ಬೆಳೆಹಾನಿ ನೋಡುವಂತೆ ಮನವಿ, ಮಹಿಳೆಯ ಕಡೆಗೆ ತಿರುಗಿಯೂ ನೋಡದೆ ಹೋದ ಸಚಿವ ಬೋಸರಾಜ್

By Suvarna News  |  First Published Jul 26, 2023, 8:04 PM IST

ಕೊಡಗು ಅಧಿಕಾರಿಗಳು ರೂಪಿಸಿದ್ದ ರೂಟ್ ಪ್ಲಾನ್ ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಹೇಳಿದಂತೆ ಪ್ಲಾನಿನಲ್ಲಿ ಇಲ್ಲದಿದ್ದ ಊರುಗಳಿಗೆ ಹೋದ ಸಣ್ಣ ನೀರಾವರಿ ಸಚಿವ ಬೋಸರಾಜ್.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜು.26): ಕೊಡಗು ಜಿಲ್ಲೆಯಾದ್ಯಂತ ಪುಷ್ಯ ಮಳೆ ಅಬ್ಬರಿಸಿದ್ದು ಎಲ್ಲೆಡೆ ಪ್ರವಾಹದಿಂದಾಗಿ ಬೆಳೆನಷ್ಟದ ಜೊತೆಗೆ ಜನಜೀವನವೂ ಅಸ್ತವ್ಯಸ್ತವಾಗಿದೆ. ಹೀಗಾಗಿ ಕೊಡಗು ಉಸ್ತುವಾರಿ,  ಸಣ್ಣ ನೀರಾವರಿ ಸಚಿವ ಬೋಸರಾಜ್ ಮಳೆಹಾನಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಬೇಕಾಗಿತ್ತು. ಆದರೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹೇಳಿದಂತೆಲ್ಲಾ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿದ್ದಕ್ಕೇ ಸೀಮಿತವಾಗಿತ್ತು. 

Tap to resize

Latest Videos

undefined

ಬುಧವಾರ ಮಡಿಕೇರಿ ವಿಧಾನಸಭಾ ಕ್ಷೇತ್ರ ವಿವಿಧ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಸ್ವತಃ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಎಸ್ಪಿ ಕೆ.ರಾಮರಾಜನ್ ಅವರು ಪ್ರವಾಸದ ಯೋಜನೆ ರೂಪಿಸಿದ್ದರು. ಬೆಳಿಗ್ಗೆ ಮಡಿಕೇರಿಯಲ್ಲಿ ನಡೆದ ಕಾರ್ಗಿಲ್ ವಿಯೋತ್ಸವದಲ್ಲಿ ಭಾಗವಹಿಸಿದ್ದ ಭೋಸರಾಜ್ ನಂತರ ಮಳೆಹಾನಿ ಪ್ರದೇಶಗಳಿಗೆ ಹೊರಟ ಸಚಿವರು, ಅಧಿಕಾರಿಗಳು ರೂಪಿಸಿದ್ದ ರೂಟ್ ಪ್ಲಾನ್ ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಹೇಳಿದಂತೆ ಪ್ಲಾನಿನಲ್ಲಿ ಇಲ್ಲದಿದ್ದ ಊರುಗಳಿಗೆ ಹೋದರು. ಹೀಗಾಗಿ ಸಚಿವರ ತಮ್ಮೂರಿಗೆ ಬರುತ್ತಾರೆ, ನಮ್ಮ ಸಮಸ್ಯೆ ಆಲಿಸುತ್ತಾರೆ ಎಂದು ಕಾದಿದ್ದ ಜನರು ನಿರಾಸೆಗೆ ಒಳಗಾದರು.

ಅಧಿಕಾರಿಗಳೇ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಕೇಳಿ, ಸರಕಾರದ ನೆರವು ತಲುಪಿಸಿ: ಸಚಿವ ಸಂತೋಷ ಲಾಡ್ ಆದೇಶ

 ಮುಂದಿನ ಮಳೆಹಾನಿ ಪ್ರದೇಶಕ್ಕೆ ಉಸ್ತುವಾರಿ ಸಚಿವರ ಕರೆದು ಹೋಗಲು ಅಧಿಕಾರಿಗಳು ಸಿದ್ಧವಾಗುತ್ತಿದ್ದರೆ, ಕನಿಷ್ಠ ಜಿಲ್ಲಾಧಿಕಾರಿಗಳಿಗೂ ಹೇಳದಂತೆ ಉಸ್ತುವಾರಿ ಸಚಿವರನ್ನು ಶಾಸಕ ಮಂತರ್ ಗೌಡ ತಮ್ಮ ಕಾರ್ಯಕರ್ತರು ಹೇಳಿದಂತೆ ಬೇರೆಯದೇ ಊರಿಗೆ ಕರೆದೊಯ್ಯತ್ತಿದ್ದರು. ಇದು ಕನಿಷ್ಠ ಎಸ್ಕಾರ್ಟ್ ಕೊಡುತ್ತಿದ್ದ ಪೊಲೀಸರಿಗೂ ಗೊತ್ತಾಗದೆ ಎಷ್ಟೋ ದೂರು ಮುಂದೆ ಹೋಗಿ ಎಸ್ಕಾರ್ಟ್ ವಾಹನಗಳನ್ನು ತಿರುಗಿಸಿಕೊಂಡು ಮತ್ತೆ ವಾಪಸ್ ಸಚಿವರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಾಹನಗಳ ಹಿಂದೆ ಹೋಗುತ್ತಿದ್ದರು. ಇದು ಒಂದೆರಡು ಬಾರಿ ನಡೆದ ಕಥೆಯಲ್ಲ. ಬುಧವಾರ ಇಡೀ ದಿನ ಇಂತಹದ್ದೇ ರೀತಿಯ ಸಮಸ್ಯೆಯಿಂದ ಅಧಿಕಾರಿಗಳು ಕೂಡ ತೀರ ಪರದಾಟಬೇಕಾಯಿತು. 

ಇನ್ನು ಮಡಿಕೇರಿ ತಾಲ್ಲೂಕಿನ ಮೂರ್ನಾಡು ಮಾರ್ಗದಿಂದ ಬೊಳಿಬಾಣೆಯಲ್ಲಿ ಸೃಷ್ಟಿಯಾಗಿದ್ದ ಪ್ರವಾಹದ ಪರಿಸ್ಥಿತಿಯನ್ನು ವೀಕ್ಷಿಸಲು ಹೊದವಾಡದ ಮೂಲಕ ಹೋಗುತ್ತಿದ್ದರು.  ಈ ಮಾರ್ಗದಲ್ಲಿ ರೈತರೊಬ್ಬರು ಬೆಳೆದಿದ್ದ ಬಾಳೆಬೆಳೆ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿತ್ತು. ಇದನ್ನು ತೋರಿಸಲು ರೈತ ಮಹಿಳೆ ರಸ್ತೆಯಲ್ಲೇ ನಿಂತು ಸಚಿವರ ಕಾರಿಗೆ ಕೈತೋರಿಸಿ ನಿಲ್ಲಿಸಲು ಯತ್ನಿಸಿದರು. ಜೊತೆಗೆ ಇದೇ ಸ್ಥಳದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಎಸ್ಪಿ ರಾಮರಾಜನ್ ಕಾರಿನಿಂದ ಇಳಿದು ಸಚಿವರಿಗೆ ಅದನ್ನು ತೋರಿಸಲು ಯತ್ನಿಸಿದರು. ಆದರೂ ಸಚಿವರು ಮಾತ್ರ ನಿಲ್ಲಲೇ ಇಲ್ಲ. ಬದಲಾಗಿ ನೇರವಾಗಿ ನಾಪೋಕ್ಲಿಗೆ ಹೋಗಿ ಕಾರ್ಯಕರ್ತರೊಂದಿಗೆ ಊಟ ಮುಗಿಸಿದರು. ಊಟದ ಬಳಿಕ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರೊಂದಿಗೆ ವಿರಾಜಪೇಟೆ ವಿಧಾನ ಕ್ಷೇತ್ರದ ಕೆಲವು ಕಡೆಗಳಲ್ಲಿ ಆಗಿರುವ ಮಳೆಹಾನಿ ಪ್ರದೇಶಗಳನ್ನು ಸಚಿವ ಬೋಸರಾಜ್ ವೀಕ್ಷಿಸಿದ್ದಾರೆ.

ವಿದ್ಯಾರ್ಥಿನಿಯರ ಆಶ್ಲೀಲ ವೀಡಿಯೋ ಪ್ರಕರಣ, ಸಮಗ್ರ ತನಿಖೆ ಸಿಟಿ ರವಿ ಒತ್ತಾಯ

ತಾವು ಕೇಳಿಕೊಂಡರೂ ತಮ್ಮ ಬೆಳೆಹಾನಿಯನ್ನು ವೀಕ್ಷಿಸದೇ ಇದ್ದಿದ್ದರಿಂದ ಬೇಸರಗೊಂಡ ರೈತ ಮಹಿಳೆ ನಮ್ಮ ನೋವನ್ನು ಸಚಿವರ ಬಳಿ ಹೇಳಿಕೊಳ್ಳೋಣ ಎಂದುಕೊಂಡಿದ್ದೆವು. ಆದರೆ ಸಚಿವರು ನಿಲ್ಲಿಸಲು ಪ್ರಯತ್ನಿಸಲಿದರೂ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಸಚಿವರ ಮಳೆಹಾನಿ ಪ್ರವಾಸವನ್ನು ನಿಭಾಯಿಸುವುದೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರೆ ಅಧಿಕಾರಿಗಳಿಗೆ ಸಾಕು ಸಾಕಾಗಿ ಹೋಗಿದ್ದಂತು ಸತ್ಯ. ಇತ್ತ ಉಸ್ತುವಾರಿ ಸಚಿವರು ಭೇಟಿ ನೀಡಿ ತಮ್ಮ ಸಮಸ್ಯೆಗೆ ಸ್ಪಂದಿಸುವುದಾಗಿ ಕಾಯುತ್ತಿದ್ದ ಸಾಕಷ್ಟು ರೈತರು, ಜನಸಾಮಾನ್ಯರು ಕಾದು ಕೊನೆಗೆ ಸಚಿವರಿಗೆ, ಶಾಸಕರಿಗೆ ಶಪಿಸಿಕೊಂಡು ಹೋಗಿದ್ದು ಸಾಮಾನ್ಯವಾಗಿತ್ತು. 

click me!