* ಹನಿ ನೀರಾವರಿ ತಂದ ಸಂಕಟ
* ಪ್ರತಿ ದಿನ ಒಬ್ಬ ರೈತನಿಗೆ ಕೇವಲ ಒಂದು ತಾಸು ಮಾತ್ರ ನೀರು ಪೂರೈಕೆ
* ಹನಿ ನೀರಾವರಿ ಒಂದು ರಂಧ್ರದಿಂದ ದಿನಕ್ಕೆ ರೈತರ ಹೊಲಕ್ಕೆ ಒಂದು ಲೀಟರ್ ಮಾತ್ರ ಪೂರೈಕೆ
ಶಿವಕುಮಾರ ಕುಷ್ಟಗಿ
ಗದಗ(ಸೆ.29): ಶಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಲಭ್ಯವಾಗುವ ಅಲ್ಪ ನೀರನ್ನೇ ಹೆಚ್ಚು ಭೂಮಿಗೆ ಬಳಕೆ ಮಾಡಿ, ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರೂಪಿತವಾಗಿರುವ ಸೂಕ್ಷ್ಮ ನೀರಾವರಿ ಯೋಜನೆಗಾಗಿ ಗುತ್ತಿಗೆ ಪಡೆದ ಕಂಪನಿಯು ರೈತರ(Farmers) ಜಮೀನುಗಳಲ್ಲಿ ಅಳವಡಿಸಲಾಗಿದ್ದ ಪೈಪ್‌ಲೈನ್‌ಗಳೇ ಇಂದು ರೈತರ ಹೊಲಕ್ಕೆ ತಂತಿ ಬೇಲಿಯಾಗಿ ಮಾರ್ಪಟ್ಟಿವೆ.
undefined
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕಂಪನಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅನುಷ್ಠಾನದ ಹಾದಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ ಇಂದು ರೈತರೆಲ್ಲಾ ಹೊಲಕ್ಕೆ ಅಳವಡಿಸಿದ್ದ ಪೈಪ್‌ಗಳನ್ನು ತೆಗೆದು ಹೊಲಕ್ಕೆ ಜನ ಜಾನುವಾರುಗಳು ಬರದಂತೆ ಹೊಲದ ಸುತ್ತಲೂ ಅವುಗಳನ್ನೇ ಕಟ್ಟಿ ಹೊಲಕ್ಕೆ ಬೇಲಿ ಮಾಡಿಕೊಂಡಿದ್ದು, ಈ ಯೋಜನೆ ತೀವ್ರತೆಯ ಬಗ್ಗೆ ಗುತ್ತಿಗೆ ಪಡೆದ ಕಂಪನಿಗಳು ಹೊಂದಿರುವ ಆಸಕ್ತಿಗೆ ಇದೆಲ್ಲಾ ಕನ್ನಡಿಯಾಗಿದೆ.
ಒಂದು ತಾಸು ಮಾತ್ರ ನೀರು.
ಪ್ರಾಯೋಗಿಕ ಹಂತದಲ್ಲಿರುವ ಈ ಹನಿ ನೀರಾವರಿ(Drip Irrigation) ಯೋಜನೆಯ ಮೂಲಕ ಪೈಪ್‌ಲೈನ್ ಅಳವಡಿಕೆ ಮಾಡಿರುವ ಪ್ರತಿಯೊಬ್ಬ ರೈತನಿಗೂ 24 ಗಂಟೆಯಲ್ಲಿ ನೀರು ಪೂರೈಕೆ ಮಾಡುವುದು ಕೇವಲ ಒಂದು ಗಂಟೆ ಮಾತ್ರ, ಈ ಒಂದು ಗಂಟೆಯಲ್ಲಿಯೇ ರೈತರ ಜಮೀನಿನ ನೀರಾವರಿ ಪೂರ್ಣಗೊಳ್ಳಬೇಕು, ಇನ್ನು ಪ್ರತಿ ರೈತರ ಹೊಲದಲ್ಲಿ 1.22 ಮೀಟರ್ ಅಂತರದಲ್ಲಿ ಲ್ಯಾಟರಲ್ ಪೈಪ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಒಂದು ಪೈಪ್ 500 ಮೀಟರ್ ಉದ್ದವಿರುತ್ತದೆ. ಈ ಪೈಪ್‌ನಲ್ಲಿ ಪ್ರತಿ ಒಂದುವರೆ ಅಡಿಗೆ ಒಂದು ರಂಧ್ರವಿದ್ದು, ಪ್ರತಿ ರಂದ್ರದ ಮೂಲಕ ಒಂದು ದಿನಕ್ಕೆ ಒಂದು ಲೀಟರ್ ನೀರು ಮಾತ್ರ ರೈತರ ಹೊಲಕ್ಕೆ ಬರಲಿದ್ದು, ಇದರಂತೆ ಹೊಲದಲ್ಲಿ ಎಷ್ಟು ಪೈಪ್‌ಗಳನ್ನು ಅಳವಡಿಕೆ ಮಾಡಲಾಗಿದೆ ಅದರ ಆಧಾರದಲ್ಲಿ ಅಷ್ಟು ಲೀಟರ್ ನೀರು ರೈತರಿಗೆ ಲಭ್ಯವಾಗಲಿದೆ. 7 ರಿಂದ 8 ಜನ ರೈತರ ಜಮೀನುಗಳನ್ನು ಸೇರಿಸಿ ಒಂದು ಸೋನಾಲೈಟ್ ವಾಲ್ ನಿರ್ಮಾಣ ಮಾಡಿದ್ದು ಅಲ್ಲಿಂದಲೇ ನೀರನ್ನು ಹರಿಸಲಾಗುತ್ತದೆ.
ಕೊಪ್ಪಳ: ಕೃಷ್ಣಾ ಬಿ ಸ್ಕೀಂ ಯೋಜನೆ ಸಂಪೂರ್ಣ ಜಾರಿಯಾಗಬೇಕು, ಸೊಬರದಮಠ
ಏತಕ್ಕೆ ಸಾಲುತ್ತದೆ.
ಸೂಕ್ಷ್ಮ ನೀರಾವರಿ ಅನುಷ್ಠಾನವಾಗುತ್ತಿರುವ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಬಸಾಪೂರ, ತಾಮ್ರಗುಂಡಿ ಜಾಗದಲ್ಲಿ ಕೆಲವೆಡೆ ಉತ್ತಮವಾದ ಕಪ್ಪು ಮಣ್ಣಿನ ಯರಿ ಭೂಮಿ, ಇನ್ನು ಕೆಲವೆಡೆ ಮಸಾರಿ ಕೃಷಿ ಭೂಮಿ ಇದೆ. ಈ ನೂತನ ನೀರಾವರಿ ಯೋಜನೆಯ ಮೂಲಕ ರೈತರಿಗೆ ದಿನಕ್ಕೆ ಕೇವಲ ಒಂದು ತಾಸು ನೀರು ಕೊಟ್ಟಲ್ಲಿ ಜಮೀನು ತೊಯ್ಯಲು ಸಾಯವೇ ಇಲ್ಲ, ಇನ್ನು ಯರಿ ಭೂಮಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಪ್ರತಿ ರಂದ್ರದಿಂದ ಕೇವಲ ಒಂದು ಲೀಟರ್ ನೀರು ಹರಿಸುತ್ತಾ ಹೋದರೆ ಹೊಲ ಸಂಪೂರ್ಣ ತೊಯ್ಯಬೇಕಾದಲ್ಲಿ ಎಷ್ಟು ದಿನಗಳ ಬೇಕಾಗುತ್ತದೆ. ಅಷ್ಟು ದಿನಗಳ ಕಾಲ ಕಾಯುತ್ತಾ ಕುಳಿತುಕೊಂಡರೆ ಹೊಲದಲ್ಲಿನ ಇನ್ನುಳಿದ ಭಾಗದಲ್ಲಿನ ಬೆಳೆ ಒಣಗಿ ಹೋಗುತ್ತದೆ ಹಾಗಾಗಿ ರೈತರು ಅವರು ಕೊಡುವ ನೀರು ಏತಕ್ಕೂ ಸಾಲುವುದಿಲ್ಲ ಎಂದು ಆಕ್ರೋಶಗೊಂಡ ಅಳವಡಿಸಿದ್ದ ಪೈಪ್‌ಲೈನ್ ತೆಗೆದುಹಾಕಿದ್ದಾರೆ.
ಪ್ಯಾಕೇಜ್-1 ರಲ್ಲಿ 10080 ಹೆಕ್ಟೇರ್ ಪ್ರದೇಶವನ್ನು ನೀರಾವರಿ ಸೌಲಭ್ಯಕ್ಕೆ ಒಳಪಡಿಸಲಾಗಿದ್ದು, ಒಟ್ಟು 10 ಉಪವಲಯಗಳ ಮೂಲಕ ನೀರು ಹರಿಸಲಾಗುತ್ತಿದ್ದು, ಕಳೆದ ಹಲವಾರು ದಿನಗಳಿಂದ ನಿತ್ಯವೂ ರೈತರು ಹೊಲಕ್ಕೆ ನೀರು ಬರುತ್ತದೆ ಎಂದು ಕಾಯ್ದು, ಕಾಯ್ದು ಸುಸ್ತಾಗಿದ್ದು, ಕೊನೆಗೆ ಕಂಪನಿಯವರೆಗೂ ದಿನಕ್ಕೆ ಒಂದು ತಾಸು ಮಾತ್ರ ನೀರು ಕೊಡುತ್ತೇವೆ ಎಂದು ಹೇಳುತ್ತಿದ್ದಂತೆ ಹೊಲದಲ್ಲಿನ ಪೈಪ್‌ಗಳನ್ನು ಹಾಕಿಕೊಂಡು ಕುಳಿತರೆ ಇರುವ ಬೆಳೆಗಳು ಬರುವುದಿಲ್ಲ ಎಂದು ಅವುಗಳನ್ನೆಲ್ಲಾ ತೆಗೆದು ಹೊಲದ ಸುತ್ತಲೂ ಜನ, ಜಾನುವಾರುಗಳು ಬರದಂತೆ ಬೇಲಿ ಮಾಡಿಕೊಂಡಿದ್ದು, ಹೊಲದಲ್ಲಿ ಮಳೆಯಾಧಾರಿತವಾಗಿ ಈರುಳ್ಳಿ, ಸೂರ್ಯಕಾಂತಿ, ಮೆಣಸಿನಕಾಯಿ ಬೆಳೆಗಳನ್ನು ಬೆಳೆದಿದ್ದಾರೆ.
ಹುನಗುಂದ: ಮರೋಳ ಹನಿ ನೀರಾವರಿ ಯೋಜನೆಯಲ್ಲಿ ಅವ್ಯವಹಾರ, ತನಿಖೆಗೆ ಆದೇಶ
ಯೋಜನೆ ಅನುಷ್ಠಾನ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಇದರ ಬಗ್ಗೆ ಎಷ್ಟು ನಿರ್ಲಕ್ಷ್ಯ ಮತ್ತು ತಾತ್ಸರ ಹೊಂದಿದ್ದಾರೆ ಎಂದರೆ ಹೊಲದಲ್ಲಿ ಕಂಪನಿ ಅಳವಡಿಸಿದ ಪೈಪ್‌ಲೈನ್‌ಗಳನ್ನು ತೆಗೆದು ಹೊಲಕ್ಕೆ ಬೇಲಿ ರೂಪದಲ್ಲಿ ರೈತರು ಹಾಕಿದ್ದರೂ ಅದನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ನಿತ್ಯವೂ ಅದೇ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಆದರೂ ಯಾಕೆ ಹೀಗೆ ಮಾಡಿದ್ದೀರಿ ? ಇಷ್ಟೊಂದು ಬೆಲೆಬಾಳುವ ಪೈಪ್‌ಲೈನ್ ಹೀಗೆ ಅಳವಡಿಸಿದರೆ ಹೇಗೆ? ಇದರಿಂದ ನಿಮಗೆ ನಷ್ಟ ಎಂದು ರೈತರೊಂದಿಗೆ ಚರ್ಚಿಸುವ ವ್ಯವಧಾನವೂ ಕಂಪನಿಯ ಅಧಿಕಾರಿಗಳಿಗಿಲ್ಲ.
ನಮ್ಮ ಹೊಲಕ್ ನೀರಾವರಿ ಅಕ್ಕೆ‘ತಿ ಅಂತಾ ಖುಷಿ ಆಗಿದ್ವಿ.. ಆದ್ರ ಅವ್ರ ಒಂದ್ ದಿನಕ್ಕೆ ಒಂದ್ ತಾಸ್ ನೀರು ಕೊಡತಾರಂತ.. ಹಂಗಾದ್ರ ಬೆಳಿ ಹ್ಯಾಂಗ್ ಬೆಳಿತಾವ ಹೇಳ್ರೀ.. ಮತ್ ಆ ಪೈಪ್‌ಲೈನ್ ಹೊಲದಾಗ ಇಟ್ಕೊಂಡ್ ಕುಂತ್ರ.. ಹೊಲ್ದಾಗ್ ಬ್ಯಾರೆ ಬೆಳಿ ಬಿತ್ತಾಕು ಆಗುದಿಲ್ಲ, ದಿನಕ್ಕೊಂದು ತಾಸ್ ನೀರು ಕೊಟ್ರ.. ಒಂದ ಕಡೆ ಹೊಲಾ ತೊಯ್ಯುದ್ರಾಗ.. ಇನ್ನೊಂದ್ ಕಡೆ ಕಸ ಬೆಳೆದಿರತ್ ಹಾಂಗಾಗಿ ಈ.. ಪೈಪ್ ಬ್ಯಾಡಾ.. ಇವ್ರ ನೀರು ಬ್ಯಾಡ್ ಅಂತಾ ತೆಗದ್ ಹಾಕಿವಿ ಅಂತ ಹನಿ ನೀರಾವರಿಯಿಂದ ಬೇಸತ್ತಿರುವ ಗ್ರಾಮಸ್ಥರ ಒಮ್ಮತದ ಅಭಿಪ್ರಾಯವಾಗಿದೆ.