ಶಹಾಪುರ: ಸಾವಿಗೆ ಆಹ್ವಾನ ನೀಡುತ್ತಿರುವ ವಿದ್ಯುತ್‌ ಕಂಬ

By Kannadaprabha News  |  First Published Jul 8, 2023, 9:23 PM IST

ಜೋರಾಗಿ ಗಾಳಿ ಬೀಸಿದರೆ ಸಾಕು ಯಾವ ಕ್ಷಣದಲ್ಲಿ ಕಂಬಗಳು ಬಿದ್ದು ಬಲಿ ತೆಗೆದುಕೊಳ್ಳುತ್ತವೆ ಎನ್ನುವ ಆತಂಕದಲ್ಲಿ ಹೆಜ್ಜೆ ಇಡುವಂತಾಗಿದೆ. ಈ ಕಂಬಗಳು ಅಪಾಯದ ಮುನ್ಸೂಚನೆ ನೀಡುತ್ತಿವೆ. ಅಪಘಾತ ಸಂಭವಿಸುವ ಮುನ್ನ ಅದನ್ನು ತೆರವುಗೊಳಿಸಿ ಹೊಸ ವಿದ್ಯುತ್‌ ಕಂಬ ಜೋಡಿಸುವಂತೆ ಗ್ರಾಮಸ್ಥ ಆಗ್ರಹ.


ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಜು.08):  ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ಕಂಬಗಳ ಮಧ್ಯಭಾಗ, ತಳಭಾಗದಲ್ಲಿನ ಕಂಬಿಗಳು ತುಕ್ಕುಹಿಡಿದಿವೆ. ಜನರು ರಸ್ತೆಯಲ್ಲಿ ಜೀವ ಭಯದಲ್ಲೇ ಓಡಾಡಬೇಕಿದೆ. ಜೋರಾಗಿ ಗಾಳಿ ಬೀಸಿದರೆ ಸಾಕು ಯಾವ ಕ್ಷಣದಲ್ಲಿ ಕಂಬಗಳು ಬಿದ್ದು ಬಲಿ ತೆಗೆದುಕೊಳ್ಳುತ್ತವೆ ಎನ್ನುವ ಆತಂಕದಲ್ಲಿ ಹೆಜ್ಜೆ ಇಡುವಂತಾಗಿದೆ. ಈ ಕಂಬಗಳು ಅಪಾಯದ ಮುನ್ಸೂಚನೆ ನೀಡುತ್ತಿವೆ. ಅಪಘಾತ ಸಂಭವಿಸುವ ಮುನ್ನ ಅದನ್ನು ತೆರವುಗೊಳಿಸಿ ಹೊಸ ವಿದ್ಯುತ್‌ ಕಂಬ ಜೋಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest Videos

undefined

ಗ್ರಾಮದಲ್ಲಿ 200ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿವೆ. ಇವುಗಳು ಸುಮಾರು 40 ವರ್ಷಕ್ಕೂ ಹೆಚ್ಚು ಹಳೆಯ ಕಂಬಗಳಾಗಿವೆ. ಅದರಲ್ಲಿ ಹತ್ತಾರು ಕಂಬಗಳು ಶಿಥಲಾವಸ್ಥೆಯಲ್ಲಿದ್ದು, ಕೆಲ ಕಂಬಗಳ ಮಧ್ಯದಲ್ಲಿ ಹಾಗೂ ತಳಭಾಗದಲ್ಲಿ ಬಿರುಕು ಬಿಟ್ಟು ಕಬ್ಬಿಣದ ರಾಡು ಹೊರಗೆ ಕಾಣುತ್ತಿದೆ. ಕಂಬಗಳು ಯಾವಾಗ ಮುರಿದು ಬೀಳುವುದು ಎನ್ನುವ ಸ್ಥಿತಿಯಲ್ಲಿವೆ. ಕಂಬಗಳ ದುರಸ್ತಿಗಾಗಿ ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟುಸಲ ಮನವಿ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ಜೆಸ್ಕಾಂ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆಂದು ಗ್ರಾಮದ ರಾಜು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಶಹಾಪುರ: ಬೆನಕನಹಳ್ಳಿ ಶಾಲೆ ಬಯಲು ಶೌಚ ಮುಕ್ತ ಆಗೋದು ಯಾವಾಗ?

ಗ್ರಾಮದ ಹೋರ ವಲಯದ ಶಹಾಪುರ ಮುಖ್ಯರಸ್ತೆಯಲ್ಲಿ ವಾಲಿ ನಿಂತಿರುವ ವಿದ್ಯುತ್‌ ಕಂಬಗಳು ಪ್ರಾಣ ಹಾನಿಗಾಗಿ ಕಾಯುತ್ತಿದೆ. ಈ ಕಂಬವು ರಸ್ತೆ ಬದಿಯಲ್ಲೇ ಇದ್ದು, ನೆಲಕ್ಕೆ ಬಿದ್ದರೆ ದೊಡ್ಡ ಮಟ್ಟದ ಅವಘಡ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಗ್ರಾಮದಲ್ಲಿ ಸಾಕಷ್ಟುವಿದ್ಯುತ್‌ ಕಂಬಗಳು ಪ್ರಾಣ ಹಾನಿಗೆ ಕಾಯುತ್ತಿದ್ದು, ಅವುಗಳ ದುರಸ್ತಿಗೆ ಸಂಬಂಧಪಟ್ಟಅಧಿಕಾರಿಗಳು ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದು ತಿಳಿಯದಾಗಿದೆ ಎನ್ನುತ್ತಾರೆ ರಂಗಪ್ಪ.

ನಿರ್ಲಕ್ಷ್ಯ: 

ಎಷ್ಟೋ ಸಲ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರೂ ಅಧಿಕಾರಿಗಳು ಭೇಟಿ ನೀಡದೆ, ನಿರ್ಲಕ್ಷ ವಹಿಸಿದ್ದಾರೆಂಬ ಆರೋಪ ಜೆಸ್ಕಾಂ ಇಲಾಖೆ ಅಧಿಕಾರಿಗಳ ಮೇಲಿದೆ. ಕಂಬ ಅಳವಡಿಸುವಂತೆ ಹೇಳಿದರೂ ಸ್ಪಂದಿಸಿಲ್ಲ. ಆಫೀಸಿಗೆ ಕೇಳಲು ಹೋದರೆ ನಾಳೆ ಬಾ ಎಂಬ ಉತ್ತರ ರೆಡಿಯಾಗಿರುತ್ತದೆ ಎನ್ನುತ್ತಾರೆ ಭೀಮಣ್ಣ. ಅಪಾಯದ ಮುನ್ಸೂಚನೆ ನೀಡುತ್ತಿರುವ ವಿದ್ಯುತ್‌ ಕಂಬಗಳ ಬದಲಾವಣೆಗೆ ಜೆಸ್ಕಾಂ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಜನರಲ್ಲಿರುವ ಸಾವಿನ ಭಯವನ್ನು ದೂರ ಮಾಡುವುದೇ ಕಾದು ನೋಡಬೇಕಿದೆ.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ: ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ

ಬೆನಕನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯ ವಿದ್ಯುತ್‌ ಕಂಬಗಳ ಬಗ್ಗೆ ಗಮನಕ್ಕೆ ಬಂದಿದೆ. ಗ್ರಾಮಕ್ಕೆ ಸೆಕ್ಷನ್‌ ಆಫೀಸರ್‌ ಅವರನ್ನು ಕಳುಹಿಸಿ, ಅವರಿಂದ ಸ್ಥಳ ಪರಿಶೀಲನೆ ವರದಿ ತರಿಸಿಕೊಂಡು ಮುಂದಿನ ಕ್ರಮ ವಹಿಸುತ್ತೇನೆ ಅಂತ ಜೆಸ್ಕಾಂ ಉಪ ವಿಭಾಗ ಕಚೇರಿ ಎಇಇ ಮರೆಪ್ಪ ಕಡೆಕರ್‌ ಹೇಳಿದ್ದಾರೆ.  

ವಿದ್ಯುತ್‌ ಕಂಬ ಮುರಿದು ಬಿದ್ದು, ಅನಾಹುತ ಸಂಭವಿಸಿದರೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರು ಆಗಬೇಕಾಗುತ್ತದೆ. ಅನಾಹುತ ಆಗುವ ಮೊದಲೇ ಶಿಥಿಲಾವಸ್ಥೆಯಲ್ಲಿರುವ ಕಂಬಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಬೆನಕನಹಳ್ಳಿ ಗ್ರಾಮದ ನಿವಾಸಿ ರಾಮಸ್ವಾಮಿ, ಮಲ್ಹಾರ ತಿಳಿಸಿದ್ದಾರೆ.

click me!