ಮೆಟ್ರೋ ಫೀಡರ್‌ ಸೇವೆಗೆ ಎಲೆಕ್ಟ್ರಿಕ್‌ ಬಸ್‌ ಶೀಘ್ರ ಲಭ್ಯ

By Kannadaprabha NewsFirst Published Feb 12, 2020, 10:38 AM IST
Highlights

ರಾಜಧಾನಿಯ ಬಹುದಿನಗಳ ಬೇಡಿಕೆಯಾದ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ ಸೇವೆ ಲಭ್ಯವಾಗುವ ಕಾಲ ಕೂಡಿ ಬಂದಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಮೆಟ್ರೋ ರೈಲು ನಿಲ್ದಾಣಗಳಿಗೆ ಫೀಡರ್‌ ಬಸ್‌ ಸೇವೆ ಕಲ್ಪಿಸುವ ಉದ್ದೇಶದಿಂದ 90 ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆಗೆ ನಿರ್ಧರಿಸಿದೆ.

ಬೆಂಗಳೂರು(ಫೆ.12): ರಾಜಧಾನಿಯ ಬಹುದಿನಗಳ ಬೇಡಿಕೆಯಾದ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ ಸೇವೆ ಲಭ್ಯವಾಗುವ ಕಾಲ ಕೂಡಿ ಬಂದಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಮೆಟ್ರೋ ರೈಲು ನಿಲ್ದಾಣಗಳಿಗೆ ಫೀಡರ್‌ ಬಸ್‌ ಸೇವೆ ಕಲ್ಪಿಸುವ ಉದ್ದೇಶದಿಂದ 90 ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆಗೆ ನಿರ್ಧರಿಸಿದೆ.

ಬಿಎಂಟಿಸಿಯ ಮಾತೃಸಂಸ್ಥೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು ಬಿಎಂಟಿಸಿ ಪರವಾಗಿ ಗುತ್ತಿಗೆ ಮಾದರಿಯಡಿ 90 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಟೆಂಡರ್‌ ಆಹ್ವಾನಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದ ವೇಳೆಗೆ ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಮೆಟ್ರೋ ಫೀಡರ್‌ ಸೇವೆ ಲಭ್ಯವಾಗಲಿದೆ.

'ದೇವಸ್ಥಾನದಲ್ಲಿ ಡೊಳ್ಳು, ತಮಟೆ ಬಾರಿಸ್ಬೇಡಿ'..!

ಈ ಎಲೆಕ್ಟ್ರಿಕ್‌ ಬಸ್‌ ಪಡೆಯಲು ಬಿಎಂಟಿಸಿ ಪೂರ್ಣ ಪ್ರಮಾಣದ ಹಣ ತೊಡಗಿಸುತ್ತಿಲ್ಲ. ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಈ ಎಲೆಕ್ಟ್ರಿಕ್‌ ಬಸ್‌ ಪಡೆಯಲು .50 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಉಳಿದ ಹಣವನ್ನು ಬಿಎಂಟಿಸಿ ಭರಿಸಲಿದೆ. ಅಂದರೆ, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನಿಂದ ಅರ್ಧಕ್ಕಿಂತ ಹೆಚ್ಚಿನ ಹಣ ಬರುವುದರಿಂದ ಬಿಎಂಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸಿಂಗಲ್‌ ಡೋರ್‌ ಬಸ್‌:

ಗುತ್ತಿಗೆ ಮಾದರಿಯಡಿ ಪಡೆಯಲು ಉದ್ದೇಶಿಸಿರುವ 90 ಎಲೆಕ್ಟ್ರಿಕ್‌ ಬಸ್‌ಗಳು 9 ಮೀಟರ್‌ ಉದ್ದ ಇರಲಿದ್ದು, 35 ಆಸನ ಸಾಮರ್ಥ್ಯ ಹೊಂದಿರಲಿವೆ. ಈ ಬಸ್‌ಗಳಲ್ಲಿ ಏಕ ದ್ವಾರ ಮಾತ್ರ ಇರಲಿದ್ದು, ಹವಾನಿಯಂತ್ರಿತ ವ್ಯವಸ್ಥೆ ಇರುವುದಿಲ್ಲ. ಆದರೆ, ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ, ಸ್ಪೀಕರ್‌, ಪ್ಯಾಸೆಂಜರ್‌ ಡಿಸ್‌ಪ್ಲೇ ಬೋರ್ಡ್‌, ಆ್ಯಂಫ್ಲಿಫೈಯರ್‌, ಪ್ಯಾನಿಕ್‌ ಬಟನ್‌ ವ್ಯವಸ್ಥೆ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳಿರಲಿವೆ. ಈ ಬಸ್‌ಗಳು ಮೆಟ್ರೋ ನಿಲ್ದಾಣ ಹಾಗೂ ಸುತ್ತಮುತ್ತಲ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ಸೇವೆ ನೀಡಲಿವೆ.

ಕಂಪನಿಗೆ ನಿರ್ವಹಣೆ ಹೊಣೆ:

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ ಸೇವೆ ಹೊಸದಾಗಿರುವುದರಿಂದ ಗುತ್ತಿಗೆ ಮಾದರಿಯಲ್ಲಿ ಬಸ್‌ ಪಡೆದು ಕಾರ್ಯಾಚರಣೆಗೊಳಿಸಲು ತೀರ್ಮಾನಿಸಲಾಗಿದೆ. ಆರಂಭದಲ್ಲಿ 10 ವರ್ಷಗಳಿಗೆ ಗುತ್ತಿಗೆ ನೀಡಿ ಬಳಿಕ ಕಂಪನಿಯ ಸೇವೆ ಉತ್ತಮವಾಗಿದ್ದರೆ ಮತ್ತೆರಡು ವರ್ಷ ವಿಸ್ತರಣೆಗೆ ಅವಕಾಶ ನೀಡಲಾಗುತ್ತದೆ. ಗುತ್ತಿಗೆ ಪಡೆದುಕೊಳ್ಳುವ ಕಂಪನಿ ಬಸ್‌ಗಳ ಪೂರೈಕೆ ಜತೆಗೆ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡಬೇಕು. ಬಿಎಂಟಿಸಿಯು ಚಾರ್ಜಿಂಗ್‌ ಘಟಕಗಳಿಗೆ ವಿದ್ಯುತ್‌ ಪೂರೈಸಲಿದೆ. ಗುತ್ತಿಗೆ ವೇಳೆ ಪ್ರತಿ ಕಿ.ಮೀ.ಗೆ ನಿಗದಿಯಾಗುವ ದರವನ್ನು ಕಂಪನಿಗೆ ಭರಿಸಲಿದೆ.

ಫೇಮ್‌ ಯೋಜನೆಯಡಿ 300 ಎಲೆಕ್ಟ್ರಿಕ್‌ ಬಸ್‌

ಕೇಂದ್ರದ ಫೇಮ್‌ ಯೋಜನೆಯ ಎರಡನೇ ಹಂತದ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಮರು ಟೆಂಡರ್‌ ಕರೆಯಲಾಗಿದೆ. ಈ ಹಿಂದೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಎರಡು ಕಂಪನಿಗಳ ಪೈಕಿ ಅಂತಿಮವಾಗಿ ಟೆಂಡರ್‌ನಲ್ಲಿ ಒಂದು ಕಂಪನಿ ಮಾತ್ರ ಉಳಿದಿತ್ತು. ಈ ಕಂಪನಿಯು ದುಬಾರಿ ಮೊತ್ತಕ್ಕೆ ಬಿಡ್‌ ಮಾಡಿದ್ದರಿಂದ ಟೆಂಡರ್‌ ರದ್ದುಗೊಳಿಸಲಾಗಿತ್ತು.

ನಮ್ಮ ಮೆಟ್ರೋ ಪ್ರಯಾಣಿಕರಿಗೆ 'ನಮ್ಮ ಆಟೋ'..!

ಮೆಟ್ರೋ ಪ್ರಯಾಣಿಕರಿಗೆ ಲಾಸ್ಟ್‌ ಮೈಲ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಗುತ್ತಿಗೆ ಮಾದರಿಯಲ್ಲಿ 90 ನಾನ್‌ ಎಸಿ ಎಲೆಕ್ಟ್ರಿಕ್‌ ಬಸ್‌ ಪಡೆಯಲು ಟೆಂಡರ್‌ ಕರೆಯಲಾಗಿದೆ. ಈ ಬಸ್‌ ಪಡೆಯಲು ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ಬಿಎಂಟಿಸಿಗೆ 50 ಕೋಟಿ ರು. ಅನುದಾನ ನೀಡಲಿದೆ. ಉಳಿದ ಹಣವನ್ನು ಬಿಎಂಟಿಸಿಯೇ ಭರಿಸಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

-ಮೋಹನ ಹಂಡ್ರಂಗಿ

click me!