'20 ವರ್ಷ ಬೇಕಾದ್ರೆ ಆಳ್ವಿಕೆ ಮಾಡಿ, ಜನರಿಗೆ ವಿಷ ಹಾಕ್ಬೇಡಿ'

By Kannadaprabha NewsFirst Published Jan 18, 2020, 8:25 AM IST
Highlights

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರೇ, ನೀವು ಇನ್ನೂ 20 ವರ್ಷ ಬೇಕಾದರೆ ದೇಶದ ಆಳ್ವಿಕೆ ಮಾಡಿ, ಬೇಡ ಅನ್ನಲ್ಲ. ಆದರೆ ಸಂವಿಧಾನಕ್ಕೆ ಕೈ ಹಾಕುವ ಕೆಲಸಕ್ಕೆ ಮಾತ್ರ ಹೋಗಬೇಡಿ, ದೇಶದ ಜನರಿಗೆ ವಿಷ ಕೊಡ್ಬೇಡಿ ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಆಗ್ರಹಿಸಿದ್ದಾರೆ.

ಮಂಗಳೂರು(ಜ.18): ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರೇ, ನೀವು ಇನ್ನೂ 20 ವರ್ಷ ಬೇಕಾದರೆ ದೇಶದ ಆಳ್ವಿಕೆ ಮಾಡಿ, ಬೇಡ ಅನ್ನಲ್ಲ. ಆದರೆ ಸಂವಿಧಾನಕ್ಕೆ ಕೈ ಹಾಕುವ ಕೆಲಸಕ್ಕೆ ಮಾತ್ರ ಹೋಗಬೇಡಿ, ದೇಶದ ಜನರಿಗೆ ವಿಷ ಕೊಡ್ಬೇಡಿ ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಆಗ್ರಹಿಸಿದ್ದಾರೆ.

ಮಂಗಳೂರಿಗೆ ಶುಕ್ರವಾರ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ- ಸಂಘ ಪರಿವಾರದವರೇ ಎಂಪಿ, ಎಂಎಲ…ಎಗಳಾಗಲಿ, ನೀವೇ ರಾಜ್ಯಭಾರ ಮಾಡಿ. ಆದರೆ ಎನ್‌ಆರ್‌ಸಿ, ಸಿಎಎಯಂಥ ಕಾನೂನುಗಳನ್ನು ತಂದು ಸಾಮಾನ್ಯ ಜನರಿಗೆ ವಿಷ ಹಾಕ್ಬೇಡಿ ಎಂದು ಮನವಿ ಮಾಡಿದ್ದಾರೆ.

ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚುತ್ತಿರುವ ಪ್ರಭಾಕರ್‌ ಭಟ್‌: ಡಿಕೆಸು

ಈಗ ಜಾತಿ ಆಧಾರದ ಮೇಲೆ ಸಿಎಎ ಮಾಡಿದ್ದೀರಿ. ಪೌರತ್ವ ಸಾಬೀತುಪಡಿಸುವ ದಾಖಲೆಗಳಿಲ್ಲದ 60 ಕೋಟಿ ಜನರನ್ನು ಬಂಧನ ಕೇಂದ್ರಗಳಲ್ಲಿ ಇಡಲು ನಿಮಗೆ ಸಾಧ್ಯವೇ? ಇಷ್ಟುಜನರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟರೆ ಚುನಾವಣೆ ಗೆಲ್ಲಬಹುದು ಎನ್ನುವ ಹುನ್ನಾರ ಇದರಲ್ಲಿ ಅಡಗಿದೆಯೇ ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.

ದೇಶದ ಮಾಲೀಕರೇ ಸಾಯ್ತಿದಾರೆ:

ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್‌ ಕಾನೂನುಗಳನ್ನು ತರುವುದರಿಂದ ಯಾರಿಗೆ ಉಪಯೋಗ? ಸಂವಿಧಾನಕ್ಕೆ ಅಪಚಾರ ಮಾಡುವಂತಹ ಈ ಕಾನೂನುಗಳಿಂದ ಈ ದೇಶವನ್ನು ರಕ್ಷಣೆ ಮಾಡಬೇಕಾಗಿದೆ ಎಂದ ಅವರು, ಕಾಂಗ್ರೆಸ್‌- ಬಿಜೆಪಿ ಎನ್ನುವುದನ್ನು ಬಿಟ್ಟುಬಿಡಿ. ನಾಲ್ಕೈದು ವರ್ಷಗಳಿಗೊಮ್ಮೆ ಅಧಿಕಾರಕ್ಕೆ ಬರುವ ಪಕ್ಷದವರೆಲ್ಲ ಬಾಡಿಗೆದಾರರೇ ಹೊರತು ದೇಶದ ಮಾಲೀಕರಲ್ಲ. ಜನರೇ ದೇಶದ ಮಾಲೀಕರು. ಆದರೆ ದೇಶದಲ್ಲೀಗ ಮಾಲೀಕರೇ ಸಾಯುವಂತಾಗಿದೆ. ಇಂಥ ಪರಿಸ್ಥಿತಿಗೆ ದೇಶವನ್ನು ಕೊಂಡೊಯ್ಯುವುದು ಸರಿಯಲ್ಲ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

'ಹಿಂದೆಯೂ RSS ಇತ್ತು, ಆದರೆ ಈ ಥರ ಇರ್ಲಿಲ್ಲ, ಈಗ ಫುಲ್ ರೌಡಿಸಂ'..!

ಎನ್‌ಆರ್‌ಸಿ, ಸಿಎಎ ಕಾನೂನು ತರುವ ಮೂಲಕ ಸಾಮಾನ್ಯ ಜನರನ್ನು ತೊಂದರೆಗೆ ಸಿಲುಕಿಸಬೇಡಿ, ಪಶ್ಚಾತ್ತಾಪ ಪಡುವ ದಿನಗಳು ಬರಲಿವೆ. ನರೇಂದ್ರ ಮೋದಿ ಆಗಲೀ, ಅಮಿತ್‌ ಶಾ ಆಗಲೀ ಒಂದಲ್ಲ ಒಂದು ದಿನ ನೀವು ಅಧಿಕಾರದಿಂದ ಇಳಿಯಲೇಬೇಕು. ಒಂದಲ್ಲ ಒಂದು ದಿನ ಸಾಯಲೇಬೇಕು ಎನ್ನುವುದನ್ನು ಮರೆಯಬೇಡಿ ಎಂದಿದ್ದಾರೆ.

ಪ್ರಧಾನಿಗೆ ಸಲಹೆಗಾರರಿಲ್ಲ:

ಪ್ರಸ್ತುತ ಬಾಂಗ್ಲಾ ದೇಶದ ಜಿಡಿಪಿ ಶೇ.8ರಷ್ಟಿದ್ದರೆ ಭಾರತದ ಜಿಡಿಪಿ ಶೇ.3.4ಕ್ಕೆ ಕುಸಿದಿದೆ. ನೋಟು ಅಮಾನ್ಯ ಮಾಡಿದಾಗ ದೇಶದ ಜಿಡಿಪಿ 3 ಪರ್ಸೆಂಟ್‌ಗೆ ಕುಸಿಯಲಿದೆ ಎಂದು ಅಂದೇ ಮನಮೋಹನ್‌ ಸಿಂಗ್‌ ಎಚ್ಚರಿಕೆ ನೀಡಿದ್ದು ನಿಜವಾಗಿದೆ. ಹಣದುಬ್ಬರ, ಬೆಲೆಏರಿಕೆ ಶೇ.7.8 ಪರ್ಸೆಂಟ್‌ ಜಾಸ್ತಿಯಾಗಿದೆ. ದೇಶದಲ್ಲಿ 40- 50 ಕೇಂದ್ರ ಸಚಿವರಿದ್ದಾರೆ. ಇವರಲ್ಲಿ ದೇಶದ ಪರಿಸ್ಥಿತಿಯ ಕುರಿತು ಪ್ರಧಾನಿಗೆ ಸಲಹೆ ನೀಡಲು ಒಬ್ಬರೂ ಇಲ್ಲ. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಅವರೇ ಸಲಹೆಗಾರರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಯಡಿಯೂರಪ್ಪಗೆ ಧೈರ್ಯ ಬರಲಿ:

ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಮನೆಗಳು ಸರ್ವನಾಶವಾಗಿವೆ. ರಾಜ್ಯ ಸರ್ಕಾರದಿಂದ ನಾಲ್ಕು ಬಾರಿ ಮನವಿ ಮಾಡಿದರೂ ಕೇಂದ್ರ ಉತ್ತರ ಕೊಟ್ಟಿಲ್ಲ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಧೈರ್ಯವಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರಲಿ ಎಂದು ಆಗ್ರಹಿಸಿದ್ದಾರೆ. ಶಾಸಕರಾದ ಯು.ಟಿ. ಖಾದರ್‌, ಐವನ್‌ ಡಿಸೋಜ, ಮುಖಂಡರಾದ ನವೀನ್‌ ಡಿಸೋಜ, ಸದಾಶಿವ ಉಳ್ಳಾಲ್‌, ಆಲ್ವಿನ್‌ ಡಿಸೋಜ, ಟಿ.ಕೆ. ಸುಧೀರ್‌, ನಝೀರ್‌ ಬಜಾಲ್‌ ಇದ್ದರು.

click me!