ಭಾರತ ಸೇರಿ ಬಂಡವಾಳಶಾಹಿ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು: ರಾಧಾಕೃಷ್ಣ ಉಪಾಧ್ಯ

By Kannadaprabha News  |  First Published Aug 20, 2022, 2:37 PM IST

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಎಲ್ಲಾ ಬಂಡವಾಳಶಾಹಿ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಬಿಜೆಪಿ ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪಕ್ಷಗಳು ಕಾರ್ಪೊರೇಟ್‌ ಮಾಲೀಕರ ಕೈಗೊಂಬೆಗಳಾಗಿವೆ - SUCI(C) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ತಿಳಿಸಿದರು.


ಬಳ್ಳಾರಿ (ಆ.20) :  ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಎಲ್ಲಾ ಬಂಡವಾಳಶಾಹಿ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಏತನ್ಮಧ್ಯೆ ಕೋವಿಡ್‌ ನಡುವೆಯೂ ಅಂಬಾನಿ, ಅದಾನಿ ಸೇರಿದಂತೆ ಬೆರಳೆಣಿಕೆಯ ಉದ್ಯಮಿಗಳ ಆಸ್ತಿ ನೂರಾರು ಪಟ್ಟು ಹೆಚ್ಚಾಗಿದೆ ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ(ಸಿ)) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ತಿಳಿಸಿದರು. ಮಾರ್ಕ್ಸ್ವಾದಿ ಚಿಂತಕ, ಕಾರ್ಮಿಕರ ವರ್ಗದ ನಾಯಕ ಶಿವದಾಸ್‌ ಘೋಷ್‌ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಮೋದಿಗೆ ಸಂಸಾರದ ನಿರ್ವಹಣೆ ಗೊತ್ತಿಲ್ಲ, ರಮೇಶ್‌ ಕುಮಾರ್‌

Latest Videos

undefined

ಬಿಜೆಪಿ ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪಕ್ಷಗಳು ಕಾರ್ಪೊರೇಟ್‌ ಮಾಲೀಕರ ಕೈಗೊಂಬೆಗಳಾಗಿ ಅವರ ಸಾಲ ತೆರಿಗೆಗಳನ್ನು ಮನ್ನಾ ಮಾಡುತ್ತಾ ಅವರನ್ನು ಮತ್ತಷ್ಟುಕೊಬ್ಬಿಸಿವೆ. ಇನ್ನೊಂದೆಡೆ ಜನರ ಸಮಸ್ಯೆಗಳನ್ನು ಮರೆಮಾಚುವ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಧರ್ಮ ಜಾತಿ ಹೆಸರಿನಲ್ಲಿ ಅಂದಾಭಿಮಾನವನ್ನು ಸೃಷ್ಟಿಸಿ, ಜನರ ಒಗ್ಗಟ್ಟನ್ನು ಮುರಿಯುವ ಕುತಂತ್ರಗಳನ್ನು ಹೂಡುತ್ತಿವೆ. ಇಂತಹ ಸಂದರ್ಭದಲ್ಲಿ ಶಿವದಾಸ್‌ ಘೋಷ್‌ ಅವರ ವಿಚಾರವನ್ನು ಶೋಷಿತ ಜನರಿಗೆ ತಲುಪಿಸುವುದು ತುರ್ತು ಅವಶ್ಯಕತೆಯಿದೆ. ಈ ಮೂಲಕ ದುಡಿಯುವ ವರ್ಗವನ್ನು ಸಂಘಟಿಸಿ ಅವರ ದೈನಂದಿನ ಸಮಸ್ಯೆಗಳ ವಿರುದ್ಧ ಬಲಿಷ್ಠ ಹೋರಾಟವನ್ನು ಬೆಳೆಸುವ ಅಗತ್ಯವಿದ್ದು, ಅವರ ಜೀವನ ಹೋರಾಟವನ್ನು, ವಿಚಾರಗಳನ್ನು ದೇಶದ ಮೂಲೆ ಮೂಲೆಯಲ್ಲಿ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್‌ ಮಾತನಾಡಿ, ಶಿವದಾಸ್‌ ಘೋಷ್‌, ಇದು ಕೇವಲ ಒಂದು ಹೆಸರಲ್ಲ, ಬದಲಿಗೆ ಶೋಷಿತ, ನೊಂದ ಜನರ ಮನಸ್ಸಿನಾಳದಲ್ಲಿ ಇಂದು ಪ್ರತಿಧ್ವನಿಸುತ್ತಿರುವ ಒಂದು ಮಹಾನ್‌ ವೈಚಾರಿಕ ಶಕ್ತಿ. ಮಾರ್ಕ್ಸ್ವಾದಿ ವಿಜ್ಞಾನವನ್ನು ಭಾರತದ ವಿಶಿಷ್ಟಪರಿಸ್ಥಿತಿಗೆ ಸಮರ್ಪಕವಾಗಿ ಅಳವಡಿಸಿದ ಘೋಷ್‌ ಅವರು ಉತ್ಕೃಷ್ಟವಾದ ಚಿಂತನೆಗಳನ್ನು ನಮಗೆ ನೀಡಿದ್ದಾರೆ. ಈ ಚಿಂತನೆಗಳ ಮೂಲಕವೇ ದೇಶದ ಜನರನ್ನು ಕಾಡುತ್ತಿರುವ ಬೆಲೆ ಏರಿಕೆ, ಅಸಮಾನತೆ, ನಿರುದ್ಯೋಗ, ಬಡತನ, ಹಸಿವು ಮುಂತಾದ ಅನೇಕ ಸಮಸ್ಯೆಗಳಿಗೆ ಒಂದು ವೈಜ್ಞಾನಿಕ ಪರಿಹಾರ ನೀಡಬಹುದಾಗಿದೆ. ಅವರ ಚಿಂತನೆಗಳ ಬಲದಿಂದಲೇ ಇಂದಿನ ಭ್ರಷ್ಟಹಾಗೂ ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗೊಳಿಸಬಹುದಾಗಿದೆ ಎಂದರು.

ಜಗತ್ತಲ್ಲಿ ಆಗಿದ್ದಾಗಲಿ ನಮಗಂತೂ ನೋ ಟೆನ್ಷನ್: ಭಾರತಕ್ಕೆ ನಿರ್ಮಲಾ ಸೀತಾರಾಮನ್ ಅಭಯ!‌

ಜಿಲ್ಲಾ ಸಮಿತಿಯ ಸದಸ್ಯರಾದ ಎಂ.ಎನ್‌. ಮಂಜುಳಾ, ಡಾ.ಪ್ರಮೋದ್‌, ಎ. ದೇವದಾಸ್‌, ಸೋಮಶೇಖರ್‌ ಗೌಡ, ಎ. ಶಾಂತ, ಗೋವಿಂದ್‌ ಹಾಗೂ ಪಕ್ಷದ ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಪಕ್ಷದಿಂದ ಪ್ರಕಟಣೆಗೊಂಡಿರುವ ‘ಆಗಸ್ಟ್‌ 15 ಸ್ವಾತಂತ್ರ್ಯ ಮತ್ತು ಜನತೆಯ ವಿಮುಕ್ತಿಯ ಪ್ರಶ್ನೆಗಳು’, ‘ಚೀನಾದ ಸಾಂಸ್ಕೃತಿಕ ಕ್ರಾಂತಿ’, ‘ಭಾರತದಲ್ಲಿ ಸಾಂಸ್ಕೃತಿಕ ಚಳುವಳಿ ಮತ್ತು ನಮ್ಮ ಕರ್ತವ್ಯ’ ಕೃತಿಗಳನ್ನು ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್‌ ಹಾಗೂ ಜಿಲ್ಲಾ ಪದಾಧಿಕಾರಿಗಳು ಲೋಕಾರ್ಪಣೆಗೊಳಿಸಿದರು. ಬಳ್ಳಾರಿಯ ಗಾಂಧಿಭವನದಲ್ಲಿ ಜರುಗಿದ ಮಾರ್ಕ್ಸ್ವಾದಿ ಚಿಂತಕ ಶಿವದಾಸ್‌ ಘೋಷ್‌ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಎಸ್‌ಯುಸಿಐ(ಸಿ) ಪಕ್ಷದಿಂದ ಪ್ರಕಟಣೆಗೊಂಡ ಕೃತಿಗಳನ್ನು ಪಕ್ಷದ ನಾಯಕರು ಲೋಕಾರ್ಪಣೆಗೊಳಿಸಿದರು.

click me!