ಬಾರದ ಮಳೆ: ಕಲಬುರಗಿ ಜಿಲ್ಲಾದ್ಯಂತ ಬತ್ತಿದ ಕೆರೆ

By Kannadaprabha NewsFirst Published Jul 13, 2023, 9:45 PM IST
Highlights

ಮಳೆ ಮೋಡ ಕಾಣದ ರೈತರ ಮೊಗದಲ್ಲಿ ಚಿಂತೆ, ಆತಂಕಗಳ ಕಾರ್ಮೋಡ ಮಡುಗಟ್ಟಿದೆ. ಹಣದ ಬೆಳೆಗಳ ಮುಂಗಾರು ಕೈ ಕೊಟ್ಟರೆ ಮುಂದೇನು? ಆರಿದ್ರಾ ಬರಲೇ ಇಲ್ಲ, ಮುಂದೆ ಆರು ಮಳೆಗಳೂ ಬರೋದಿಲ್ಲವೆಂದು ಜಿಲ್ಲೆಯ ಅನ್ನದಾತರು ಮುಗಿಲು ನೋಡುತ್ತಿದ್ದಾರೆ.

ಶೇಷಮೂರ್ತಿ ಅವಧಾನಿ

ಕಲಬುರಗಿ(ಜು.13):  ಮಳೆಗಾಲ ಜಿಲ್ಲೆಗೆ ಕಾಲಿಟ್ಟು ಬರೋಬ್ಬರಿ ಒಂದೂವರೆ ತಿಂಗಳು ಉರುಳಿತು, ಇಂದಿಗೂ ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು ಯಾವ ಮಳೆಯೂ ವೈನಾಗಿ ಜಿಲ್ಲಾದ್ಯಂತ ಸುರಿದಿಲ್ಲ. ವಾಡಿಕೆಯ 100 ಮಿಮಿ ಮಳೆ ಬೇಡಿಕೆ ಇದ್ದರೂ ಸುರಿದದ್ದು ಇಪ್ಪತ್ತೈದು ಮಿಲಿ ಮೀಟರ್‌ ಮಳೆ ಮಾತ್ರ!

ಮಳೆ ಬಾರದೆ ಕಲಬುರಗಿ ಜಿಲ್ಲಾದ್ಯಂತ ಬರಗಾಲದ ಕಾರ್ಮೋಡ ಕವಿಯುತ್ತಿದೆ. ಆಷಾಢದ ಗಾಳಿ ಒಂದೇ ಸವನೆ ಬೀಸುತ್ತಿದೆ, ಗಾಳಿಯ ರಭಸಕ್ಕೆ ಆಗಾಗ ಅಲ್ಲಿ ಇಲ್ಲಿ ಕಾಣು ಮಳೆ ಮೋಡಗಳೂ ತೊಗರಿ ಕಣಜದ ಮೇಲೆ ನಿಲ್ಲದೆ ಓಡಿ ಹೋಗುತ್ತಿವೆ. ಇನ್ನು ಅಲ್ಪ ಹಸಿಯಲ್ಲಿ ಬಿತ್ತನೆಗೆ ಮುಂದಾಗಿರುವ ರೈತರು ಭೂಮಿಗೆ ಬಿಡುತ್ತಿರುವ ಬೀಜ ಸರಿಯಾಗಿ ಭೂತಾಯಿ ಮಡಿಲು ಸೇರದೆ ಆಷಾಢ ಗಾಳಿ ರಭಸಕ್ಕೆ ಹಾರಿ ಹೋಗುತ್ತಿವೆ!
ಹೀಗಾಗಿ ಮಳೆ ಮೋಡ ಕಾಣದ ರೈತರ ಮೊಗದಲ್ಲಿ ಚಿಂತೆ, ಆತಂಕಗಳ ಕಾರ್ಮೋಡ ಮಡುಗಟ್ಟಿದೆ. ಹಣದ ಬೆಳೆಗಳ ಮುಂಗಾರು ಕೈ ಕೊಟ್ಟರೆ ಮುಂದೇನು? ಆರಿದ್ರಾ ಬರಲೇ ಇಲ್ಲ, ಮುಂದೆ ಆರು ಮಳೆಗಳೂ ಬರೋದಿಲ್ಲವೆಂದು ಜಿಲ್ಲೆಯ ಅನ್ನದಾತರು ಮುಗಿಲು ನೋಡುತ್ತಿದ್ದಾರೆ.

ಕಲಬುರಗಿ ಹಸಿರೀಕರಣಕ್ಕೆ ಹೆಚ್ಚು ಕೆಲ್ಸ ಮಾಡಿ: ಖಂಡ್ರೆ ಕರೆ

ಒಣಗಿದ ಕೆರೆ, ಬಾವಿಗಳು:

ಮಳೆ ಸುರಿಯದ ಕಾರಣ ನಗರ ಹಾಗೂ ಜಿಲ್ಲಾದ್ಯಂತ ಇರುವ ಕೆರೆ ಕಟ್ಟೆಗಳು ಒಣಗಿ ಹೋಗಿವೆ. ಶರಣಬಸವೇಶ್ವರ ಕೆರೆ, ಗೊಬ್ಬೂರ ಕೆರೆ, ಭೋಸ್ಗಾ, ಖಾಜಾ ಕೋಟನೂರ್‌ ಕೇರೆಗಳು ನೀರಿಲ್ಲದೆ ಬಣಗುಡುತ್ತಿವೆ. ಜಿಲ್ಲಾದ್ಯಂತ ಬಹುತೇಕ ಕೆರೆಗಳ ಕಥೆ ಇದೇ ಆಗಿದೆ.

ರೋಹಿಣಿ ಮಳೆಯಾದರೇ ಓಣಿಯೆಲ್ಲಾ ಕಾಳು ಎಂಬ ನಾಣ್ಣುಡಿ ಸುಳ್ಳಾಗುತ್ತಿದೆ, ಆರಿದ್ರಾ ಮಲೆ ಬಾರದಿದ್ರೆ ಆರು ಮಳೆ ಬರೋದಿಲ್ಲ ಎಂಬ ಮಾತೇ ಈ ಸುಗ್ಗಿಯೊಳ್ಗ ಖರೆ ಆಗುವ್ಹಂಗ ಕಾಣ್ತದೆ ಎಂದು ರೈತರು ಗಾಬರಿಯಲ್ಲಿದ್ದಾರೆ. ರೈತರ ಆತಂಕಕ್ಕೆ ಕಳೆದ ವರ್ಷದ ಮತ್ತು ಪ್ರಸಕ್ತ ಮುಂಗಾರು ಸಾಕ್ಷಿ. ಭಾರಿ ನಿರೀಕ್ಷೆಗಳ ಮೂಟೆ ಹೊತ್ತಿದ್ದ ರೈತರು ಅವನ್ನೆಲ್ಲ ತಮ್ಮ ಹೆಗಲಿಂದ ಕೆಳಗಿಳಿಸಿ ಮಳೆ, ಮೋಡ ಅದೆಲ್ಲಾದರೂ ಕಂಡೀತೆ? ಎಂದು ಹಣೆ ಮೇಲೆ ಕೈ ಹೊತ್ತು ಕಾಯುವಂತಾಗಿದೆ. ಮಳೆರಾಯನ ಮುನಿಸಿಗೆ ತೊಗರಿ ಕಣದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಇನ್ನು ಭೀಮಾ, ಅಮರ್ಜಾ, ಬೆಣ್ಣೆತೊರಾ, ಗಂಡೋರಿ ಇಲ್ಲೆಲ್ಲೂ ನೀರಿಲ್ಲ, ಹಿನ್ನೀರೂ ಬತ್ತಿ ಜಲಾಶಯಗಳು ಬರಿದಾಗಿದ್ದರಿಂದ ಇವುಗಳನ್ನೇ ನಂಬಿ ಕಬ್ಬು ಬಾಳೆ ಬೇಸಾಯಕ್ಕೆ ಮುಂದಾಗಿದ್ದ ನದಿ, ನಾಲಾಗಳ ಇಕ್ಕೆಲಗಳ ಸಾವಿರಾರು ಹೆಕ್ಟೇರ್‌ ರೈತರು ಪರೇಶಾನ್‌. ನೀರಿನ ಕೊರತೆಗೆ ಬಾಳೆ, ಕಬ್ಬು ಒಣಗಿ ನಿಂತಿದೆ. ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್‌ನಷ್ಟುಕಬ್ಬು, ಬಾಳೆ ಒಣಗಿದೆ.

ಬರಗಾಲದ ಛಾಯೆ:

‘ಕನ್ನಡಪ್ರಭ’ ಆಳಂದ ಜಿಲ್ಲೆಯ ಕಡಗಂಚಿ, ಮಾಡಿಯಾಳ ಇಲ್ಲೆಲ್ಲಾ ಹೊಲಗದ್ದೆ ಸುತ್ತಾಡಿದಾಗ ನೂರಾರು ಹೆಕ್ಟೇರ್‌ ಕಬ್ಬು, ಬಾಳೆ ಒಣಗಿ ನಿಂತಿರೋ ದಾರುಣ ನೋಟಗಳೇ ಕಣ್ಣಿಗೆ ರಾಚಿದವು. ಅನೇಕ ರೈತರು ಈ ಬಾರಿ ತಮ್ಮ ಗತಿ ದೇವರೇ ಬಲ್ಲ, ಬದುಕೇ ಬರ್ಬಾದ್‌ ಆಗಿದೆ. ಮಳೆ ಬಾರದೆ ನಮ್ಮದೆಲ್ಲವೂ ಶೂನ್ಯ ಎಂದೆಲ್ಲಾ ನಿರಾಶೆಯ ಮಾತನ್ನಾಡಿ ಗೋಳಾಡಿದರು.

ಅನ್ಯ ಇಲಾಖೆಗಳಿಗೆ ಹೋಗಿರುವ ಪಾಲಿಕೆ ಸಿಬ್ಬಂದಿ ನಿಯೋಜನೆ ತಕ್ಷಣ ರದ್ದು: ಪ್ರಿಯಾಂಕ್‌ ಖರ್ಗೆ

ಆಳಂದ- ಕಲಬುರಗಿ ರಸ್ತೆಯ ಇಕ್ಕೆಲಗಳಲ್ಲಿರುವ ಕಬ್ಬು, ಬಾಳೆ ಸಂಪೂರ್ಣ ಒಣಗಿ ನಿಂತಿದೆ. ರೈತರೆಲ್ಲರೂ ಹೊಲಗದ್ದೆ ಹಸನು ಮಾಡಿದ್ದು ಮಳೆಗಾಗಿ ಮುಗಿಲು ದಿಟ್ಟಿಸುತ್ತ ಕುಳಿತುಕೊಂಡಿದ್ದಾರೆ. ಅಫಜಲ್ಪುರ ಭೀಮಾ ತೀರ, ಸೇಡಂ ಕಾಗಿಣಾ ತೀರ, ಚಿತ್ತಾಪುರ, ಕಲಬುರಗಿ, ಜೇವರ್ಗಿ, ಕಾಳಗಿ, ಶಹಾಬಾದ್‌ ಸೇರಿದಂತೆ ಎಲ್ಲಾಕಡೆ ಇದೇ ಗೋಳು. ಚಿಂಚೋಳಿಯಲ್ಲಿ ಪರವಾಗಿಲ್ಲ ಎಂಬಂತೆ ಮಳೆಯಾಗಿದೆ. ಬೇರೆ ತಾಲೂಕು ಹೋಲಿಸಿದರೆ ಇಲ್ಲಿ ಅಲ್ಪ ಕಾಡಿರೋದರಿಂದ ಮಳೆ ದೇವರು ಸದಾ ಇಲ್ಲಿ ಒಳಿದಿರುತ್ತಾನೆ.

8 ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆ ಗುರಿ ಹೊಂದಿದ್ದರೂ ಮುಂಗಾರು ಅವಧಿ ಒಂದೂವರೆ ತಿಂಗಳು ಕಳೆದರೂ ಜಿಲ್ಲಾದ್ಯಂತ ಇದುವರೆಗೂ ಬಿತ್ತಲ್ಪಟ್ಟ ಪ್ರದೇಶ ಕೇವಲ 25 ಸಾವಿರ ಹೆಕ್ಟೇರ್‌ ಬೀಜ, ಗೊಬ್ಬರ ಸಂಗ್ರಹಿಸಿಟ್ಟುಕೊಂಡು ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಅನೇಕ ಸಂಪ್ರದಾಯ ಮಾಡಿದರೂ ಮಳೆರಾಯ ಬಾರದ್ದಿಂದ ರೈತರು ಭಗವಂತನ ಮೊರೆ ಹೋಗಿದ್ದಾರೆ.

click me!