ಅಸ್ಪೃಶ್ಯತೆ ಪ್ರಕರಣ ಮರುಕಳಿಸದಿರಲಿ: ಸಚಿವ ಹಾಲಪ್ಪ ಆಚಾರ್‌

By Kannadaprabha News  |  First Published Sep 29, 2021, 12:39 PM IST

*  ಘನತೆಗೆ ತಕ್ಕಂತೆ ಸಿದ್ದರಾಮಯ್ಯ ಮಾತನಾಡಬೇಕು
*  ಬರಿ ಕಾನೂನಿಂದ ಅಸ್ಪೃಶ್ಯತೆ ನಿಯಂತ್ರಣ ಸಾಧ್ಯವಿಲ್ಲ
*  ಇಂತಹ ಆಚರಣೆಯಲ್ಲಿ ತೊಡಗಿರುವವರ ವಿರುದ್ಧ ಶಿಸ್ತು ಕಾನೂನು ಕ್ರಮ 
 


ಕೊಪ್ಪಳ(ಸೆ.29):  ಅಸ್ಪೃಶ್ಯತೆ ಪ್ರಕರಣಗಳು ಮನುಕುಲಕ್ಕೆ ಅಪಮಾನ., ಆದರೆ, ಜಿಲ್ಲೆಯಲ್ಲಿ ಈಗಗಾಲೇ ಇಂಥ ಎರಡು ಪ್ರಕರಣಗಳು ನಡೆದಿರುವುದು ನೋವಿನ ಸಂಗತಿಯಾಗಿದ್ದು, ಇನ್ಮುಂದೆ ನಡೆಯದಂತೆ ನೋಡಿಕೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಅಸ್ಪೃಶ್ಯತೆಯು(Untouchability) ಸಂಪ್ರದಾಯದಂತೆ ನಡೆಯುತ್ತಿದ್ದು, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಅಸ್ಪೃಶ್ಯತೆ ವಿರೋಧಿ ಕಾನೂನುಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಬೇಕು. ಇಂತಹ ಆಚರಣೆಯಲ್ಲಿ ತೊಡಗಿರುವವರ ವಿರುದ್ಧ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಠಿಣ ಕಾನೂನು ಕ್ರಮಗಳಿಂದ ಇಂತಹ ಆಚರಣೆಯಲ್ಲಿ ತೊಡಗುವವರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದರು.

Tap to resize

Latest Videos

ಕೊಪ್ಪಳದಲ್ಲಿ ಮತ್ತೊಂದು ಹೇಯ ಕೃತ್ಯ: ದೇಗುಲ ಪ್ರವೇಶಿಸಿದ ದಲಿತನಿಗೆ 11,000 ದಂಡ

ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈ ರೀತಿಯ ಕಾರ್ಯವೈಖರಿ ಸರಿಯಲ್ಲ. ಆದ್ದರಿಂದ ಇನ್ನುಮುಂದೆ ಯಾವುದೇ ಅಂಗನವಾಡಿಯ ಕಾರ್ಯಕರ್ತೆ ಅಥವಾ ಸಹಾಯಕಿಯರ ಹುದ್ದೆ ಖಾಲಿಯಾದಲ್ಲಿ 15 ದಿನದೊಳಗೆ ಅರ್ಜಿ ಆಹ್ವಾನಿಸಿ, ನಿಯಮದ ಪ್ರಕಾರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಾಕಿ ಉಳಿದ ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಕೆಕೆಆರ್‌ಡಿಬಿಯಿಂದ ಒದಗಿಸಿದ ಅನುದಾನದಲ್ಲಿ ಆಯಾ ಕ್ಷೇತ್ರದ ಶಾಸಕರಿಂದ ಅನುಮತಿ ಪಡೆದು ಆಯಾ ತಾಲೂಕಿನ ಅಂಗನವಾಡಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿಗಳಿಗೆ ಪೂರೈಸುವ ಮೊಟ್ಟೆಗಳ ಪೂರೈಕೆದಾರರಿಗೆ ನಿಗದಿತ ಸಮಯಕ್ಕೆ ಬಿಲ್‌ ಪಾವತಿಸಿ. ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಒನ್‌ ಸ್ಟಾಫ್‌ ಸೆಂಟರ್‌ನ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಬಾಕಿ ಕೆಲಸಗಳನ್ನು ಬೇಗನೆ ಮುಗಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಕೈಯಿಂದ ಕಲ್ಲು ಒಡೆಯುವ ಕಾರ್ಮಿಕರಿಗೆ ಬ್ಲಾಕ್‌ ಗುರುತಿಸಿ ಅನುಮತಿ ನೀಡಿ. ಯಲಬುರ್ಗಾ ತಾಲೂಕಿನ ವಜ್ರಬಂಡಿ ವ್ಯಾಪ್ತಿಯಲ್ಲಿ ರಸ್ತೆಗೆ ಹತ್ತಿರ ಇರುವ ಪ್ರದೇಶವನ್ನು ಗುರುತಿಸಿ ಕೈಯಿಂದ ಕಲ್ಲು ಒಡೆಯುವವರಿಗೆ ಬ್ಲಾಕ್‌ ಗುರುತಿಸಿಕೊಡಿ. ಇಲಾಖೆಗೆ ಬರುವ ವಿವಿಧ ಅನುಮತಿ ಕುರಿತ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ. ಕಾನೂನು ಚೌಕಟ್ಟಿನೊಳಗೆ ಬರುವ ವಿಷಯಗಳಿಗೆ ಅನುಮತಿ ನೀಡಲು ಅನಗತ್ಯ ವಿಳಂಬ ಮಾಡಬೇಡಿ. ಇಲಾಖೆಯ ವ್ಯಾಪ್ತಿಗೆ ಬರುವ ಸರಕು ಸಾಗಾಣಿಕೆಗೆ ರಾಜಧನ ಸಂಗ್ರಹವನ್ನು ಹೆಚ್ಚಿಸಿ. ಇದರಿಂದ ಜಿಲ್ಲೆಯ ಆದಾಯವೂ ಹೆಚ್ಚುತ್ತದೆ. ಇನ್ನು ಗಣಿಗಾರಿಕೆಗೆ ಅರಣ್ಯ ಇಲಾಖೆಯಿಂದ 15 ದಿನಗಳೊಳಗೆ ಎನ್‌ಒಸಿ ಕುರಿತ ಅರ್ಜಿಗಳು ಕಡ್ಡಾಯವಾಗಿ ವಿಲೇವಾರಿ ಆಗಬೇಕು. ಸಣ್ಣ ಪುಟ್ಟರೈತರು ತಮ್ಮ ಕೃಷಿ ಜಮೀನಿಗಾಗಿ ಸಾಗಿಸುವ ಕಂಬಗಳು, ಸಾಮಾನ್ಯ ಕಟ್ಟಡ ನಿರ್ಮಾಣಕ್ಕೆ ಬಳಸುವ ಮರಗಳ ಸಾಗಾಣಿಕೆ ಅನಗತ್ಯ ತೊಂದರೆ ನೀಡಬೇಡಿ. ವಾಸ್ತವದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುವ ಸರಕುಗಳ ಮೇಲೆ ಗಮನವಹಿಸಿ. ರೈತರಿಗೆ, ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದರು.

ಜಿಲ್ಲೆಯ ರೈತರಿಗೆ ಡಿಎಪಿ ಗೊಬ್ಬರದ ಬೇಡಿಕೆ ಹೆಚ್ಚಿದ್ದು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಬೇಡಿಕೆ ಅನುಸರ ರಸಗೊಬ್ಬರ ಪೂರೈಸಲು ಪ್ರಸ್ತಾವನೆ ಸಲ್ಲಿಸಿ. ಈ ಬಗ್ಗೆ ಕೃಷಿ ಸಚಿವರಿಗೂ ಪತ್ರ ಬರೆಯಿರಿ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಗಿಣಿಗೇರಾ ರಸ್ತೆ ದುರಸ್ತಿ ಕಾರ್ಯವನ್ನು ಬೇಗನೆ ಮುಗಿಸಿ ಹಾಗೂ ಜಿಲ್ಲೆಯ ವಿವಿಧೆಡೆ ಮಳೆಯಿಂದ ಹಾಳಾಗಿರುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಡಿಸಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಎಸ್ಪಿ ಟಿ. ಶ್ರೀಧರ್‌, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಎನ್‌. ಹೇಮಂತ್‌ಕುಮಾರ್‌, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ದೇಗುಲ ಪ್ರವೇಶಿಸಿದ 2 ವರ್ಷದ ದಲಿತ ಮಗು : ದಂಡ ವಿಧಿಸಿದ ಮುಖಂಡರು!

ಮಿಯ್ಯಾಪುರ, ನಾಗನಕಲ್‌ ಘಟನೆ ದುರದೃಷ್ಟಕರ

ಮಿಯ್ಯಾಪುರ ಹಾಗೂ ನಾಗನಕಲ್‌ ಅಸ್ಪೃಶ್ಯತೆ ಘಟನೆಗಳು ದುರದೃಷ್ಟಕರವಾಗಿದ್ದು, ಇವುಗಳಿಂದ ಅತ್ಯಂತ ನೋವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, 12ನೇ ಶತಮಾನದಲ್ಲಿಯೇ ಈ ಕುರಿತು ಜಾಗೃತಿ ಮೂಡಿಸಲಾಗಿದೆ. ಈಗಲೂ ಇಂಥ ಘಟನೆ ನಡೆಯುತ್ತವೆ ಎಂದರೆ ಬೇಸರದ ಸಂಗತಿ ಎಂದರು. ಬರಿ ಕಾನೂನಿಂದ ಇವುಗಳ ನಿಯಂತ್ರಣ ಸಾಧ್ಯವಿಲ್ಲ, ನಮ್ಮೆಲ್ಲ ಮನಸ್ಥಿತಿ ಬದಲಾಗಬೇಕು. ಸಮಾಜದಲ್ಲಿ ಇದನ್ನು ಯಾರೂ ಒಪ್ಪುವುದಿಲ್ಲ ಮತ್ತು ಘಟನೆಯ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಘನತೆಗೆ ತಕ್ಕಂತೆ ಮಾತನಾಡಬೇಕು: 

ಆರ್‌ಎಸ್‌ಎಸ್‌ನದು(RSS) ತಾಲಿಬಾನ್‌(Taliban) ಸಂಸ್ಕೃತಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿರುವುದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಹಾಲಪ್ಪ ಆಚಾರ್‌ ತಿರುಗೇಟು ನೀಡಿದ್ದಾರೆ. ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ(Koppal) ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆಗೆ ಈಗಾಗಲೇ ಮುಖ್ಯಮಂತ್ರಿಗಳು ಸರಿಯಾಗಿಯೇ ಉತ್ತರ ನೀಡಿದ್ದಾರೆ. ಹೀಗಾಗಿ, ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ, ಯಾರೇ ಆಗಲಿ, ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು. ಅಂದಾಗಲೇ ಜನರು ನಮಗೆ ಗೌರವ ನೀಡುತ್ತಾರೆ. ಇದನ್ನು ನಾನಂತೂ ತಿಳಿದುಕೊಂಡಿದ್ದೇನೆ ಎಂದಷ್ಟೇ ಹೇಳಿದರು.
 

click me!