರಾಧಿಕಾರದವರಿಂದ ದುರಸ್ತಿ ನಾಟಕ: ವಿದ್ಯುತ್‌ ಟವರ್‌ಗಳ ವಿನ್ಯಾಸವನ್ನು ಸರಿಪಡಿಸಿಕೊಡುವ ಕೆಲಸದಲ್ಲಿ ಹೆದ್ದಾರಿ ಪ್ರಾಧಿಕಾರದವರು ನಾಟಕವಾಡುವುದು ಸಾಮಾನ್ಯವಾಗಿದೆ. ವಿದ್ಯುತ್‌ ಟವರ್‌ಗಳು ಹಾಗೂ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಸಚಿವರು, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಿಗದಿಯಾದ ಸಮಯದಲ್ಲಿ ಏಳೆಂಟು ಜನರನ್ನು ಕಳುಹಿಸಿ ವಿದ್ಯುತ್‌ ಟವರ್‌ ಕಾಮಗಾರಿ ನಡೆಸುತ್ತಿರುವಂತೆ ಫೋಟೋ ತೆಗೆದು ಕಳುಹಿಸುವುದು ಸಾಮಾನ್ಯವಾಗಿದೆ. ಸಭೆಗಳಲ್ಲಿ ಅದೇ ಫೋಟೋ ತೋರಿಸಿ ಟವರ್‌ಗಳ ಕಾಮಗಾರಿ ನಡೆಸುತ್ತಿರುವಂತೆ ಬಿಂಬಿಸುತ್ತಿದ್ದಾರೆ. ನಂತರದಲ್ಲಿ ಟವರ್‌ಗಳ ಬಗ್ಗೆಯಾರೊಬ್ಬರೂ ತಿರುಗಿನೋಡುವುದಿಲ್ಲ ಎಂಬುದು ಸೆಸ್ಕಾಂನವರ ಆರೋಪವಾಗಿದೆ.

ಟವರ್‌ಗಳ ಹಸ್ತಾಂತರಕ್ಕೆ ಬಲವಂತ: ವಿದ್ಯುತ್‌ ಟವರ್‌ಗಳ ಮೂಲ ಸ್ವರೂಪವನ್ನು ಹಾಳು ಮಾಡಿ ಬೋಳಾಗಿರುವ ಟವರ್‌ಗಳನ್ನು ಹಸ್ತಾಂತರಿಸಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸೆಸ್ಕಾಂ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್‌ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲೂ ವಿಷಯ ಚರ್ಚೆಗೆ ಬಂದಿತು. ಆಗ ಸೆಸ್ಕಾಂ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಬರೆದಿರುವ ಪತ್ರಗಳು, ಮೇಲಧಿಕಾರಿಗಳಿಗೆ ಬರೆದಿರುವ ಪತ್ರಗಳಿಗೆ ಉತ್ತರ ಬಾರದಿರುವುದನ್ನು ಗಮನಕ್ಕೆ ತಂದರು. ಆ ಸಮಯದಲ್ಲಿ ಟವರ್‌ಗಳನ್ನು ಸುಸ್ಥಿತಿಗೆ ತರದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪೊಲೀಸ್‌ ದೂರು ದಾಖಲಿಸುವಂತೆಯೂ ಸೂಚಿಸಿದ್ದರು.

ವೆಚ್ಚ ಅಧಿಕವಾಗಲಿದೆ ಎಂಬ ಕಾರಣ: ಹಾಳಾಗಿರುವ ವಿದ್ಯುತ್‌ ಟವರ್‌ಗಳ ವಿನ್ಯಾಸವನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾದರೆ ವೆಚ್ಚ ಅಧಿಕವಾಗುವುದೆಂಬ ಭಯ ಹೆದ್ದಾರಿ ಪ್ರಾಧಿಕಾರದವರದ್ದಾಗಿದೆ. ಹಾಗಾಗಿ ಈಗ ಯಾವ ಸ್ಥಿತಿಯಲ್ಲಿವೆಯೋ ಹಾಗೆಯೇ ಹಸ್ತಾಂತರ ಮಾಡಿಕೊಳ್ಳುವಂತೆ ಸೆಸ್ಕಾಂ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಇದಕ್ಕೆ ಯಾರೂ ಒಪ್ಪಿಗೆ ಸೂಚಿಸುತ್ತಿಲ್ಲ. ವಿದ್ಯುತ್‌ ಟವರ್‌ಗಳು ಉರುಳಿ ಬೀಳುತ್ತಿರುವ ಸಂಬಂಧ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಶ್ರೀರಂಗಪಟ್ಟಣ ಶಾಸಕರು ಸೇರಿದಂತೆ ಸೆಸ್ಕಾಂ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದವರ ಗಮನಸೆಳೆದಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ: ಶಾಸಕ ನಂಜೇಗೌಡ

ವಿದ್ಯುತ್‌ ಟವರ್‌ಗಳು ದುರ್ಬಲ ಸ್ಥಿತಿಯಲ್ಲಿರುವುದನ್ನು ಕಂಡೂ ಅವುಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರದವರು ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರ ಉಡಾಫೆ, ದಿವ್ಯನಿರ್ಲಕ್ಷ್ಯದಿಂದ ಹೆದ್ದಾರಿ ಪ್ರಯಾಣಿಕರಿಗೆ ಆಪತ್ತು ಎದುರಾದರೆ ಯಾರು ಹೊಣೆ. ಕೂಡಲೇ ದುರ್ಬಲ ಸ್ಥಿತಿಯಲ್ಲಿರುವ ವಿದ್ಯುತ್‌ ಟವರ್‌ಗಳನ್ನು ಸುಸ್ಥಿತಿಗೆ ತರಬೇಕು. ಇಲ್ಲದಿದ್ದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು.
-ದಿನೇಶ್‌ ಗೂಳಿಗೌಡ, ವಿಧಾನ ಪರಿಷತ್‌ ಸದಸ್ಯ

click me!