
ಬೆಂಗಳೂರು(ಏ.06): ಈ ಬಾರಿ ಹಿಂಗಾರು ಮಳೆ ಮತ್ತು ಬೇಸಿಗೆ ಮಳೆ(Rain) ಉತ್ತಮವಾಗಿ ಸುರಿದಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಸಿದ್ದು, ರಾಜ್ಯದ ಹೆಚ್ಚಿನ ಕಡೆ ಈ ಹಿಂದಿನ ವರ್ಷಗಳಂತೆ ಏಪ್ರಿಲ್‌ಗೇ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ. ಆದರೂ ಕಲ್ಯಾಣ ಕರ್ನಾಟಕದ(Kalyana Karnataka) 6 ಜಿಲ್ಲೆಗಳ 350ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಜನ ಜೀವಜಲಕ್ಕಾಗಿ ಪರದಾಟ ಶುರುವಾಗಿರುವ ಬಗ್ಗೆ ವರದಿಯಾಗಿದೆ.
ಕೊಪ್ಪಳ, ಬಳ್ಳಾರಿ, ವಿಜಯನಗರ, ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳ ಹಳ್ಳಿಗಾಡಿನ ಪ್ರದೇಶಗಳಲ್ಲಿ ನೀರಿನ(Water) ಅಭಾವ ಹೆಚ್ಚಾಗಿದ್ದು ರಾಜ್ಯದ ಮತ್ತೆಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿಲ್ಲ. ಸದ್ಯದ ಪರಿಸ್ಥಿತಿ ಹೀಗಿದ್ದರೂ ಮೇ ತಿಂಗಳಲ್ಲಿ ಯಾದಗಿರಿ, ಚಿತ್ರದುರ್ಗ, ತುಮಕೂರು, ಉತ್ತಕ ಕನ್ನಡ, ಕೊಡಗು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳಿಲ್ಲದಿಲ್ಲ.
ಪಂಚನದಿಗಳ ಬೀಡು ವಿಜಯಪುರದಲ್ಲಿ ಹನಿ ನೀರಿಗೂ ಹಾಹಾಕಾರ: ಬೀದಿಗಿಳಿದ ನಾರಿಯರು..!
ಕೊಪ್ಪಳದಲ್ಲಿ 150 ಕಡೆ ಜಲದಾಹ:
ಕೊಪ್ಪಳ(Koppal) ಜಿಲ್ಲೆಯಲ್ಲಿ ಅತಿ ಹೆಚ್ಚು ಕುಡಿಯುವ ನೀರಿನ(Drinking Water) ಸಮಸ್ಯೆಯಾಗಿದೆ. ಜಿಲ್ಲೆಯ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ(Villagers) ಜಲದಾಹ ಶುರುವಾಗಿದ್ದು ಇದಕ್ಕಾಗಿ ಜಿಲ್ಲಾಡಳಿತ ಕೋಟ್ಯಂತರ ರು. ನೀರಿನಂತೆ ವ್ಯಯಿಸಿದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ಕೊಪ್ಪಳ ತಾಲೂಕಿನ 28 ಗ್ರಾಮಗಳಲ್ಲಿ ಪ್ರತಿನಿತ್ಯವೂ ನೀರಿಗಾಗಿ ಬಿಂದಿಗೆ ಹಿಡಿದು ಕಾಯಬೇಕಾದ ಪರಿಸ್ಥಿತಿ ಇದ್ದರೆ ಗಂಗಾವತಿ ತಾಲೂಕಿನ 15 ಗ್ರಾಮಗಳಿಗೆ ಟ್ಯಾಂಕರ್ ಮೂಲಕ, ಕುಷ್ಟಗಿ ತಾಲೂಕಿನಲ್ಲಿ ಖಾಸಗಿಯವರ 42 ಬೋರ್‌ವೆಲ್‌ಗಳಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ.
ರಾಯಚೂರಿನ 145 ಕಡೆ ತತ್ವಾರ:
ರಾಯಚೂರು(Raichur) ಜಿಲ್ಲೆಯ 145 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಅದರಲ್ಲಿ ರಾಯಚೂರು ತಾಲೂಕಿನಲ್ಲಿ 25, ಮಾನ್ವಿಯಲ್ಲಿ 26, ದೇವದರ್ಗದಲ್ಲಿ 17, ಲಿಂಗಸುಗೂರಿನಲ್ಲಿ 38 ಮತ್ತು ಸಿಂಧನೂರಿನಲ್ಲಿ ಅತೀ ಹೆಚ್ಚು 39 ಗ್ರಾಮಗಳನ್ನು ಸಮಸ್ಯಾತ್ಮಕ ಪ್ರದೇಶಗಳೆಂದು ಗುರುತಿಸಲಾಗಿದೆ.
ಬೀದರಿನ 26 ಕಡೆ ತೀವ್ರ ಸಮಸ್ಯೆ:
ಬೇಸಿಗೆ ಬಿಸಿಲಿನ(Summer) ತಾಪಕ್ಕೆ ಔರಾದ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮಗಳು ಮತ್ತು ತಾಂಡಾ ಸೇರಿದಂತೆ ಸುಮಾರು 26 ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಬಾದಲಗಾಂವ್, ಚಕ್ಲಿಯ ಕೆಲೆವುಅನೇಕ ಕಡೆಗ ಔರಾದ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿಯೂ ಕೂಡ ನೀರಿನ ಸಮಸ್ಯೆ ಎದುರಾಗಿದ್ದು ಹಲವು ಕಡೆಗಳಲ್ಲಿ ನೀರು ಬರುವುದೇ ನಿಂತು ಹೋಗಿದೆ.
ಮುಂದಿನ ವರ್ಷಾಂತ್ಯಕ್ಕೆ 110 ಹಳ್ಳಿಗಳಿಗೆ ಕುಡಿವ ನೀರು: ಸಿಎಂ ಬೊಮ್ಮಾಯಿ
ಬಳ್ಳಾರಿ ಜಿಲ್ಲೆಯಲ್ಲಿ 13 ಗ್ರಾಮದಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದೆ. ಕಂಪ್ಲಿ ತಾಲೂಕಿನ ನೆಲ್ಲುಡಿ ಕೊಟ್ಟಾಲ್ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆಯಿದ್ದರಿಂದ ಸುಮಾರು ಒಂದೂವರೆ ಕಿ.ಮೀ. ದೂರ ತೆರಳಿ ಕಾಲುವೆಯಿಂದ ನೀರು ತರುವಂತಾಗಿದೆ. ಇನ್ನು ತುಂಗಾಭದ್ರಾ ಜಲಾಶಯವನ್ನು ಒಡಲಲ್ಲೇ ಇರಿಸಿಕೊಂಡಿದ್ದರೂ ವಿಜಯನಗರ ಜಿಲ್ಲೆಯ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ.
ಕಲಬುರಗಿಯಲ್ಲಿ 6 ದಿನಕ್ಕೊಮ್ಮೆ ನೀರು:
ಕಲಬುರಗಿ(Kalaburagi) ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟಾಗಿ ನೀರಿನ ಸಮಸ್ಯೆ ಇಲ್ಲದಿದ್ದರೂ ಕಲಬುರಗಿ ಮಹಾನಗರದ ಅಲ್ಲಲ್ಲಿ ಸಮಸ್ಯೆ ಶುರುವಾಗಿದೆ. 3 ದಿನಕ್ಕೊಮ್ಮೆ ನೀರು ಪೂರೈಕೆ ಇದ್ದದ್ದು ಬೇಸಿಗೆ ಶುರುವಾದ ಮೇಲೆ 6 ದಿನಕ್ಕೊಮ್ಮೆ ಆಗಿದೆ. ನಗರದ 55 ವಾರ್ಡ್‌ಗಳ ಪೈಕಿ 25ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ನಿಧಾನಕ್ಕೆ ಕಾಣತೊಡಗಿದೆ. ಇದಕ್ಕೆ ತಾಂತ್ರಿಕ ದೋಷವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಯಾದಗಿರಿ ಜಿಲ್ಲೆಯಲ್ಲಿ ಸದ್ಯ ದೊಡ್ಡ ಪ್ರಮಾಣದಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲವಾದರೂ ಆರು ತಾಲೂಕುಗಳ 24 ಗ್ರಾಮಗಳನ್ನು ಸಂಭವನೀಯ ಸಮಸ್ಯಾತ್ಮಕ ಗ್ರಾಮಗಳೆಂದು ಜಿಲ್ಲಾ ಪಂಚಾಯಿತಿ ಗುರುತಿಸಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಗಳಲ್ಲೂ 171 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಪಟ್ಟಿಮಾಡಲಾಗಿದೆ.
ಎಲ್ಲೆಲ್ಲಿ ನೀರಿಗೆ ತತ್ವಾರ?
ಜಿಲ್ಲೆ-ಗ್ರಾಮ/ವಾರ್ಡು
1.ರಾಯಚೂರು-145
2.ಕೊಪ್ಪಳ-150
3.ಬೀದರ್-26
4.ಕಲಬುರಗಿ-25
5.ಬಳ್ಳಾರಿ-13
6.ವಿಜಯನಗರ-10