ಸಭೆಯಲ್ಲಿ ಪ್ರಮುಖವಾಗಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ| ಸಭೆಯಲ್ಲಿ IMA ಮುಖ್ಯಸ್ಥರು ಕೂಡಾ ಭಾಗಿ| ಜಂಟಿಯಾಗಿ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ| ಮೈಸೂರು, ಚಾಮರಾಜನಗರ, ಕೊಡಗಿನಲ್ಲಿ ಪ್ರತಿಭಟನೆ|
ಮೈಸೂರು(ಆ.23): ಜಿಲ್ಲೆಯ ನಂಜನಗೂಡು ಪ್ರಭಾರ ಟಿಎಚ್‌ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಪ್ರತಿಭಟನೆಗೆ ನಾಟಕೀಯ ತಿರುವು ಪಡೆದುಕೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘ ಸೋಮವಾರ ಪ್ರತಿಭಟನೆ ನಡೆಸಲು ಮಂದಾಗಿದೆ. ಆದರೆ, ಈ ಪ್ರತಿಭಟನೆಗೆ ಡಾ.ನಾಗೇಂದ್ರ ಕುಟುಂಬಸ್ಥರಿಂದ ಅಸಹಕಾರ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮೊದಲೇ ಡಾ.ನಾಗೇಂದ್ರ ಅವರ ಸಾವಿನಿಂದ ಕುಟುಂಬಸ್ಥರು ನೊಂದಿದ್ದಾರೆ. ಹೀಗಾಗಿ ಪ್ರತಿಭಟನೆಗಳಿಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೂಕ್ಷ್ಮವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವೈದ್ಯರ ಸಂಘದ ಮಾಜಿ ಅಧ್ಯಕ್ಷ ಡಾ.ರವೀಂದ್ರ ಅವರು, ಡಾ.ನಾಗೇಂದ್ರ ಅವರ ಕುಟುಂಬಸ್ಥರು ಬರಲಿ, ಬಿಡಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
‘ಯಾರನ್ನು ಉಳಿಸುವ ಪ್ರಶ್ನೆಯೇ ಇಲ್ಲ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ'
ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿನ ಬಳಿಕ ಮೈಸೂರಿನಲ್ಲಿ ಹೋರಾಟ ತೀವ್ರಗೊಂಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಸರ್ಕಾರಕ್ಕೆ ಕೋವಿಡ್ ವರದಿ ಸಲ್ಲಿಸಿಲ್ಲ. ಸೋಮವಾರದಿಂದ ರಾಜ್ಯಾದ್ಯಂತ ಮುಷ್ಕರಕ್ಕೆ ಚಿಂತನೆ ಕೂಡ ನಡೆಸಲಾಗುತ್ತಿದೆ.
ಈ ಸಂಬಂಧ ಇಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘದ ತುರ್ತು ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪ್ರಮುಖವಾಗಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವೈದ್ಯರು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಪ್ರಶಾಂತ್ ಕುಮಾರ್ ಮಿಶ್ರ ಅಮಾನತಿಗೆ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಪ್ರಶಾಂತ್ ಕುಮಾರ್ ಮಿಶ್ರ ಅವರನ್ನ ರಾಜ್ಯ ಸರ್ಕಾರ ಈಗಾಗಲೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಆತ್ಮಹತ್ಯೆಗೆ ಶರಣಾದ ಡಾ.ನಾಗೇಂದ್ರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ
ಇಂದಿನ ಸಭೆಯಲ್ಲಿ IMA ಮುಖ್ಯಸ್ಥರು ಕೂಡಾ ಭಾಗಿಯಾಗಲಿದ್ದಾರೆ. ಜಂಟಿಯಾಗಿ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಾಗಲೇ ಮೈಸೂರು, ಚಾಮರಾಜನಗರ, ಕೊಡಗಿನಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪು ರೇಷೆಯ ಬಗ್ಗೆ ಸಂಘದಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಹೋರಾಟ ಕೈ ಬಿಡಬೇಕಾ..? ಮುಂದುವರಿಸಬೇಕಾ ಎನ್ನುವ ನಿರ್ಧಾರವನ್ನ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.