ವಿಜಯಪುರ: ಚಡಚಣದ ಸಂಗಮೇಶ್ವರ ಶಾಲೆಯಲ್ಲಿ ಸಿದ್ದೇಶ್ವರ ಶ್ರೀಗಳ ಶಿಕ್ಷಣ

By Kannadaprabha NewsFirst Published Jan 5, 2023, 9:30 PM IST
Highlights

ಸಿದ್ದೇಶ್ವರ ಮಹಾಸ್ವಾಮಿಗಳು 1956ರಲ್ಲಿ ಸಂಗಮೇಶ್ವರ ಪ್ರೌಢಶಾಲೆಗೆ 8ನೇ ತರಗತಿಗೆ ಪ್ರವೇಶ ಪಡೆದು 1959ರಲ್ಲಿ 10ನೇ ತರಗತಿ ಉತ್ತೀರ್ಣರಾಗಿದ್ದರು. ಸುಮಾರು ಮೂರು ವರ್ಷಗಳ ಪ್ರೌಢ ಶಿಕ್ಷಣವನ್ನು ಸಂಗಮೇಶ್ವರ ಪ್ರೌಢಶಾಲೆಯಲ್ಲಿಯೇ ಮುಗಿಸಿರುವುದು ಸಂಸ್ಥೆಯ ಆಡಳಿತ ಮಂಡಳಿಗೆ ಹಾಗೂ ಜಿಲ್ಲೆಯ ಜನತೆ ಹೆಮ್ಮೆ ಪಡುವಂತೆ ಮಾಡಿದೆ.

ಶಂಕರ ಹಾವಿನಾಳ

ಚಡಚಣ(ಜ.05):  ಸೋಮವಾರ ಸಂಜೆ ಲಿಂಗೈಕ್ಯರಾದ ನಡೆದಾಡುವ ದೇವರೆಂದೇ ಪ್ರಖ್ಯಾತರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುವ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿರುವುದು ಸಂಸ್ಥೆಯ ಪೂರ್ವ ಪುಣ್ಯವೂ ಹೌದು, ದೇಶ-ವಿದೇಶಿದಗಲಕ್ಕೂ ಶಾಲೆಯ ಕೀತಿ ಹೆಚ್ಚಿಸಿರುವುದು ಈ ನಾಡಿನ ಹಿರಿಮೆಯೂ ಹೌದು. ಸಿದ್ದೇಶ್ವರ ಮಹಾಸ್ವಾಮಿಗಳು 1956ರಲ್ಲಿ ಸಂಗಮೇಶ್ವರ ಪ್ರೌಢಶಾಲೆಗೆ 8ನೇ ತರಗತಿಗೆ ಪ್ರವೇಶ ಪಡೆದು 1959ರಲ್ಲಿ 10ನೇ ತರಗತಿ ಉತ್ತೀರ್ಣರಾಗಿದ್ದರು. ಸುಮಾರು ಮೂರು ವರ್ಷಗಳ ಪ್ರೌಢ ಶಿಕ್ಷಣವನ್ನು ಸಂಗಮೇಶ್ವರ ಪ್ರೌಢಶಾಲೆಯಲ್ಲಿಯೇ ಮುಗಿಸಿರುವುದು ಸಂಸ್ಥೆಯ ಆಡಳಿತ ಮಂಡಳಿಗೆ ಹಾಗೂ ಜಿಲ್ಲೆಯ ಜನತೆ ಹೆಮ್ಮೆ ಪಡುವಂತೆ ಮಾಡಿದೆ.

20 ಜೂನ್‌ 1956ರಲ್ಲಿ ಚಡಚಣ ಪಟ್ಟಣಕ್ಕೆ ಸಿದ್ದೇಶ್ವರ ಶ್ರೀಗಳು ಆಗಮಿಸಿದಾಗ ಕೇವಲ 16 ವಯಸ್ಸಿನವರಾಗಿದ್ದರು. ಅಂದು ಆಗಮಿಸಿದ ಮಹಾಸ್ವಾಮೀಜಿ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಆ ಸಂದರ್ಭದಲ್ಲಿಯೇ ಅವರು ಸಂಪೂರ್ಣವಾಗಿ ತಮ್ಮ ಜೀವನ ಅಧ್ಯಾತ್ಮದೆಡೆಗೆ ತೊಡಗಿಸಿಕೊಂಡಿದ್ದರು. ಯಾರೊಬ್ಬರ ಮನೆಯಲ್ಲಿ ಇರದೇ ಪಟ್ಟಣದ ಹೊರವಲಯದಲ್ಲಿರುವ ಶಂಕರಲಿಂಗ ದೇವಾಸ್ಥಾನದಲ್ಲಿ ವಾಸವಾಗಿದ್ದರು. ಅಲ್ಲಿಯೇ ಸಮೀಪದಲ್ಲಿರುವ ಬಾವಿಯಲ್ಲಿ ಸ್ನಾನ ಮಾಡಿ ದೇವರ ಜಪ, ತಪ, ಜ್ಞಾನ ಮಾಡುತ್ತ ವಿದ್ಯಾರ್ಜನೆ ಮಾಡಿದ್ದರು. ಪಟ್ಟಣದ ಜನರ ಮನೆಗಳಿಗೆ ತೆರಳಿ ವಾರದ ಊಟ (ಪ್ರತಿ ದಿನ ಒಬ್ಬರ ಮನೆಯಲ್ಲಿ ಊಟ) ಮಾಡಿ ಶಿಕ್ಷಣ ಪಡೆದುಕೊಳ್ಳುವ ಮೂಲಕ ಮಹಾನ ಯೋಗಿಯಾಗಿದ್ದಾರೆ.

Vijayapura: ಆಶ್ರಮದಲ್ಲೇ ತಾಯಿಗೆ ಪೂಜೆ ಸಲ್ಲಿಸಿದ್ದ ಸಿದ್ದೇಶ್ವರ ಶ್ರೀ!

ಮಲ್ಲಿಕಾರ್ಜುನ ಶ್ರೀಗಳ ಪರಮ ಶಿಷ್ಯ:

ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರ ಪರಮ ಶಿಷ್ಯರಲ್ಲಿ ಅತೀ ಆತ್ಮೀಯರಲ್ಲಿ ಒಬ್ಬರಾದ ಸಿದ್ದೇಶ್ವರ ಮಹಾಸ್ವಾಮೀಜಿ ಅವರು ಮಾತು ಎಂದರೆ ಮಹಾಸ್ವಾಮಿಜಿಯವರಿಗೆ ವೇದ ವಾಕ್ಯ. ಅವರು ಹಾಕಿ ಕೊಟ್ಟಹೇಳಿದ ಮಾರ್ಗದರ್ಶನದಲ್ಲಿ ಸಾಗಿ ಮಹಾನ್‌ ಸಂತ, ನಡೆದಾಡುವ ದೇವರಾದರು.

ಮೂರು ಬಾರಿ ಶ್ರೀಗಳ ಪ್ರವಚನ:

ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ 1985, 1992, 1999ರಲ್ಲಿ 3 ಬಾರಿ ಒಂದೊಂದು ತಿಂಗಳು ಕಾಲ ಅಧ್ಯಾತ್ಮ ಪ್ರವಚನವನ್ನು ಸಿದ್ದೇಶ್ವರ ಶ್ರೀಗಳು ಮಾಡಿರುವುದು ಸಂಸ್ಥೆಯೊಂದಿಗಿನ ಅವಿನಾಭಾವ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರವಚನಕ್ಕೆ ಬಂದ ಸಂದರ್ಭದಲ್ಲಿ ಸಂಗಮೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಗುರುದೇವಾಶ್ರಮದಲ್ಲಿ ಶೀಗಳು ವಾಸವಾಗಿರುತ್ತಿದ್ದರು. ತಾಲೂಕಿನ ಹಾವಿನಾಳ ಗ್ರಾಮದ ಚರಮೂರ್ತಿ ಮಠದಲ್ಲಿ 15 ಅಕ್ಟೋಬರ್‌ 2018ರಲ್ಲಿ ಒಂದು ತಿಂಗಳು ಕಾಲ ಆಧ್ಯಾತ್ಮಿಕ ಪ್ರವಚನ ಮಾದಿದ್ದಾರೆ. ಚಡಚಣ ಸಮೀಪದ ಮಹಾರಾಷ್ಟ್ರದ ಕಾತ್ರಾಳ ಗ್ರಾಮದ ಹೊರ ವಲಯದಲ್ಲಿರುವ ಗುರುದೇವಾಶ್ರಮದಲ್ಲಿಯೂ ಸುಮಾರು ತಿಂಗಳುಗಳ ಕಾಲ ಶ್ರೀಗಳಿಂದ ಪ್ರವಚನ ಮಾಡಿದ್ದಾರೆ. ಶ್ರೀಗಳ ಪ್ರವಚನ ಎಂದರೆ ಈ ಭಾಗದ ಜನರಿಗೆ ಮೃಷ್ಟಾನ್ನ ಉಂಡಷ್ಟುಸಂತೋಷ. ಅವರ ಪ್ರವಚನ ಪ್ರಾರಂಭವಾಗಿದೆ ಎಂಬ ಸುದ್ದಿ ಕಿವಿಗೆ ಬಿದ್ದರೇ ಸಾಕು ಬೆಳಗ್ಗೆ 6 ಗಂಟೆಗೆ ಪ್ರವಚನ ನಡೆಯುವ ಸ್ಳಳಕ್ಕೆ ಲಕ್ಷಾಂತರ ಜನ ಸೇರುತ್ತಿದ್ದರು. ಅಲ್ಲದೇ ಅವರ ಪ್ರವಚನ ಪ್ರಾರಂಭವಾದಾಗ ಸೂಜಿ ಬಿದ್ದರೂ ಶಬ್ದ ಕೇಳುವಂತ ನಿಶಃಬ್ಧವಾಗಿರುವುದು ಶ್ರೀಗಳ ಪ್ರವಚನಕ್ಕಿರುವ ಶಕ್ತಿಯೂ ಹೌದು, ಭಕ್ತಿಯೂ ಹೌದು.

ಪಠ್ಯದಲ್ಲಿ ಸಿದ್ದೇಶ್ವರ ಶ್ರೀಗಳ ಜೀವನಗಾಥೆ?: ವಿವೇಕಾನಂದರ ನಂತ್ರ ಹೆಚ್ಚು ಪ್ರಭಾವಿಸಿದವರು ಶ್ರೀಗಳು

ಸಿದ್ದೇಶ್ವರ ಶ್ರೀಗಳು ನಮ್ಮ ಸಂಸ್ಥೆಯಲ್ಲಿ ಕಲಿತಿರುವುದು ನಮ್ಮೆಲ್ಲರ ಪುಣ್ಯ.ದೇಶ-ವಿದೇಶಗಳ ಭಕ್ತರ ಮನದಲ್ಲಿ ನೆಲೆಸಿರುವ ಮಹಾನ್‌ಯೋಗಿ ಅವರು ಅಗಲಿರುವುದು ಬಹಳಷ್ಟುನೋವು ತಂದಿದೆ. ಆ ಭಗವಂತ ಶ್ರೀಗಳ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ ಅಂತ ಚಡಚಣದ ಶೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಎಸ್‌.ಆರ್‌. ಡೊಣಗಾಂವ ಹೇಳಿದ್ದಾರೆ. 

ಸಿದ್ದೇಶ್ವರ ಶ್ರೀಗಳು ಬಾಲ್ಯದಿಂದಲೇ ತಮ್ಮನ್ನು ಅಧ್ಯಾತ್ಮಕತೆಯಲ್ಲಿ ತೊಡಗಿಸಿಕೊಂಡಿದ್ದರು. ಶಾಲಾ ದಿನಗಳಲ್ಲಿ ಬಾವಿಯಲ್ಲಿ ಸ್ನಾನ ಮಾಡಿ ದೇವರ ಜಪ, ತಪ, ಜ್ಞಾನ ಮಾಡುವಲ್ಲಿ ತಲ್ಲಿನರಾಗಿರುತ್ತಿದ್ದರು. ಅಂದು ಪಟ್ಟಣದ ಜನರ ಮನೆಗಳಿಗೆ ತೆರಳಿ ವಾರದ ಊಟ (ಪ್ರತಿ ದಿನ ಒಬ್ಬರ ಮನೆಯಲ್ಲಿ ಊಟ) ಮಾಡಿ ಶಿಕ್ಷಣ ಪಡೆದುಕೊಂಡಿದ್ದಾರೆ. ಪ್ರವಚನ ಮೂಲಕ ಈ ನಾಡಿಗೆ ಜ್ಞಾನ ಬೆಳಕನ್ನು ಬೆಳಗಿಸಿ ಹೋಗಿದ್ದಾರೆ ಅಂತ ಸಾಹಿತಿ ಬಸವರಾಜ ಯಂಕಂಚಿ ತಿಳಿಸಿದ್ದಾರೆ. 

click me!