'ಸರ್ಕಾರದ ವೈಫಲ್ಯದಿಂದ ಕರ್ನಾಟಕ ಕೊರೋನಾ ಹಾಟ್‌ಸ್ಪಾಟ್‌ ಆಗುತ್ತಿದೆ'

By Kannadaprabha NewsFirst Published Jul 29, 2020, 1:00 PM IST
Highlights

ಕಲಬುರಗಿಯಲ್ಲಂತೂ ಸೋಂಕು ಕಟ್ಟಿ ಹಾಕುವಲ್ಲಿ ಆಡಳಿತ ವಿಫಲ| ಆಡಳಿತಕ್ಕೆ ಮಾರ್ಗದರ್ಶನ ನೀಡುವವರೇ ಇಲ್ಲದಂತಾಗಿದೆ| ಮೇ 2ರಂದು ಸಭೆ ಮಾಡಿ ಹೋಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇಂದಿಗೂ ಕಲಬುರಗಿಗೆ ಬಂದಿಲ್ಲ| ಸರ್ಕಾರದ ಇಂತಹ ನಡೆಗಳೇ ಸೋಂಕು ಹೆಚ್ಚಿಗೆ ಮಾಡುತ್ತಿವೆ, ಸಾವಿನ ಸಂಖ್ಯೆಯಲ್ಲಿಯೂ ಕಲಬುರಗಿ ಆತಂಕದಲ್ಲಿದೆ: ಡಾ. ಅಜಯ್‌ಸಿಂಗ್‌|

ಕಲಬುರಗಿ(ಜು.29): ಕೊರೋನಾ ಸೋಂಕಿನ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ ಎಂದು ದೂರಿರುವ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್‌ ಸಿಂಗ್‌ ಸರ್ಕಾರದ ನಿರ್ಲಕ್ಷ್ಯದಿಂದಲೇ ರಾಜ್ಯ ಶೀಘ್ರ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿ ಕೊರೋನಾ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಲಿದೆ ಎಂದು ಕಳವಳ ಹೊರಹಾಕಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ, ದೆಹಲಿ, ತಮೀಳುನಾಡಿನಂತಹ ಸೋಂಕಿನ ರಾಜ್ಯಗಳಲ್ಲೇ ಕೊರೋನಾ ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ. ಇದಕ್ಕೆ ಆಡಳಿತದವರ ತಪ್ಪು ನಡೆಗಳೇ ಕಾರಣ ಎಂದು ದೂರಿದರು.

ದೇಶದಲ್ಲೇ ಕೊರೋನಾಗೆ ಫಸ್ಟ್ ಬಲಿಯಾಗಿದ್ದ ಕಲಬುರಗಿಯಲ್ಲಿ ಮುಂದುವರಿದ ಮರಣ ಮೃದಂಗ

ರಾಜ್ಯದಲ್ಲಿ ಸೋಂಕು 1 ಲಕ್ಷ ದಾಟಿದೆ. ಇದು ಅತ್ಯಂತ ಆತಂಕದ ಪರಿಸ್ಥಿತಿಯಾಗಿದ್ದು, ನಿತ್ಯ 5 ಸಾವಿರಕ್ಕೂ ಮೇಲ್ಪಟ್ಟು ಸೋಂಕು ಕಂಡು ಬರುತ್ತಿವೆ. ಸಮುದಾಯಕ್ಕೆ ಸೋಂಕು ಹಬ್ಬಿದೆ. ಸೋಂಕಿಗೆ ಯಾವುದೇ ಮೂಲ ಬೇಕಿಲ್ಲ, ಸೋಂಕು ತಾನಾಗಿಯೇ ಹರಡುತ್ತಿದೆ, ಹೀಗಿದ್ದರೂ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತ, ವರ್ಷದ ಆಚರಣೆ ಮಾಡುತ್ತ, ನಿಗಮ ಮಂಡಳಿ ನೇಮಕದಲ್ಲಿ ಕಾಲಹರಣ ಮಾಡುತ್ತಿದೆಯೇ ಹೊರತು ಜನಪರ ಕಾರ್ಯಕ್ರಮಗಳಿಗೆ ಮುಂದಾಗುತ್ತಿಲ್ಲ ಎಂದು ದೂರಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಕಡಿತ ಮಾಡಲಾಗಿದೆ. 1,500 ಕೋಟಿ ರು. ಘೋಷಿತ ಅನುದಾನದಲ್ಲಿ 364 ಕೋಟಿ ರು. ಬಂದೇ ಇಲ್ಲ. 1,136 ಕೋಟಿ ರು. ಮಾತ್ರ ಅನುದಾನ ಬಿಡುಗಡೆಯಾಗಿದೆ. ಇದರಿಂದಾಗಿ ಶಾಸಕರ ಸೂಚಿತ ಕಾಮಗಾರಿಗಳೂ ಆಗುತ್ತಿಲ್ಲ. ಆಗಿರುವ ಕಾಮಗಾರಿಗಳಿಗೆ ಬಿಲ್‌ ಆಗುತ್ತಿಲ್ಲ. ಅಭಿವೃದ್ಧಿ ಕೆಲಸಗಳೂ ನಿಂತಿವೆ. ಇಷ್ಟೆಲ್ಲ ತೊಂದರೆಗಳಿದ್ದರೂ ಬಿಜೆಪಿ ಸರ್ಕಾರ ವರ್ಷಾಚರಣೆಗೆ ಮುಂದಾಗಿರೋದು ಯಾವ ಪುರುಷಾರ್ಥಕ್ಕೆ ಎಂದು ಡಾ.ಅಜಯ್‌ ಪ್ರಶ್ನಿಸಿದರು.

ಕಲಬುರಗಿಯಲ್ಲಂತೂ ಸೋಂಕು ಕಟ್ಟಿ ಹಾಕುವಲ್ಲಿ ಆಡಳಿತ ವಿಫಲವಾಗಿದೆ. ಆಡಳಿತಕ್ಕೆ ಮಾರ್ಗದರ್ಶನ ನೀಡುವವರೇ ಇಲ್ಲದಂತಾಗಿದೆ. ಮೇ 2ರಂದು ಸಭೆ ಮಾಡಿ ಹೋಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇಂದಿಗೂ ಕಲಬುರಗಿಗೆ ಬಂದಿಲ್ಲ. ಹೀಗಾಗಿ ಸರ್ಕಾರದ ಇಂತಹ ನಡೆಗಳೇ ಸೋಂಕು ಹೆಚ್ಚಿಗೆ ಮಾಡುತ್ತಿವೆ, ಸಾವಿನ ಸಂಖ್ಯೆಯಲ್ಲಿಯೂ ಕಲಬುರಗಿ ಆತಂಕದಲ್ಲಿದೆ. ಸರ್ಕಾರದ ಜನನಾಯಕರು ಯಾಕೆ ಇಲ್ಲಿಗೆ ಬಂದು ಪರಿಶೀಲನಾ ಸಭೆ ಮಾಡಬಾರದು? ದುಗುಡದಲ್ಲಿರುವ ಜನತೆಗೆ ದೈರ್ಯ ಹೇಳಬಾರದು ಎಂದು ಡಾ. ಅಜಯ್‌ ಪ್ರಶ್ನಿಸಿದರು.
 

click me!