ಮಿಂಟೋ ದುರಂತಕ್ಕೆ ಬಯಲಾಯ್ತು ಕಾರಣ!

Published : Jul 16, 2019, 08:49 AM IST
ಮಿಂಟೋ ದುರಂತಕ್ಕೆ ಬಯಲಾಯ್ತು ಕಾರಣ!

ಸಾರಾಂಶ

ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಕಾರಣ ಬಯಲಾಗಿದೆ. ಇಲ್ಲಿ ಸರ್ಜರಿ ಮಾಡಿಸಿಕೊಂಡ ಹಲವರಿಗೆ ದೃಷ್ಟಿ ಮರಳಿ ಬಾರದಿರುವುದಕ್ಕೆ ಡ್ರಗ್ ಕಾರಣ ಎನ್ನಲಾಗಿದೆ. 

 ಬೆಂಗಳೂರು : [ಜು.16]   ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 19 ಮಂದಿಗೆ ದೃಷ್ಟಿದೋಷ ಉಂಟಾಗಲು ಔಷಧಿಯ ಅಡ್ಡ ಪರಿಣಾಮ (ಡ್ರಗ್‌ ರಿಯಾಕ್ಷನ್‌) ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದ್ದು, ಶಸ್ತ್ರಚಿಕಿತ್ಸೆಗೆ ಬಳಸಿದ್ದ ಆ್ಯಕ್ಯೂಜೆಲ್‌ 2% (ಬ್ಯಾಚ್‌ ನಂ.ಒಯುವಿ 190203)ನ ಜೆಲ್‌ಅನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜು.9ರಂದು ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 24 ಮಂದಿಯಲ್ಲಿ 19 ಮಂದಿಗೆ ಕಣ್ಣಿನ ದೃಷ್ಟಿಈವರೆಗೂ ಮರಳಿಲ್ಲ. ಈ ರೋಗಿಗಳಿಗೆ ಉಂಟಾಗಿರುವ ದೃಷ್ಟಿದೋಷ ಸರಿಪಡಿಸಲು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಇದರ ಬೆನ್ನಲ್ಲೇ ಘಟನೆ ಬಗ್ಗೆ ಸೋಮವಾರ ಪ್ರಯೋಗಾಲಯದ ವರದಿ ಬಂದಿದ್ದು, ಔಷಧಿಯ ಅಡ್ಡಪರಿಣಾಮದಿಂದ ರೋಗಿಗಳ ಕಣ್ಣಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದೆ ಎನ್ನಲಾಗಿದೆ. ಈ ಸಂಬಂಧ ಔಷಧ ನಿಯಂತ್ರಕರು ಔಷಧದ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆ ನಡೆಸಿ ಮುಂದಿನ 15-20 ದಿನಗಳಲ್ಲಿ ವರದಿ ನೀಡುವುದಾಗಿ ತಿಳಿಸಿದ್ದಾರೆ. ಇದಲ್ಲದೇ ಬಿಎಂಸಿಆರ್‌ಐ ಡೀನ್‌, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೂ ವರದಿಯ ಪ್ರತಿಯನ್ನು ಕಳುಹಿಸಲಾಗಿದೆ. ಇದಲ್ಲದೆ ನಿಮ್ಹಾನ್ಸ್‌ ಮತ್ತು ಖಾಸಗಿ ಪ್ರಯೋಗಾಲಯಗಳಿಗೂ ಔಷಧದ ಮಾದರಿಯನ್ನು ಕಳುಹಿಸಲಾಗಿದೆ. ಈ ಎಲ್ಲ ವರದಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಿಂಟೊ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌ ಮಾಹಿತಿ ನೀಡಿದ್ದಾರೆ.

 ಒಂದೇ ಬ್ಯಾಚ್‌ ಔಷಧಿಯಿಂದ ಸಮಸ್ಯೆ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆ್ಯಕ್ಯೂಜೆಲ್‌ 2% ಹೆಸರಿನ ಜೆಲ್‌ ಅನ್ನು ಬಳಸಲಾಗುತ್ತದೆ. ಅದೇ ರೀತಿ ಜು.6ರಂದು ಮಂಗಳವಾರ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕ್ಯೂಜೆಲ್‌ 2% (ಬ್ಯಾಚ್‌ ನಂ. ಒಯುವಿ 190203) ಔಷಧಿ ಬಳಕೆ ಮಾಡಲಾಗಿತ್ತು. ನಂತರ ರೋಗಿಗಳಿಗೆ ದೃಷ್ಟಿಸಮಸ್ಯೆ  ಕಾಣಿಸಿಕೊಂಡಿದೆ. ಈ ಮೊದಲು ಎಲ್ಲ ಶಸ್ತ್ರ ಚಿಕಿತ್ಸೆಯಲ್ಲೂ ಇದೇ ಔಷಧ ಬಳಕೆ ಮಾಡಲಾಗಿತ್ತು. ಆದರೆ, ಅಂದು ಹೊಸದಾಗಿ (ಬ್ಯಾಚ್‌ ನಂ. ಒಯುವಿ 190203) ಬಂದಿದ್ದ ಔಷಧಿ ಬಳಕೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಆ್ಯಕ್ಯೂಜೆಲ್‌ 2% (ಹೈಡ್ರಾಕ್ಸಿಪ್ರಾಪ್ಲಿ ಮೆಥೈಲ್‌ಸೆಲ್ಯುಲೊಸ್‌ ಆಪ್ತಮಾಲಿಕ್‌ ಸಲ್ಯೂಷನ್ಸ್‌) ಆಪ್ತಮಾಲಿಕ್‌ ವಿಸಿಯೋಸರ್ಜಿಕಲ್‌ ಡಿವೈಸ್‌ (ಬ್ಯಾಚ್‌ ನಂ. ಒಯುವಿ 190203) ಔಷಧವನ್ನು ಬಳಕೆ ಮಾಡಬಾರದು ಎಂದು ಆದೇಶಿಸಿದ್ದಾರೆ.

PREV
click me!

Recommended Stories

ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್