
ತುಮಕೂರು : ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆ ಜಯನಗರ ದಕ್ಷಿಣದಲ್ಲಿರುವ ವರದರಾಜ ಪಿಯು ಮತ್ತು ಡಿಗ್ರಿ ಕಾಲೇಜಿನ ವತಿಯಿಂದ ಸೊಬಗು ( ಸುಗ್ಗಿ ಸಂಭ್ರಮದ ಬೆರಗು) ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಮನೋಹರ್ ಆರ್.ಎಸ್. ಮಾತನಾಡುತ್ತಾ ಅದೃಷ್ಟ ಅವಕಾಶ ನೀಡುತ್ತದೆ. ಆದರೆ ಕಠಿಣ ಶ್ರಮ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣವೇ ಪ್ರಬಲ ಅಸ್ತ್ರ ಅದರ ಮೂಲಕ ಪ್ರಪಂಚವನ್ನು ಬದಲಾಯಿಸಬಹುದು. ಏಕಾಗ್ರತೆಯಿಂದ ಮತ್ತು ಉತ್ತಮ ಚಾರಿತ್ಯವನ್ನು ಸಾಧಿಸಿ ನಿಖರವಾದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಸ್‌ಐಟಿ ವಸ್ಥಾಪಕ ನಿರ್ದೇಶಕ ರವೀಶ್ ಕುಮಾರ್ ಎಂ.ಡಿ. ಮಾತನಾಡಿ ಪಲಾಯನ ಮಾಡಬಾರದು, ಬಾಹ್ಯ ಮತ್ತು ಆಂತರಿಕ ಪ್ರಜ್ಞೆಯೊಂದಿಗೆ ಅತ್ಯುತ್ತಮ ಸಂವಹನದ ರೂವಾರಿಗಳು ನೀವಾಗಬೇಕು, ಸಂಕೋಚ ಮತ್ತು ಭಯವನ್ನು ಹೊರತುಪಡಿಸಿದ ಮನೋಭಾವನೆ ನಿಮ್ಮದಾಗಬೇಕು. ಬೆಟ್ಟದಷ್ಟು ಶ್ರಮ ನಿರಂತರ ಪ್ರಯತ್ನ, ತಾಳ್ಮೆ, ಸಂಶೋಧನಾತ್ಮಕ ಪ್ರಕ್ರಿಯೆ ವಿಚಲಿತರಾಗದೆ ಖುಷಿಯಿಂದ ಕಲಿಯುವ ಪ್ರೌಢಮೆ ಸದಾ ಎಚ್ಚರ ಪ್ರಜ್ಞೆ ಈ ಎಲ್ಲ ವಿಕಸನದ ಮೂಲಕ ವ್ಯಕ್ತಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂಬ ಅತ್ಯಮೂಲ್ಯವಾದ ಮಾತುಗಳನ್ನು ಹಾಗೂ ಸಾಕಷ್ಟು ಅತ್ಯುತ್ತಮ ನಿದರ್ಶನಗಳನ್ನು ತಿಳಿಸಿದರು.
ಡಾ. ಯೋಗೀಶ್ ಡಿ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವರುಣ್ ಅಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ವರ್ಷದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.