ಮುಂಗಾರು ಮಳೆ ವೈಫಲ್ಯದಿಂದ ಕಳೆಗುಂದಿದ್ದ ಕೆಆರ್‌ಎಸ್ ಜಲಾಶಯ ಇದೀಗ ಮೈದುಂಬಿಕೊಳ್ಳಲಾರಂಭಿಸಿದೆ. ಕೊಡಗು ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿರುವುದರಿಂದ ಕಾವೇರಿ ನದಿ ಧುಮ್ಮಿಕ್ಕಿ ಹರಿಯುತ್ತಿದ್ದು, ಪರಿಣಾಮ ಜಲಾಶಯದ ಒಡಲು ತುಂಬಿಕೊಳ್ಳುತ್ತಿದೆ.
ಮಂಡ್ಯ (ಜು.26): ಮುಂಗಾರು ಮಳೆ ವೈಫಲ್ಯದಿಂದ ಕಳೆಗುಂದಿದ್ದ ಕೆಆರ್‌ಎಸ್ ಜಲಾಶಯ ಇದೀಗ ಮೈದುಂಬಿಕೊಳ್ಳಲಾರಂಭಿಸಿದೆ. ಕೊಡಗು ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿರುವುದರಿಂದ ಕಾವೇರಿ ನದಿ ಧುಮ್ಮಿಕ್ಕಿ ಹರಿಯುತ್ತಿದ್ದು, ಪರಿಣಾಮ ಜಲಾಶಯದ ಒಡಲು ತುಂಬಿಕೊಳ್ಳುತ್ತಿದೆ. ಐದು ದಿನದಲ್ಲಿ ಅಣೆಕಟ್ಟೆಗೆ 10 ಅಡಿ ನೀರು ಸಂಗ್ರಹವಾಗಿದೆ. ಮಂಗಳವಾರ ಬೆಳಗ್ಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ100 ಅಡಿಗೆ ತಲುಪಿದ್ದು, ಅಣೆಕಟ್ಟೆಯಲ್ಲಿ 48,025 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಅಣೆಕಟ್ಟೆಯಿಂದ ಹೊರಕ್ಕೆ 5449 ಕ್ಯುಸೆಕ್ ನೀರನ್ನು ಹರಿಯಬಿಡಲಾಗುತ್ತಿತ್ತು.
ಹಾಲಿ ಜಲಾಶಯದಲ್ಲಿ 22.089 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 124.68 ಅಡಿ ನೀರು ದಾಖಲಾಗಿದ್ದು, ಅಂದು ಅಣೆಕಟ್ಟೆಗೆ 13828 ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಆ ಸಮಯದಲ್ಲಿ ಅಣೆಕಟ್ಟೆಯಿಂದ 12030 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಅಣೆಕಟ್ಟೆಯಲ್ಲಿ 49.284 ಟಿಎಂಸಿ ಅಡಿಯಷ್ಟುನೀರು ಸಂಗ್ರಹವಾಗಿತ್ತು.
ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ: ಶಾಸಕ ನಂಜೇಗೌಡ
ಅಣೆಕಟ್ಟೆಗೆ 10 ಅಡಿ ನೀರು: ಕಳೆದ ಐದು ದಿನಗಳಲ್ಲಿ ಅಣೆಕಟ್ಟೆಗೆ 12 ಅಡಿ ನೀರು ಹರಿದುಬಂದಿದೆ. ಜು.20ರಂದು 2235 ಕ್ಯುಸೆಕ್ ಒಳಹರಿವಿದ್ದು, ನೀರಿನ ಮಟ್ಟ90.25 ಅಡಿ ದಾಖಲಾಗಿತ್ತು. ಜು.21ರಂದು 2276 ಕ್ಯುಸೆಕ್ ಒಳ ಹರಿವಿನೊಂದಿಗೆ 90.42 ಅಡಿಗೆ ಏರಿಕೆ ಕಂಡಿತು. ಜು.22ರಂದು ಒಳಹರಿವಿನ ಪ್ರಮಾಣ 7914 ಕ್ಯುಸೆಕ್ ಏರಿಕೆಯಾಗಿ 91.50 ಅಡಿ ತಲುಪಿತು. ಜು.23ರಂದು 16848 ಕ್ಯುಸೆಕ್ ಒಳಹರಿವು ದಾಖಲಾಗಿ ನೀರಿನ ಮಟ್ಟ92.60 ಅಡಿಗೆ ಏರಿದರೆ, ಜು.24ರಂದು 29,552 ಕ್ಯುಸೆಕ್ ಒಳ ಹರಿವಿನೊಂದಿಗೆ 95 ಅಡಿಗೆ ಹೆಚ್ಚಳವಾಯಿತು.
ಅಂದು ರಾತ್ರಿ ವೇಳೆಗೆ 44436 ಕ್ಯುಸೆಕ್‌ಗೆ ಒಳಹರಿವು ಹೆಚ್ಚಾಯಿತು. ಇದರೊಂದಿಗೆ ನೀರಿನ ಮಟ್ಟ97.50 ಅಡಿಗೆ ಏರಿತು. ಮಂಗಳವಾರ ಬೆಳಗ್ಗೆ 48025 ಕ್ಯುಸೆಕ್ ಒಳಹರಿವು ದಾಖಲಾಗಿ ಜಲಾಶಯದ ನೀರಿನ ಮಟ್ಟ100 ಅಡಿ ತಲುಪಿತು. ಕೊಡಗಿನಲ್ಲಿ ಇದೇ ರೀತಿ ಇನ್ನಷ್ಟುದಿನಗಳವರೆಗೆ ಮಳೆ ಮುಂದುವರೆದರೆ ಕೆಆರ್‌ಎಸ್ ಜಲಾಶಯಕ್ಕೆ ಇನ್ನೂ ಹೆಚ್ಚಿನ ಒಳಹರಿವು ದಾಖಲಾಗಿ ನೀರಿನ ಮಟ್ಟದಲ್ಲಿ ಮತ್ತಷ್ಟುಏರಿಕೆಯಾಗುವ ಸಾಧ್ಯತೆಗಳಿವೆ.
ರೈತರ ಮೊಗದಲ್ಲಿ ಸಂತಸ: ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯ ರೈತರು ತೀವ್ರ ಆತಂಕಗೊಂಡಿದ್ದರು. ಕೆಆರ್‌ಎಸ್ ಜಲಾಶಯದಲ್ಲೂ ನೀರಿನ ಮಟ್ಟಕುಸಿದಿದ್ದರಿಂದ ಬೆಳೆ ಬೆಳೆಯಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಕೃಷಿ ಸಚಿವರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೊಸ ಬೆಳೆ ಬೆಳೆಯದಂತೆ ರೈತರಲ್ಲಿ ಮನವಿಯನ್ನೂ ಮಾಡಿದ್ದರು. ಜಲಾಶಯದ ನೀರಿನ ಮಟ್ಟಜುಲೈ ಮೊದಲ ವಾರದಲ್ಲಿ 78 ಅಡಿಗೆ ತಲುಪಿದ್ದರಿಂದ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯೂ ಹುಸಿಯಾಗಿತ್ತು. ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಬೇಸಿಗೆ ಬೆಳೆಗೆ ಕಟ್ಟುಪದ್ಧತಿಯಲ್ಲಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ 3 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಗೊಂಡಿತ್ತು.
ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳ
ಆನಂತರದಲ್ಲಿ ಕೊಡಗಿನಲ್ಲಿ ಮುಂಗಾರು ಚುರುಕು ಪಡೆದುಕೊಂಡಿದ್ದರಿಂದ ಅಲ್ಪಪ್ರಮಾಣದ ಒಳಹರಿವು ದಾಖಲಾಗುತ್ತಾ ಜಲಾಶಯದ ನೀರಿನ ಮಟ್ಟಮಂದಗತಿಯಲ್ಲಿ ಏರಿಕೆಯಾಗುತ್ತಿತ್ತು. ಕಳೆದ ಐದು ದಿನಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ದಾಖಲಾಗಲು ಕಾರಣವಾಗಿದೆ. ಕೆಆರ್‌ಎಸ್ ಅಣೆಕಟ್ಟು ದಿನೇ ದಿನೇ ಮೈದುಂಬಿಕೊಳ್ಳುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಬೆಳೆಗಳಿಗೆ ನೀರು ಸಿಗುವ ಆಶಾಭಾವನೆ ಮೂಡುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಸನ್ನದ್ಧರಾಗುತ್ತಿದ್ದಾರೆ. ರೈತರ ಮೊರೆಗೆ ಓಗೊಟ್ಟವರುಣ ದೇವ ವರ್ಷಧಾರೆಯೊಂದಿಗೆ ಕೃಪೆ ತೋರಿದ್ದು ಈ ಬಾರಿಯೂ ಜಲಾಶಯ ಭರ್ತಿಯಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.