ಸೋರುತಿದೆ ಪಂಚಕೂಟ ಬಸದಿ ಮಾಳಿಗೆ

By divya perlaFirst Published Jul 16, 2019, 9:24 AM IST
Highlights

ಸಾವಿರ ವರ್ಷ ಇತಿಹಾಸದ ಹೊಂಬುಜ ಪಂಚಕೂಟ ಬಸದಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಬಸದಿಯೊಳಗೆ ನೀರು ಸೋರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹೊಂಬುಜ ಪಂಚಕೂಟ ಬಸದಿ ಶಿಥಿಲಾವಸ್ಥೆಗೆ ತಲುಪಿರುವುದಲ್ಲದೆ ಕಟ್ಟಡ ಅನೈತಿಕ, ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಡುತ್ತಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಶಿವಮೊಗ್ಗ(ಜು.16): ಸಾವಿರ ವರ್ಷದ ಇತಿಹಾಸ ಹೊಂದಿರುವ ಹೊಂಬುಜ ಪಂಚಕೂಟ ಬಸದಿ ಸಂಪೂರ್ಣ ಶಿಥಿಲಗೊಂಡು ಮೇಲ್ಚಾವಣಿಯಿಂದ ನೀರು ಸೋರುತ್ತಿದೆ. ಐತಿಹಾಸಿಕ ಪರಂಪರೆ ಹೊಂದಿರುವ ಬಸದಿ ಕುಸಿಯುವ ಅಪಾಯದಲ್ಲಿದ್ದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸದಿರುವುದು ಬಸದಿ ಆರಾಧಕರಿಗೆ, ಸಂಶೋಧಕರಿಗೆ, ಪ್ರವಾಸಿಗರಿಗೆ ನೋವುಂಟು ಮಾಡಿದೆ.

ವಿಶ್ವದಾದ್ಯಂತ ತನ್ನದೇ ಆದ ವಿಶಿಷ್ಟಸ್ಥಾನವನ್ನು ಹೊಂದಿರುವ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಹೊಂಬುಜ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಆಡಳಿತಕ್ಕೊಳಪಟ್ಟಿದೆ. ಈ ಐತಿಹಾಸಿಕ, ಶ್ರೀಮಂತ ಪರಂಪರೆಯ ಕ್ಷೇತ್ರವನ್ನು ನಿರ್ಲಕ್ಷಿಸಿರುವುದಕ್ಕೆ ಹುಬ್ಬಳ್ಳಿಯ ಮಹಾವೀರ ಕುಂದೂರು, ಸಂಶೋಧಕ ಎಚ್‌.ನಿತೀನ್‌ ಜೈನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೊಯ್ಸಳರ ಕಾಲದ ಬಸದಿ, ನಿಸಿಧಿ ಶಾಸನ ಶಿಲ್ಪ ಪತ್ತೆ

7ನೇಯ ಶತಮಾನದಿಂದ ಆರಂಭವಾಗುವ ಈ ಕ್ಷೇತ್ರದ ಇತಿಹಾಸ ಅತಿ ವಿಶಿಷ್ಟವಾದುದು. ಕಾಲಕಾಲಕ್ಕೆ ಸಂತರು ಇಲ್ಲಿ ಹಲವು ಬಸದಿಗಳನ್ನು ನಿರ್ಮಿಸುತ್ತಾ ಬಂದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಚಟ್ಟಲದೇವಿಯಿಂದ ಕ್ರಿ.ಶ. 1077ರಲ್ಲಿ ನಿರ್ಮಿಸಲಾದ ಸುಮಾರು 1000 ವರ್ಷಗಳ ಇತಿಹಾಸವನ್ನು ಹೊಂದಿರುವ ಪಂಚಕೂಟ ಬಸದಿ. ಸಾಮಾನ್ಯವಾಗಿ ಬಸದಿ-ದೇವಸ್ಥಾನಗಳಲ್ಲಿ ಒಂದು ಗರ್ಭಗುಡಿ ಇದ್ದರೆ ಇಲ್ಲಿ ಐದು ಗರ್ಭಗುಡಿಗಳಿವೆ. ಅಲ್ಲದೆ ಇಲ್ಲಿ ಹಲವು ಶಾಸನಗಳನ್ನು ನಾವು ಕಾಣಬಹುದು. ಇತಿಹಾಸ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದ ನಾಡಿನ ಅಮೂಲ್ಯ ಆಸ್ತಿ ಈ ಪಂಚಕೂಟ ಬಸದಿ.

ಅನೈತಿಕ ಚಟುವಟಿಕೆ ತಾಣ:

ಹೊಂಬುಜ ಪಂಚಕೂಟ ಬಸದಿ ಶಿಥಿಲಾವಸ್ಥೆಗೆ ತಲುಪಿರುವುದಲ್ಲದೆ ಕಟ್ಟಡ ಅನೈತಿಕ, ಅಕ್ರಮ ಚಟುವಟಿಕೆಯ ತಾಣವಾಗಿ ಮಾರ್ಪಡುತ್ತಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಂಚಬಸದಿಯನ್ನು ನೋಡಲು ಬರುವ ಭಕ್ತರು ಮತ್ತು ಪ್ರವಾಸಿಗರು ಇಲ್ಲಿನ ಅವ್ಯವಸ್ಥೆಯನ್ನು ಕಂಡು ಬಂದದಾರಿಗೆ ಸುಂಕವಿಲ್ಲವೆಂದು ಹೇಳಿಕೊಂಡು ವಾಪಾಸ್ಸಾಗುವಂತಾಗಿದೆ. ಇನ್ನಾದರೂ ದುಸ್ಥಿತಿಯರುವ ಈ ಪಂಚಬಸದಿಯ ಜೀರ್ಣೋದ್ದಾರಕ್ಕೆ ಪುರಾತತ್ವ ಇಲಾಖೆ ಮುಂದಾಗಬೇಕಿದೆ ಎಂಬುದು ಪ್ರವಾಸಿಗರ ಒತ್ತಾಯವಾಗಿದೆ.

click me!