
ಎಂ.ಅಫ್ರೆಜ್ ಖಾನ್
ರಾಮನಗರ (ಆ.20): ರೈತರು ಕೃಷಿ ಉತ್ಪನ್ನ ಹಾಗೂ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಲ್ಲಿ ತೊಡಗಿರುವ ಮಹಿಳೆಯರು ತಯಾರಿಸಿರುವ ಉತ್ಪನ್ನ ಮಾರಾಟ ಮಾಡಲು ವೇದಿಕೆ ಕಲ್ಪಿಸಿ, ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವುದಕ್ಕಾಗಿ ಜಿ.ಪಂ. ‘ಸಂಜೀವಿನ ಗ್ರಾಮೀಣ ಸಂತೆ‘ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಸಂಜೀವಿನಿ- ಕೆಎಸ್‌ಆರ್‌ಎಲ್‌ಪಿಎಸ್ ಯ ಯೋಜನೆಯಡಿ ರಚನೆಗೊಂಡಿರುವ ಮಹಿಳಾ ಸ್ವ ಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ - ಮಾರಾಟ ಹಾಗೂ ತೆನೆ ರೈತ ಉತ್ಪಾದಕರ ಕಂಪನಿಯಲ್ಲಿ ನೋಂದಾವಣೆಯಾದ ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಸಂಜೀವಿನಿ ಗ್ರಾಮೀಣ (ಲೋಕ) ಸಂತೆಯನ್ನು ಆಯೋಜಿಸಲಾಗುತ್ತಿದೆ. ಜಿ.ಪಂ., ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಲೋಕ, ರಾಮನಗರ ತಾಲೂಕಿನ ಸಂಜೀವಿನಿ ಒಕ್ಕೂಟಗಳು ಹಾಗೂ ತೆನೆ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಜಾನಪದ ಕಲಾವಿದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕದ ಬಯಲಲ್ಲಿ ಪ್ರತೀ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ಸಂಜೀವಿನಿ ಗ್ರಾಮೀಣ ಸಂತೆ ನಡೆಯಲಿದೆ. ರೈತರು, ಮಹಿಳಾ ಸ್ವ ಸಹಾಯ ಸಂಘಗಳು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು ಸಂಜೀವಿನ ಗ್ರಾಮೀಣ ಸಂತೆಯ ಮುಖ್ಯ ಉದ್ದೇಶ. ಎರಡು ಮೂರು ತಿಂಗಳ ಹಿಂದೆಯೇ ಸಂತೆ ಆರಂಭಿಸುವ ಕುರಿತು ಜಿ.ಪಂ. ಪ್ರಾಯೋಜಕತ್ವದ ಜವಾಬ್ದಾರಿ ಹೊತ್ತಿರುವ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿತ್ತು. ಆದರೆ, ಮಳೆಯ ಕಾರಣದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ.
ಬಯಲಲ್ಲಿಯೇ ಮಾರಾಟ: ಸುಂಕ ನಿಗದಿ
ಜಾನಪದ ಲೋಕ ಆವರಣದ ಬಯಲಲ್ಲಿ ಸಂತೆ ನಡೆಯಲಿದ್ದು, ಉದ್ಘಾಟನೆಯ ದಿನವಾದ ಶನಿವಾರ 10 ರಿಂದ 12 ಟೇಬಲ್ ಗಳನ್ನು ಹಾಕಿ ಮಾರಾಟ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ಭಾನುವಾರದಿಂದ ನೆಲದ ಮೇಲೆ ಟಾರ್ಪಲ್ ಹಾಕಿ, ನೆರಳಿಗಾಗಿ ಟಾರ್ಪಲ್ ಕಟ್ಟಿಕೊಂಡು ಸಾಂಪ್ರದಾಯಿಕ ಸಂತೆಯಂತೆ ನಡೆಯಲಿದೆ.
ಉತ್ಪನ್ನಗಳ ಮಾರಾಟಕ್ಕೆ ಸಂತೆಯಲ್ಲಿ ಭಾಗಿಯಾಗುವ ರೈತ ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳ ಪ್ರತಿ ಅಂಗಡಿಯಿಂದ ನೆಲ ಬಾಡಿಗೆ 50 ರು. ಮತ್ತು ಸ್ವಚ್ಛತೆಗಾಗಿ 50 ರು. ಸೇರಿ ಒಟ್ಟು 100 ರು. ಸುಂಕ ನಿಗದಿಪಡಿಸಲು ಚಿಂತನೆ ನಡೆದಿದೆ.
ಸಂತೆಯ ಮೊದಲ ದಿನ 5 ರಿಂದ 6 ಮಹಿಳಾ ಸಂಘ ಸಂಸ್ಥೆಗಳು ಹಾಗೂ 4 ರಿಂದ 5 ಮಂದಿ ರೈತರು ಉತ್ಪನ್ನಗಳ ಮಾರಾಟ ಮಾಡಲಿದ್ದು, ಮುಂದಿನ ಭಾನುವಾರದಿಂದ ಮಾರಾಟಗಾರರ ಸಂಖ್ಯೆ ಹೆಚ್ಚಳವಾಗಲಿದೆ. ಉತ್ಪನ್ನಗಳ ಸಾಗಾಣಿಕೆ ವೆಚ್ಚವನ್ನು ಸಂಪೂರ್ಣ ರೈತರು ಮತ್ತು ಗುಂಪುಗಳೇ ಭರಿಸಿಕೊಳ್ಳುತ್ತವೆ.
ಏನೇನು ಮಾರಾಟ: ರೈತರು ತರಕಾರಿ, ಸೊಪ್ಪು ಮಾರಾಟ ಮಾಡುವರು. ಇನ್ನು ಸ್ವ ಸಹಾಯ ಸಂಘಗಳು ತಯಾರಿಸಿರುವ ಮಸಾಲೆ ಪದಾರ್ಥ, ಜೇನು ತುಪ್ಪ, ಮೌಲ್ಯವರ್ಧಿತ ಉತ್ಪನ್ನಗಳು, ಟೆರಕೋಟ (ಮಣ್ಣಿನಿಂದ ಮಾಡಿದ ಕಲಾಕೃತಿಗಳು), ಅಡುಗೆ ಎಣ್ಣೆ ಉತ್ಪನ್ನಗಳು, ಮಾಗಡಿ ಕುದೂರು ರೇಷ್ಮೆ ಸೀರೆಗಳು, ನರ್ಸರಿ ಗಿಡಗಳು ಹಾಗೂ ಇನ್ನಿತರ ಗ್ರಾಮೀಣ ವಸ್ತುಗಳನ್ನು ಮಾರಾಟ ಮಾಡಲಿದ್ದಾರೆ.
ರಾಮನಗರ ಜಿ.ಪಂ., ರಾಮನಗರ ತಾ.ಪಂ. ಹಾಗೂ ಜಾನಪದ ಲೋಕದ ಸಹಯೋಗದೊಂದಿಗೆ ಸಂಜೀವಿನಿ- ಕೆಎಸ್‌ಆರ್‌ಎಲ…ಪಿಎಸ್ ಯ ಯೋಜನೆಯಡಿ ರಚನೆಗೊಂಡಿರುವ ಮಹಿಳಾ ಸ್ವ-ಸಹಾಯ ಸಂಘದವರಿಂದ ಸಂಜೀವಿನಿ ಗ್ರಾಮೀಣ ಸಂತೆಯನ್ನು ಆಗಸ್ವ್ 20 ಮತ್ತು 21 ರಂದು ಜಾನಪದ ಲೋಕದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5.30ರವೆರೆಗೆ ಆಯೋಜಿಸಲಾಗಿದೆ.
ಜಿ.ಪಂ.ಸಿಇಒ ದಿಗ್ವಿಜಯ್ ಬೋಡ್ಕೆ ಸಂತೆಗೆ ಚಾಲನೆ ನೀಡಲಿದ್ದಾರೆ. ಜಿ.ಪಂ ಯೋಜನಾ ನಿರ್ದೇಶಕ ಚಿಕ್ಕಸುಬ್ಬಯ್ಯ, ತಾ.ಪಂ. ಇಒ ಪ್ರದೀಪ್ ಭಾಗವಹಿಸಲಿದ್ದಾರೆ.
ಸಂಜೀವಿನಿ ಗ್ರಾಮೀಣ ಸಂತೆಯಲ್ಲಿ ನೋಂದಾಯಿತ ರೈತರು ತರಕಾರಿ, ಸೊಪ್ಪು, ಹಣ್ಣುಗಳನ್ನು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳು ಮೌಲ್ಯವರ್ಧಿತ ಉತ್ಪನ್ನಗಳು ಮಧ್ಯವರ್ತಿಗಳಿಲ್ಲದೇ ನೇರವಾಗಿ ಮಾರಾಟ ಮಾಡಬಹುದಾಗಿದೆ. ಇದೊಂದು ವಿಭಿನ್ನ ಪ್ರಯೋಗವಾಗಿದ್ದು, ಭಾನುವಾರದ ಸಂತೆಗೆ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸವಿದೆ.
- ನಂಜುಂಡಸ್ವಾಮಿ, ಸದಸ್ಯರು, ತೆನೆ ರೈತ ಉತ್ಪಾದಕರ ಕಂಪನಿ.