ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರು ದೊರೆಯದೆ ಮೀನುಗಳು ಸಾವಿಗೀಡಾಗುತ್ತಿವೆ. ಇನ್ನೂ ಜಲಚರ ಪಕ್ಷಿಗಳು ಮತ್ತು ನೀರುನಾಯಿಗಳು ಕೂಡ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ : ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರು ದೊರೆಯದೆ ಮೀನುಗಳು ಸಾವಿಗೀಡಾಗುತ್ತಿವೆ. ಇನ್ನೂ ಜಲಚರ ಪಕ್ಷಿಗಳು ಮತ್ತು ನೀರುನಾಯಿಗಳು ಕೂಡ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತುಂಗಭದ್ರಾ ಜಲಾಶಯ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ 47.245 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗ ಬರೀ 3.003 ಟಿಎಂಸಿ ನೀರಿದೆ. ಈ ಪೈಕಿ ಎರಡು ಟಿಎಂಸಿ ನೀರು ಡೆಡ್‌ಸ್ಟೋರೇಜ್ ಆಗಿದೆ. ಜಲಾಶಯ ಹಾಗೂ ನದಿಭಾಗದ ಜೀವವೈವಿಧ್ಯಕ್ಕೂ ಈಗ ಸಂಕಷ್ಟಎದುರಾಗಿದೆ. ಹಾಗಾಗಿ ಮಳೆಯೇ ಎಲ್ಲ ಸಮಸ್ಯೆಗೆ ಪರಿಹಾರವಾಗಿದೆ ಎಂದು ವನ್ಯಜೀವಿ ಪ್ರೇಮಿಗಳು ಹೇಳುತ್ತಾರೆ.
ಹಿನ್ನೀರು ಪ್ರದೇಶದಲ್ಲಿ ಮೀನುಗಳ ಸಾವು:
ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಗಳು ಸತ್ತು ಬೀಳುತ್ತಿವೆ. ದಿನೇ ದಿನೆ ನೀರು ಕಡಿಮೆಯಾಗುತ್ತಿರುವುದರಿಂದ ಗುಂಡಾ ಕಾಯ್ದಿಟ್ಟಅರಣ್ಯ ಪ್ರದೇಶದ ಹಿನ್ನೀರು ಪ್ರದೇಶದಲ್ಲಿ ಮೀನುಗಳು ಸಾಯುತ್ತಿವೆ. ಒಂದು ಕಡೆಯಲ್ಲಿ ರೈತರು ಮಳೆಯ ನಿರೀಕ್ಷೆಯಲ್ಲಿದ್ದರೆ, ಇನ್ನೊಂದೆಡೆ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಮೀನುಗಳು ಸಾಯುತ್ತಿವೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗದಿದ್ದರೆ, ಇನ್ನಷ್ಟುಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಜಲಚರ ಪಕ್ಷಿಗಳಿಗೆ ಸಂಕಷ್ಟ:
ತುಂಗಭದ್ರಾ ಜಲಾಶಯ ಮತ್ತು ನದಿಯನ್ನು ನೆಚ್ಚಿಕೊಂಡಿರುವ ಜಲಚರ, ಪಕ್ಷಿಗಳಿಗೆ ಸಮಸ್ಯೆಯಾಗಲಿದೆ. ಚುಕ್ಕೆ ಬಾತುಕೋಳಿ, ಕೊಕ್ಕರೆಗಳು, ಐಬೀಸ್, ಸ್ಟಾರ್ಕ್, ಬೆಳ್ಳಕ್ಕಿಗಳು, ಬ್ಲಾಕ್ ವೀಂಗಡ್ ಸ್ಟಿಲ್ಟ್, ಗೊರವ, ಮರಳು ಗೊರವ, ಬಕಪಕ್ಷಿಗಳು, ನೀರು ಕಾಗೆಗಳು, ಬಾತುಕೋಳಿ ಸೇರಿದಂತೆ ವಿವಿಧ ಜಾತಿಯ ಜಲಚರ ಪಕ್ಷಿಗಳಿಗೆ ಸಮಸ್ಯೆ ಎದುರಾಗಲಿದೆ. ಇನ್ನು 90 ಜಾತಿಯ ವಿವಿಧ ಪ್ರಭೇದದ ಮೀನುಗಳು ಜಲಾಶಯದಲ್ಲಿವೆ. ಜತೆಗೆ ಪ್ರಾಣಿಗಳು ಕೂಡ ನೀರು ದೊರೆಯದೇ ಸಮಸ್ಯೆ ಅನುಭವಿಸಲಿವೆ.
ನೀರುನಾಯಿಗಳ ಪರದಾಟ:
ತುಂಗಭದ್ರಾ ಜಲಾಶಯದಿಂದ ಕಂಪ್ಲಿಯವರೆಗೆ ತುಂಗಭದ್ರಾ ನದಿಯಲ್ಲಿ ಅಪರೂಪದ ನೀರುನಾಯಿಗಳಿವೆ. ಹಾಗಾಗಿ ಡ್ಯಾಂನಿಂದ(35 ಕಿಮೀ) ಕಂಪ್ಲಿಯವರೆಗೆ ನೀರುನಾಯಿ ಸಂರಕ್ಷಣಾ ಧಾಮ ಎಂದು ಘೋಷಣೆ ಮಾಡಲಾಗಿದೆ. ಈ ಪ್ರದೇಶದಲ್ಲಿ ನೀರುನಾಯಿಗಳು, ಮೊಸಳೆ, ಆಮೆಗಳಿವೆ. ಜಲಾಶಯ ತುಂಬಿ ಪ್ರವಾಹ ಉಂಟಾಗದಿದ್ದರೆ, ನದಿಯಲ್ಲಿ ತ್ಯಾಜ್ಯ ಬೆಳೆಯಲಿದೆ. ಆಗ ಈ ಅಪರೂಪದ ವನ್ಯಜೀವಿಗಳಿಗೂ ಸಂಕಷ್ಟಎದುರಾಗಲಿದೆ. ಹಾಗಾಗಿ ಮಳೆಯೇ ಎಲ್ಲ ಸಮಸ್ಯೆಗೆ ಪರಿಹಾರ ಒದಗಿಸಲಿದೆ. ರೈತರ ಜತೆಗೆ ವನ್ಯಜೀವಿ ಪ್ರೇಮಿಗಳು ಕೂಡ ಮಳೆರಾಯನ ಬರುವಿಕೆ ನಿರೀಕ್ಷೆಯಲ್ಲಿದ್ದಾರೆ.
3.5 ಲಕ್ಷ ಹೆಕ್ಟೇರ್ ನೀರಾವರಿ:
ತುಂಗಭದ್ರಾ ಜಲಾಶಯದ ನೀರಿನಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಈಗ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಭಾರಿ ಕಡಿಮೆ ಇದ್ದು, ಜಲಾಶಯದಲ್ಲಿ ನೀರಿನ ಸಂಗ್ರಹವೂ ಕುಸಿದಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಕೂಡ ತಗ್ಗಿದೆ. ಈ ಭಾಗದ ಕಾರ್ಖಾನೆಗಳಿಗೆ ಜಲಾಶಯದ ನೀರೇ ಆಸರೆಯಾಗಿದೆ.
ಈಗ ಜಲಾಶಯದ ಒಳ ಹರಿವು ಬರೀ 190 ಕ್ಯುಸೆಕ್‌ನಷ್ಟಿದೆ. ಆಗುಂಬೆ, ತೀರ್ಥಹಳ್ಳಿ, ಕೊಪ್ಪ, ಶಿವಮೊಗ್ಗ, ದಾವಣಗೆರೆ ಭಾಗದಲ್ಲಿ ಮಳೆಯಾದರೆ, ತುಂಗಭದ್ರಾ ಜಲಾಶಯಕ್ಕೆ ನೀರು ಹರಿದುಬರಲಿದೆ. ಆದರೆ, ಆ ಭಾಗದಲ್ಲೇ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಹಾಗಾಗಿ ತುಂಗಭದ್ರಾ ಜಲಾಶಯದ ಒಡಲು ಬರಿದಾಗುತ್ತಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರು ಖಾಲಿಯಾದರೆ, ಜಲಚರ ಪಕ್ಷಿಗಳು, ಮೀನು, ನೀರು ನಾಯಿ ಮತ್ತು ಆಮೆಗಳಿಗೂ ಸಂಕಷ್ಟಎದುರಾಗಲಿದೆ. ಜಲಾಶಯ ಬರಿದಾಗುತ್ತಿರುವುದು ಜೀವವೈವಿಧ್ಯಕ್ಕೂ ಸಂಕಷ್ಟಎದುರಾಗಲಿದೆ. ಜಲಾಶಯ ಭರ್ತಿಯಾಗಿ ಪ್ರವಾಹ ಉಂಟಾದರೆ, ನದಿಯಲ್ಲಿನ ಅಪರೂಪದ ಜಲಚರಗಳಿಗೂ ಅನುಕೂಲವಾಗಲಿದೆ.
ಸಮದ್ ಕೊಟ್ಟೂರು, ವನ್ಯಜೀವಿ ಪ್ರೇಮಿ, ಹೊಸಪೇಟೆ