ಬರಿದಾದ ಭಾಗಮಂಡಲ ತ್ರಿವೇಣಿ ಸಂಗಮ, ಪಿಂಡ ಪ್ರದಾನಕ್ಕೂ ನದಿಯಲ್ಲಿ ನೀರಿಲ್ಲ!

By Gowthami K  |  First Published Jun 21, 2023, 8:56 PM IST

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ  ಭಾಗಮಂಡಲದಲ್ಲಿರುವ  ಕಾವೇರಿಯ ಪುಣ್ಯಕ್ಷೇತ್ರ ತ್ರಿವೇಣಿ ಸಂಗಮ ಸಂಪೂರ್ಣ ಬರಿದಾಗಿದೆ. ಪಿಂಡ ಪ್ರದಾನಕ್ಕೂ ನದಿಯಲ್ಲಿ ನೀರಿಲ್ಲ.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.21): ಕೊಡಗಿನ ಕುಲದೇವಿ ಕಾವೇರಿ ತಾಯಿ ಹುಟ್ಟಿ ಹರಿಯುವ ಮೂಲ ಸ್ಥಾನದಲ್ಲಿಯೇ ಕಾವೇರಿ ಬತ್ತಿ ಹೋಗುವ ಸ್ಥಿತಿ ಬಂದಿದೆ. ಪರಿಣಾಮ ಕಾವೇರಿ ಭಕ್ತರು ಆತಂಕಪಡುವಂತಹ ಪರಿಸ್ಥಿತಿ ಎದುರಾಗಿದೆ.  ಕಾವೇರಿಯ ಪುಣ್ಯಕ್ಷೇತ್ರ ತ್ರಿವೇಣಿ ಸಂಗಮ ಬರಿದಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಇರುವ ತ್ರಿವೇಣಿ ಸಂಗಮ ಸಂಪೂರ್ಣ ಬರಿದಾಗಿದೆ. ಪಿಂಡ ಪ್ರದಾನ ಮಾಡುವ ಜನರು ಸಂಗಮದ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದು ನಂಬಿಕೆ. ಆದರೆ ಈಗ ಸಂಗಮದಲ್ಲಿ ಸ್ನಾನ ಮಾಡುವುದಕ್ಕೂ ನೀರಿಲ್ಲ. ಅಷ್ಟರ ಮಟ್ಟಿಗೆ ಮಳೆ ಕೊರತೆಯಾಗಿದ್ದು ಕಾವೇರಿ ಒಡಲಲ್ಲಿಯೇ ಬರದ ಪರಿಸ್ಥಿತಿ ಎದುರಾಗಿದೆ.

Tap to resize

Latest Videos

undefined

ತ್ರಿವೇಣಿ ಸಂಗಮದಲ್ಲಿ ನೀರಿಲ್ಲದೆ ಸಂಪೂರ್ಣ ನೆಲ ಕಾಣಿಸುತ್ತಿದೆ. ಕನ್ನಿಕೆ ಮತ್ತು ಸುಜ್ಯೋತಿ ನದಿಗಳಲ್ಲಿ ಸಣ್ಣ ಪ್ರಮಾಣದ ನೀರು ಹರಿಯುತ್ತಿದ್ದು, ಜನರು ನದಿಗೆ ಇಳಿದರೂ ಹೆಜ್ಜೆ ಮುಳುಗದಷ್ಟು ಕಡಿಮೆ ನೀರಿದೆ. ನದಿಯ ಮಧ್ಯ ಭಾಗದಲ್ಲಿಯೇ ನೆಲ ಕಾಣಿಸುತ್ತಿದ್ದು, ಚಿಕ್ಕಮಕ್ಕಳು ಒಂದರ ಮೇಲೊಂದು ಕಲ್ಲು ಜೋಡಿಸಿ ಆಟವಾಡುತ್ತಿದ್ದಾರೆ. ಅಷ್ಟು ಪ್ರಮಾಣದಲ್ಲಿ ನೀರು ಕಡಿಮೆ ಆಗಿರುವುದರಿಂದ ಕಾವೇರಿ ಭಕ್ತರು ಆತಂಕಪಡುವಂತೆ ಆಗಿದೆ. ಕೊಡಗಿನ ಜನರು ಯಾರೇ ಮೃತಪಟ್ಟರು ಅವರ ಕುಟುಂಬದವರು ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡುತ್ತಾರೆ.

Mysuru Bengaluru Expressway Accident: ಮೈ-ಬೆಂ ದಶಪಥ ಹೆದ್ದಾರಿ ಮತ್ತೊಂದು ಭೀಕರ

ಇಲ್ಲಿ ಪಿಂಡ ಪ್ರದಾನ ಮಾಡಿದರೆ ಮೃತರ ಆತ್ಮಕ್ಕೆ ಶಾಂತಿ ದೊರೆತು, ಅವರಿಗೆ ಮೋಕ್ಷ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಮೃತರ ತಿಥಿ ಕರ್ಮಗಳನ್ನು ಮನೆಯಲ್ಲಿ ಮಾಡಿ ಸಂಗಮಕ್ಕೆ ಬರುವ ಜನರು ಅಲ್ಲಿ ತಲೆ ಬೋಳಿಸಿಕೊಂಡು ಸಂಗಮದಲ್ಲಿ ಪಿಂಡ ಬಿಡುತ್ತಾರೆ. ಬಳಿಕ ಸಂಗಮದಲ್ಲಿ ಮೂರು ಬಾರಿ ಮುಳುಗಿ ಎದ್ದು ಸ್ನಾನ ಮಾಡುತ್ತಾರೆ. ಆದರೆ ಮುಳುಗೆದ್ದು ಸ್ನಾನ ಮಾಡುವುದಕ್ಕೆ ಸಂಗಮದಲ್ಲಿ ನೀರಿಲ್ಲ. ಬದಲಾಗಿ ಪಿಂಡ ಪ್ರದಾನದ ಬಳಿಕ ಜಗ್ಗುಗಳಿಂದ ನೀರು ತೋಡಿ ತಲೆಮೇಲೆ ನೀರು ಸುರಿದುಕೊಂಡು ಸ್ನಾನ ಮಾಡಬೇಕಾಗಿದೆ.

ಇದು ಕೊಡಗಿನ ಜನರ ಭಾವನೆಗಳಿಗೆ ಆತಂಕ ತಂದೊಡ್ಡಿದೆ. ಒಂದು ವೇಳೆ ಸದ್ಯದಲ್ಲೇ ಮಳೆ ಬಾರದಿದ್ದರೆ ತ್ರಿವೇಣಿ ಸಂಗಮ ಸಂಪೂರ್ಣ ಬತ್ತಿಹೋಗುತ್ತದೆಯೇ ಎನ್ನುವ ಆತಂಕ ಎದುರಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ತ್ರಿವೇಣಿ ಸಂಗಮಕ್ಕೆ ಇಳಿದು ಓಡಾಡುತ್ತಿದ್ದು ಅವರ ಹೆಜ್ಜೆಯೂ ಮುಳುಗದಷ್ಟು ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇಂತಹ ಪರಿಸ್ಥಿತಿಯನ್ನು ನಮ್ಮ ಜೀವ ಮಾನದಲ್ಲಿ ಯಾವಾಗಲೂ ನಾವು ನೋಡಿಲ್ಲ ಎಂದು ಭಕ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Yadgiri: ಕಳೆದು ಹೋದ ಹಣ ವಾರಸುದಾರರಿಗೆ ಮರಳಿಸಿದ ಪೋಲಿಸ್ ಕಾನ್ಸ್ ಟೇಬಲ್, 

ಪಿಂಡ ಪ್ರದಾನ ಮಾಡಲು ಬಂದಿದ್ದ ಉತ್ತಪ್ಪ ಎಂಬುವವರು ಪಿಂಡ ಪ್ರದಾನಕ್ಕಾಗಿ ಹೊರಟಾಗ ಸಂಗಮದಲ್ಲಿ ಭಾರೀ ನೀರು ಇರಬಹುದು. ಅಲ್ಲಿ ತುಂಬಾ ನೀರು ಇರುತ್ತದೆ, ಹೀಗಾಗಿ ಮುಳುಗಿ ಸ್ನಾನ ಮಾಡುವುದು ಹೇಗೆ ಎಂದು ಚಿಂತಿಸುತ್ತಲೇ ಬಂದೆವು. ಆದರೆ ಇಲ್ಲಿಗೆ ಬಂದು ನೋಡುವಾಗ ಆಶ್ಚರ್ಯವಾಯಿತು. ಪಿಂಡ ಪ್ರಧಾನ ಮಾಡುವುದಾದರೂ ಹೇಗೆ ಎನ್ನುವಂತಾಗಿದೆ.

ಪಿಂಡ ಪ್ರದಾನ ಮಾಡುವಾಗ ಗಂಡ ಹೆಂಡತಿ ಇಬ್ಬರು ಕೈಹಿಡಿದು ಸಂಗಮದಲ್ಲಿ ಮುಳುಗಿ ಸ್ನಾನ ಮಾಡಬೇಕು. ಆದರೆ ಮುಳುಗುವುದಕ್ಕೆ ನೀರೇ ಇಲ್ಲ. ಇಂತಹ ಭೀಕರ ಪರಿಸ್ಥಿತಿಯನ್ನು ನನ್ನ ಜೀವನದಲ್ಲೇ ಕಂಡಿರಲಿಲ್ಲ. ಇದು ತಾಯಿ ಕಾವೇರಿ ಮಾತೆಯ ಮುನಿಸೋ, ಇಲ್ಲ ಭಗಂಡೇಶ್ವರನ ಸಿಟ್ಟೋ ಗೊತ್ತಿಲ್ಲ. ಇನ್ನಾದರೂ ಕಾವೇರಿ ಮಾತೆ ಕೃಪೆ ತೋರಿಸಲಿ ಎಂದು ಬೇಡಿದರು. ಒಟ್ಟಿನಲ್ಲಿ ಕಾವೇರಿ ಒಡಲಿನಲ್ಲಿಯೇ ಮಳೆ ಇಲ್ಲದಿರುವುದು ನಾಡಿನ ಜನತೆಗೆ ಆತಂಕ ತಂದಿಟ್ಟಿದೆ.

click me!