ವಿರಾಜಪೇಟೆ (ಜು.23|: ಮಳೆಗಾಲ ಆರಂಭದಿಂದ ಮಳೆಗಾಲದ ಅಂತ್ಯವಾಗುವವರೆಗೆ ಗಾಳಿ ಮಳೆ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿರುವ ವಿದ್ಯುತ್ ಇಲಾಖೆಯ ಸಿಬ್ಬಂದಿಯು ಎನ್‌ಡಿಆರ್‌ಎಫ್ ತಂಡದ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ, ಕಳೆದ 2 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕೆದಮುಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಮರು ಸಂಪರ್ಕ ಕಲ್ಪಿಸಿದ್ದಾರೆ.
ವಿರಾಜಪೇಟೆ(Virajpete) ಕೆದಮುಳ್ಳೂರು(Kedamullooru) 11 ಕೆ.ವಿ ಲೈನ್ (ಪಾಲಂಗಾಲ ಫೀಡರ್)ನಲ್ಲಿ ದೋಷ ಕಂಡಿತ್ತು. ಸತತ ಮೂರು ದಿನಗಳಿಂದ ಕೆದಮುಳ್ಳೂರು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮವೇ ಕತ್ತಲಿನಲ್ಲಿತ್ತು. ಎನ್‌ಡಿಆರ್‌ಎಫ್ ತಂಡ(NDRF Team) ಮತ್ತು ಇಲಾಖಾ ಸಿಬ್ಬಂದಿ ಎರಡು ದಿನಗಳ ಕಾರ್ಯಾಚರಣೆಯ ಫಲವಾಗಿ ವಿದ್ಯುತ್ ಮರು ಸಂಪರ್ಕ ಲಭಿಸಿದೆ.
ವಿದ್ಯುತ್ ಕಡಿತ; ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 3 ಕೊರೊನಾ ಸೋಂಕಿತರು ಸಾವು!
ಪಾಲಂಗಾಲ ಬೇಟೋಳಿ ಮಾರ್ಗವಾಗಿ ಸಾಗುವ ವಿದ್ಯುತ್ ಲೈನ್ ಕಿರುಹೊಳೆ ಕೊಟ್ಟೋಳಿ ಭಾಗದ ಪಟ್ಟಡ ದೇವಯ್ಯ ಅವರ ಗದ್ದೆಯ ಸಮೀಪ ಕಿರು ಹೊಳೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗೆ ಬಿದಿರಿನ ಪೊದೆ ಬಿದ್ದ ಪರಿಣಾ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು. ಬಿದಿರಿನ ಪೊದೆಯನ್ನು ತೆರವುಗೊಳಿಸಲು ಕಷ್ಟಸಾಧ್ಯವಾದ ಕಾರಣ ವಿದ್ಯುತ್ ಇಲಾಖೆಯು ಅಗ್ನಿ ಶಾಮಕ ದಳದವನ್ನು ಸಂಪರ್ಕಿಸಿತ್ತು. ಅಗ್ನಿ ಶಾಮಕ ದಳವದವರು ಸ್ಥಳಕ್ಕೆ ಆಗಮಿಸಿದರೂ ಕಾರ್ಯಾಚರಣೆ ನಡೆಸಲಾಗದೆ ವಾಪಸ್ ಹೋಗಿದ್ದರು.
ವಿರಾಜಪೇಟೆ ಸಹಾಯಕ ಕಾರ್ಯಪಾಲ ಅಭಿಯಂತರರಾದ ಪಿ.ಎಸ್. ಸುರೇಶ್ ಕುಮಾರ್ ಅವರು ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿಷಯವವನ್ನು ಪ್ರಸ್ತಾವಿಸಿದ್ದರು. ಜಿಲ್ಲಾಧಿಕಾರಿಗಳು ತಕ್ಷಣವೇ ಎನ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಿದರು. ಎನ್‌ಡಿಆರ್‌ಎಫ್ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಮುಂದವರೆಸಿದರು. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಕಾಯಾಚರಣೆ ನಡೆಸಿ, ಕತ್ತಲು ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಮಡಿಕೇರಿ ಶಿಬಿರಕ್ಕೆ ತೆರಳಿದ್ದರು. ಮರು ದಿನ ಬೆಳಗ್ಗೆ 9 ಗಂಟೆಯಿಂದ ವಿದ್ಯುತ್ ಇಲಾಖೆಯ ಮೂವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗಿಳಿದ ಎನ್‌ಡಿಆರ್‌ಎಫ್ ತಂಡದವರು, ವಿಶಾಲವಾಗಿ ಹರಿಯುತ್ತಿದ್ದ ಕಿರು ಹೊಳೆಯಲ್ಲಿ ಬಿದಿರಿನ ಪೊದೆಗಳನ್ನು ಕಟಾವುಗೊಳಿಸಿದರು. ಸತತ 6 ಗಂಟೆಗಳ ಕಾರ್ಯಾಚರಣೆಯ ಮೂಲಕ ವಿದ್ಯುತ್ ತಂತಿಗಳ ಮೇಲೆ ಅಡ್ಡಲಾಗಿ ಬಿದ್ದಿದ್ದ ಬಿದಿರನ್ನೆಲ್ಲ ತೆರವು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಯಶಸ್ವಿಯಾದರು.
ಮೇಣದ ಬತ್ತಿ, ಸೆಲ್‌ಫೋನ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ಎನ್.ಡಿ.ಆರ್.ಎಫ್ ತಂಡದ ಉಪ ನಿರೀಕ್ಷಕರಾದ ಶಾಂತಿಲಾಲ್ ಜಾಟೀಯ,ಸಹಾಯಕ ಅಭಿಯಂತರ ಸಿ.ಬಿ. ದೇವಯ್ಯ ಪವರ್ ಮ್ಯಾನ್ ಗಳಾದ ಮಂಜುನಾಥ್ ಪಟ್ಟದ್, ಹನುಮಂತ್, ನಿಂಗನ ಗೌಡ ಪಾಟೀಲ ವಿದ್ಯುತ್ ಗುತ್ತಿಗೆದಾರರಾದ ಭರತ್ ಕುಮಾರ್ ಪೂಜಾರಿ, ಗದ್ದೆಯ ಮಾಲೀಕರಾದ ಪಟ್ಟಡ ದೇವಯ್ಯ ಎನ್.ಡಿ.ಆರ್.ಎಫ್ ತಂಡದ 20 ಮಂದಿ ಸಿಬ್ಬಂದಿಗಳು ಗ್ರಾಮಸ್ಥರು ಕಾರ್ಯಚರಣೆಯಲ್ಲಿ ಭಾಗಿಗಳಾದರು.
ಕೆದಮುಳ್ಳೂರು ಕಾಳಜಿ ಕೇಂದ್ರ ಸೇರಿದಂತೆ ಕೆದಮುಳ್ಳೂರು, ಪಾಲಂಗಾಲ, ಕೊಟ್ಟೋಳಿ, ಗುಂಡಿಕೆರೆ ತೋಮರ ಭಾಗಗಳಲ್ಲಿ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನದಿಯ ಪಾತ್ರದಲ್ಲಿ ವಿದ್ಯುತ್ ತಂತಿಯ ಮೇಲೆ ಬಿದಿರೊಂದು ಅಡ್ಡಲಾಗಿ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಎನ್‌ಡಿಆರ್‌ಎಫ್ ತಂಡ ಮತ್ತು ಇಲಾಖೆಯ ಸಿಬ್ಬಂದಿಯ ಎರಡು ದಿನಗಳ ಪರಿಶ್ರಮದಿಂದಾಗಿ ಗ್ರಾಮಕ್ಕೆ ವಿದ್ಯುತ್ ಮರು ಸರಬರಾಜು ಮಾಡಲು ಸಾಧ್ಯವಾಯಿತು. ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಇಲಾಖೆಯ ವತಿಯಿಂದ ಅಭಿನಂದನೆ ಹೇಳುತæೕನೆ
- ಪಿ.ಎಸ್. ಸುರೇಶ್ ಕುಮಾರ್, ಸಹಾಯಕ ಕಾರ್ಯಪಾಲ ಅಭಿಯಂತರ, ವಿರಾಜಪೇಟೆ, ಚೆಸ್ಕಾಂ
- ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಮಧ್ಯಾಹ್ನ 3 ಗಂಟೆಗೆ ತೆರಳಿ ಕಾರ್ಯಾಚರಣೆಗೆ ಮುಂದಾದೆವು. ಸಂಜೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಶಿಬಿರಕ್ಕೆ ಹಿಂದಿರುಗಿದೆವು. ಮರು ದಿನ ಬೆಳಗ್ಗಿನಿಂದಲೇ ಕಾರ್ಯಾಚರಣೆಗೆ ಆರಂಭವಾಯಿತು. ಚೆಸ್ಕಾಂ ಇಲಾಖೆ ಅಭಿಯಂತರರಾದ ಸುರೇಶ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯ ಸಹಕಾರದಿಂದ ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಬಿದಿರನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
- ರಾಂಬಟ್, ಎನ್‌ಡಿಆರ್‌ಎಫ್ ತಂಡದ ಮಖ್ಯಾಧಿಕಾರಿ