ವಿದ್ಯಾರ್ಥಿಗಳ ಮೇಲೆ ಬಸ್‌ ಹರಿಸಲು ಮುಂದಾದ KSRTC ಚಾಲಕ ಸಸ್ಪೆಂಡ್!

By Web DeskFirst Published Sep 25, 2019, 11:24 AM IST
Highlights

ಶಾಲಾ ಬಾಲಕರು ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ವಿದ್ಯಾರ್ಥಿಗಳ ಮೇಲೆ ಹರಿಸಲು ಯತ್ನಿಸಿದ ಸುದ್ದಿ ಬಿತ್ತರಿಸಿದ ಸುವರ್ಣನ್ಯೂಸ್ ವರದಿಗೆ ಉಪಮುಖ್ಯಮಂತ್ರಿ  ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸವದಿ ಏನು ಹೇಳಿದ್ದಾರೆ ಎನ್ನುವುದನ್ನು ಮುಂದೆ ನೋಡಿ.

ಬೆಳಗಾವಿ, (ಸೆ.25): ಜಿಲ್ಲೆಯ ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್‌ ನಿಲ್ಲಿಸುವಂತೆ ಕೈ ತೋರಿದರೂ ಉದ್ಧಟತನ ತೋರಿದ ಚಾಲಕ ವಿದ್ಯಾರ್ಥಿಗಳ ಮೇಲೆ ಬಸ್‌ ಹರಿಸಲು ಯತ್ನಿಸಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಕಾಲೇಜಿಗೆ ಹೊರಟ ಹುಡುಗರ ಮೇಲೆ ಬಸ್ ಹಾಯಿಸಲೆತ್ನಿಸಿದ ಚಾಲಕ.. ವಿಡಿಯೋ ವೈರಲ್

ಇದೀಗ ಈ ಪ್ರಕಣ ತೀವ್ರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಬಸ್‌ ಚಾಲಕನನ್ನು ಅಮಾನತು ಮಾಡಿ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಇಂದು (ಬುಧವಾರ) ಆದೇಶ ಹೊರಡಿಸಿದ್ದಾರೆ. 

ದಾಂಡೇಲಿ ಘಟಕದ ಎ.ಎಸ್.ಎಫ್. ಶೇಖ್ ಎಂಬಾತನೇ ಅಮಾನತುಗೊಂಡಿರುವ ಬಸ್‌ ಚಾಲಕ.

ವಿದ್ಯಾರ್ಥಿಗಳು ಎಂದಿನಂತೆ ನಿನ್ನೆ (ಮಂಗಳವಾರ) ನಂದಗಡ ಮತ್ತು ಖಾನಾಪುರದ ವಿವಿಧ ಕಾಲೇಜುಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತ ಬೇಕವಾಡ  ಬಸ್‌ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಬಂದ ಹಳಿಯಾಳದಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್‌ಗೆ ಕೈ ತೋರಿಸಿದ್ದರು.

ಆಗ ಚಾಲಕ ಬಸ್‌ ಚಾಲನೆಯ ವೇಗ ಕಡಿಮೆ ಮಾಡಿ ನಿಲ್ಲಿಸಿದಂತೆ ಮಾಡಿದ. ಬಳಿಕ ವಿದ್ಯಾರ್ಥಿಗಳು ಬಸ್‌ ಏರಲು ಮುಂದಾದಾಗ ಏಕಾಏಕಿ ಬಸ್‌ ಚಾಲನೆ ಮಾಡಿಕೊಂಡು ಹೊಗಿದ್ದರು.

ಈ ವೇಳೆ ಕೆಲ ವಿದ್ಯಾರ್ಥಿಗಳು ಬಸ್‌ ಎದುರು ಹೋಗಿ ತಡೆಯಲು ಪ್ರಯತ್ನಿಸಿದರೂ ಚಾಲಕ ಬಸ್‌ ಚಾಲನೆ ಮಾಡಿಕೊಂಡು ಹೋಗಿದ್ದಾನೆ.  ಇದನ್ನೆಲ್ಲ ಸ್ಥಳೀಯರೊಬ್ಬರು ಚಿತ್ರೀಕರಣ ಮಾಡಿದ್ದು ಸಾಮಾಜಿಕ ತಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

 ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜಿಕ ಜಾಲತಾಣದ ಮೂಲಕ  ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚಾಲಕನ ಈ ಕ್ರಮಕ್ಕೆ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಈ  ಘಟನೆ ಬಗ್ಗೆ ಸುವರ್ಣನ್ಯೂಸ್ ಮಾಡಿದ ವರದಿಗೆ ಸ್ಪಂದಿಸಿರುವ ಸಾರಿಗೆ ಸಚಿವ, ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೆಳಗಾವಿ ಬಸ್ ಡಿಪೋಗೆ ಕರೆ ಮಾಡಿ ಚಾಲಕನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು.

ಇಂತಹ ಘಟನೆಗಳು ಮತ್ತೆ ನಡೆಯಬಾರದು. ಈ ಬಗ್ಗೆ ಚಾಲಕನ ವಿರುದ್ಧ ತನಿಖೆ ನಡೆಸಿ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಬೆಳಗಾವಿ ಡಿಪೋ ಮ್ಯಾನೇಜರ್‌ಗೆ ದೂರವಾಣಿ ಕರೆ ಮೂಲಕ ಖಡಕ್ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

"

click me!