ಸೌತಡ್ಕ ಗಣಪತಿ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ತನ್ನ ಮೂರು ವರ್ಷದ ಮಗಳೊಂದಿಗೆ ಹೋದ ಗಂಡ ಮೂರು ತಿಂಗಳಾದರೂ ಪತ್ತೆ ಇಲ್ಲ. ಹೀಗಾಗಿ ದೂರು ನೀಡಿದ ಪತ್ನಿ ಈಗ ಮಗುವನ್ನಾದರೂ ನೀಡಿ ಎಂದು ಅಂಗಲಾಚುತ್ತಿದ್ದಾಳೆ.
ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.8): ದಿನಸಿ ಅಂಗಡಿ ಇಟ್ಟುಕೊಂಡು ಸುಖ ಸಂಸಾರ ಮಾಡುತ್ತಿದ್ದ ಕುಟುಂಬ ಅದು. ಆದರೆ ಧರ್ಮಸ್ಥಳದಲ್ಲಿ ಇರುವ ಸೌತಡ್ಕ ಗಣಪತಿ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ತನ್ನ ಮೂರು ವರ್ಷದ ಮಗಳೊಂದಿಗೆ ಹೋದವನು ಮೂರು ತಿಂಗಳಾದರೂ ಇಂದಿಗೂ ಮನೆಗೆ ವಾಪಸ್ ಬಂದೇ ಇಲ್ಲ. ಹೀಗಾಗಿ ಹೆತ್ತ ಕರಳು ತನ್ನ ಮಗಳಿಗಾಗಿ ಮಮ್ಮಲ ಮರುಗುತ್ತಿರುವ ಕರುಣಾ ಜನಕ ಕಥೆ, ವ್ಯಥೆ ಇದು.
undefined
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾನ್ವೆಂಟ್ ಜಂಕ್ಷನ್ ಬಳಿ ಕಳೆದ ಒಂದುವರೆ ವರ್ಷದಿಂದ ರೇಖಾ ಮತ್ತು ಸತೀಶ್ ದಂಪತಿ ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ನೆಮ್ಮದಿಯ ಬದುಕು ಕಂಡುಕೊಂಡಿದ್ದರು. ಏಪ್ರಿಲ್ 15 ರಂದು ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ಬಂದಿದ್ದ ಸತೀಶ್ ತನ್ನ ಮೂರು ವರ್ಷದ ಮಗುವನ್ನು ಕರೆದುಕೊಂಡು ನಾನು ದೇವಾಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ. ಮಾರನೇ ದಿನ ಈಗ ನನ್ನ ಮೊಬೈಲ್ ಸ್ವಿಚ್ ಆಫ್ ಆಗಬಹುದು. ಆಮೇಲೆ ಮತ್ತೆ ಕಾಲ್ ಮಾಡುತ್ತೇನೆ ಎಂದು ತನ್ನ ಪತ್ನಿ ರೇಖಾ ಅವರ ಮೊಬೈಲ್‌ಗೆ ಮೆಸೇಜ್ ಮಾಡಿದ್ದಾರೆ. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿದ್ದು ಇಂದಿಗೂ ತಿರುಗಿ ಕರೆಯನ್ನೂ ಮಾಡಿಲ್ಲ, ಮನೆಗೂ ಬಂದಿಲ್ಲ.
ಶಾಲಾ ವಾಹನಕ್ಕೆ ಬಲಿಯಾದ ಮೂರು ವರ್ಷದ ಪುಟ್ಟ ಕಂದಮ್ಮ!
ಒಂದು ತಿಂಗಳವರೆಗೆ ಕಾದರೂ ಪತಿ ಸತೀಶ್ ಬಾರದಿದ್ದಾಗ ರೇಖಾ ಅವರು ಮೇ 22 ರಂದು ಮಡಿಕೇರಿ ಪೊಲೀಸ್ ಠಾಣೆಗೆ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಅದಾದ ಕೆಲವೇ ದಿನಗಳಲ್ಲಿ ತಮ್ಮ ಪತಿ ಯಾವುದೋ ಮಹಿಳೆಯೊಂದಿಗೆ ಬೇರೆ ಸಂಸಾರ ನಡೆಸುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಇದು ಮಹಿಳೆ ರೇಖಾ ಅವರಿಗೆ ದಿಗಿಲು ಹುಟ್ಟಿಸಿದೆ. ಇಷ್ಟು ದಿನಗಳವರೆಗೆ ತನ್ನ ಮಗಳನ್ನು ಕರೆದುಕೊಂಡು ತನ್ನ ಗಂಡ ಬರಬಹುದು ಎನ್ನುವ ವಿಶ್ವಾಸದಲ್ಲಿದ್ದ ರೇಖಾ ಅವರು ಈಗ ತಮ್ಮ ಮೂರು ವರ್ಷದ ಪುಟ್ಟ ಕಂದಮ್ಮಳಿಗಾಗಿ ಕಣ್ಣೀರಿಡುತ್ತಿದ್ದಾರೆ.
ತನ್ನ ಮಗಳನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಮಗಳನ್ನು ಕರೆದುಕೊಂಡು ಬನ್ನಿ, ಎಷ್ಟೇ ಅಥವಾ ಎಂತಹ ಸಮಸ್ಯೆಗಳಿದ್ದರೂ ಬಗೆಹರಿಸಿಕೊಳ್ಳೋಣ ಎಂದು ಬೇಡುತ್ತಿದ್ದಾರೆ. ನಿಮಗೆ ಬರಲು ಇಷ್ಟ ಇರದಿದ್ದರೆ ಕೊನೆ ಪಕ್ಷ ನನ್ನ ಮಗಳನ್ನು ಎಲ್ಲಾದರೂ ಒಂದು ಜಾಗಕ್ಕೆ ಕರೆದು ತಂದು ಬಿಟ್ಟು, ಇಂತಹ ಜಾಗಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿ ಹೊರಟು ಹೋಗಿ ಎಂದು ಬೇಡುತ್ತಿದ್ದಾರೆ. ಯಾರಾದರೂ ನನ್ನ ಮಗಳನ್ನು ಕಂಡಲ್ಲಿ ದಯಮಾಡಿ ಹತ್ತಿರದ ಪೊಲೀಸ್ ಠಾಣೆಗಾದರೂ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಆಕಸ್ಮಿಕವಾಗಿ ದೇಹ ಸೇರಿದ ಅಪಾಯಕಾರಿ ಕಳೆನಾಶಕ, ಅರಣ್ಯಾಧಿಕಾರಿ ಸಾವು!
ನನ್ನ ಮಗಳಿಲ್ಲದೆ ಇರಲು ಆಗುತ್ತಿಲ್ಲ, ಅವಳ ನೆನಪು ಸದಾ ಕಾಡುತ್ತಿದೆ. ದಯಮಾಡಿ ನನ್ನ ಮಗಳನ್ನಾದರೂ ನನಗೆ ವಾಪಸ್ ಕಳುಹಿಸಿ ಕೊಡಿ ಎಂದು ತನ್ನ ಮಗಳಿಗಾಗಿ ರೇಖಾ ಅಂಗಲಾಚುತ್ತಿದ್ದಾರೆ. ಅಷ್ಟಕ್ಕೂ ಸತೀಶ್ ಒಂದೂವರೆ ವರ್ಷದ ಹಿಂದೆ ಮಡಿಕೇರಿಯಲ್ಲಿ ದಿನಸಿ ಅಂಗಡಿ ಆರಂಭಿಸಿದಾಗ ಮಹಿಳೆಯೊಬ್ಬರು ಇವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಇದೀಗ ಆ ಮಹಿಳೆಯೂ ನಾಪತ್ತೆಯಾಗಿದ್ದು, ರೇಖಾ ಅವರು ಅವರು ತಮ್ಮ ಪತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ದಿನವೇ ಆ ಮಹಿಳೆಯೂ ನಾಪತ್ತೆಯಾಗಿದ್ದಾರೆ ಎಂದು ಮಹಿಳೆಯ ಪತಿಯೂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಆ ಮಹಿಳೆಯೊಂದಿಗೆ ಸತೀಶ್ ಹೋಗಿರಬಹುದು ಎಂದು ರೇಖಾ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.