ಶಿವಮೊಗ್ಗ: ಡಿವಿಎಸ್ ಹಬ್ಬ-2026ರ ಅದ್ದೂರಿ ಆಚರಣೆ, ವಜ್ರ ಮಹೋತ್ಸವ, ಸುವರ್ಣ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಸಮಾಗಮ!

Published : Nov 28, 2026, 12:12 PM IST
DVS Habba 2026

ಸಾರಾಂಶ

ನಗರದ ಪ್ರತಿಷ್ಠಿತ ದೇಶೀಯ ವಿದ್ಯಾಶಾಲಾ ಸಮಿತಿ (ರಿ.) ವತಿಯಿಂದ ಆಯೋಜಿಸಿರುವ ಮೂರು ದಿನಗಳ ಡಿವಿಎಸ್ ಹಬ್ಬ–2026 ಉತ್ಸವ ನವೆಂಬರ್ 27ರಿಂದ ಆರಂಭವಾಗಿದೆ. ಮೂರು ದಿನಗಳ ಉತ್ಸವದಲ್ಲಿ ವಜ್ರ ಮಹೋತ್ಸವ, ಸುವರ್ಣ ಮಹೋತ್ಸವ, ಹಳೆಯ ವಿದ್ಯಾರ್ಥಿಗಳ ಸಮಾಗಮ!

ಶಿವಮೊಗ್ಗ: ನಗರದ ಪ್ರತಿಷ್ಠಿತ ದೇಶೀಯ ವಿದ್ಯಾಶಾಲಾ ಸಮಿತಿ (ರಿ.) ವತಿಯಿಂದ ನವೆಂಬರ್ 27ರಿಂದ 29ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಡಿವಿಎಸ್ ಹಬ್ಬ–2026 ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ 75ನೇ ವರ್ಷಾಚರಣೆ, ಕಾಲೇಜಿನ ವಜ್ರ ಮಹೋತ್ಸವ, ವಾರ್ಷಿಕೋತ್ಸವಗಳು, ಪ್ರತಿಭಾ ಪುರಸ್ಕಾರ ಮತ್ತು ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮಗಳು ನಡೆಯಲಿವೆ.

ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ಸಂಪೂರ್ಣ ವಿವರಗಳು ಇಲ್ಲಿವೆ ಉತ್ಸವದ ಮೊದಲ ದಿನವಾದ ನವೆಂಬರ್ 27ರಂದು ಬೆಳಿಗ್ಗೆ 10 ಗಂಟೆಯಿಂದ ಹಲವು ಶೈಕ್ಷಣಿಕ ಚಟುವಟಿಕೆಗಳು ಹಾಗೂ ಕಾರ್ಯಾಗಾರಗಳು ಆರಂಭವಾಗಲಿವೆ. ಮಧ್ಯಾಹ್ನ 2.30ಕ್ಕೆ ಡಿವಿಎಸ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರಂಭಗಳು ನಡೆಯಲಿದ್ದು, ಸಂಜೆ 5.30ಕ್ಕೆ ವಾರ್ಷಿಕ ಮಹೋತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಡಿವಿಎಸ್ ಹಬ್ಬಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ನಾಮಫಲಕ ಅನಾವರಣ ಮತ್ತು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಹಾಗೆಯೇ ಎರಡನೇ ದಿನವಾದ ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2.30ಕ್ಕೆ ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧ ವಿಭಾಗಗಳ ವಾರ್ಷಿಕ ಸಮಾರಂಭಗಳು ಹಾಗೂ ಸಂಜೆ 5.30ಕ್ಕೆ ಕಾಲೇಜುಗಳ ವಿಶೇಷ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕೊನೆಯ ದಿನವಾದ ನವೆಂಬರ್ 29ರಂದು ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಪ್ರಾಥಮಿಕ ಶಾಲೆ ಹಾಗೂ ಸಂಗೀತ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಸಂಜೆಯ ವೇಳೆ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಈ ಮೂರು ದಿನಗಳ ಸಂಭ್ರಮದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಡಿವಿಎಸ್ ಹಬ್ಬದಲ್ಲಿ ಪ್ರಮುಖವಾಗಿ ಐದು ವಿಚಾರಗಳಿಗೆ ಆದ್ಯತೆ

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆರಂಭವಾಗಿ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವ.

ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜು ಆರಂಭವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ.

ದೇಶೀಯ ವಿದ್ಯಾಶಾಲಾ ಸಂಸ್ಥೆಯ 75ನೇ ವರ್ಷದ ಸ್ಮರಣಾರ್ಥ ಸ್ಮರಣ ಸಂಚಿಕೆ ಬಿಡುಗಡೆ.ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದ ಕಡಿದಾಳ್ ಮಂಜಪ್ಪ ಅವರ ಹೆಸರನ್ನು ವಿನೋಬನಗರ ಪ್ರೌಢಶಾಲೆಗೆ ನಾಮಕರಣ.

ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳ ಸಮಾಗಮ.

ಈ ಐದು ಪ್ರಮುಖ ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಮೂರು ದಿನಗಳ ಹಬ್ಬವನ್ನು ರೂಪಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಬಸಪ್ಪ ಗೌಡರು ಹಾಗೂ ಕಾರ್ಯದರ್ಶಿ ಎಸ್.ಪಿ. ದಿನೇಶ್ ಅವರು ಹಬ್ಬದ ಮೂರು ದಿನಗಳ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳ ಸಮಾಗಮ ಮತ್ತು ಸಂಸ್ಥೆಯ ಶೈಕ್ಷಣಿಕ ಪರಂಪರೆಯ ಕುರಿತು ಮಾಹಿತಿ ನೀಡಿದರು.

PREV
Read more Articles on
click me!

Recommended Stories

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಸಂಪೂರ್ಣ ಅವೈಜ್ಞಾನಿಕ: ಪ್ರಧಾನಿ ಮೋದಿ, ಹೆಚ್‌ಡಿಕೆ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
₹2000 ಹೆಚ್ಚಳ ಭರವಸೆ ನೀಡಿದ ಸರ್ಕಾರ 'ನಮಗೆ ಸಾಲಲ್ಲ ನಾವು ಕದಲಲ್ಲ' ಪ್ರತಿಭಟನೆ ಹಿಂಪಡೆಯಲು ಆಶಾ ಕಾರ್ಯಕರ್ತೆಯರ ನಕಾರ!