ಮೊಬೈಲ್ ಗೀಳಿಗೆ ಒಳಗಾಗದೇ, ಸಾಮಾಜಿಕ ಜಾಲತಾಣಗಳ ದಾಸರಾಗದೇ, ಜ್ಞಾನತಾಣಗಳ ಮೊರೆ ಹೋಗಬೇಕು. ಪಠ್ಯ ಪುಸ್ತಕ, ಗ್ರಂಥಾಲಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕರೆ ನೀಡಿದರು.
ಮೈಸೂರು : ಮೊಬೈಲ್ ಗೀಳಿಗೆ ಒಳಗಾಗದೇ, ಸಾಮಾಜಿಕ ಜಾಲತಾಣಗಳ ದಾಸರಾಗದೇ, ಜ್ಞಾನತಾಣಗಳ ಮೊರೆ ಹೋಗಬೇಕು. ಪಠ್ಯ ಪುಸ್ತಕ, ಗ್ರಂಥಾಲಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕರೆ ನೀಡಿದರು.
ಮೈಸೂರಿನ ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನ 2023- 2024ನೇ ಸಾಲಿನ ಸಂಘವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇದ್ದು, ಅದನ್ನು ನಾವಿನ್ಯತೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ನಿರಂತರ ಪರಿಶ್ರಮ ಪ್ರಾಮಾಣಿಕತೆ ಧೃಡ ವಿಶ್ವಾಸದಿಂದ ಶಿಕ್ಷಣವನ್ನು ಪಡೆದು, ಜೀವನವನ್ನು ಗೊಂದಲಗೊಳಿಸಿಕೊಳ್ಳದೆ ಆತ್ಮವಿಶ್ವಾಸಿಗಳಾಗಿ ಪೋಷಕರ ಕನಸನ್ನು ನನಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
undefined
ವಿದ್ಯಾರ್ಥಿನಿಯರು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರೊಂದಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ವಿದ್ಯಾರ್ಥಿಗಳಿಗೆ ಬಹುಶಿಸ್ತಿನ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಇಂದಿನ ಶಿಕ್ಷಣವು ಬಹುವೈವಿಧ್ಯ ಮತ್ತು ಕೌಶಲ್ಯಾಧರಿತ ಕ್ರಮಗಳನ್ನು ಅನುಸರಿಸುತ್ತಿದ್ದು, ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಈ ವಿಧಾನವು ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿ ಸಂಘದ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಪದ್ಧತಿಯನ್ನು ತಿಳಿಸಿಕೊಟ್ಟಂತಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಬೆಳೆಸಲು ಪ್ರೇರಕಶಕ್ತಿ ಒದಗುತ್ತದೆ ಎಂದು ಅವರು ತಿಳಿಸಿದರು..
ವಿದ್ಯಾರ್ಥಿಜೀವನ ಸುವರ್ಣ ಜೀವನವಾಗಿದ್ದು, ಪದವಿಯ ನಂತರ ಭವಿಷ್ಯವನ್ನು ರೂಪಿಸಿಕೊಂಡು ಪೋಷಕರು, ಕಾಲೇಜಿನ ಆಶೊತ್ತರಗಳನ್ನು ನೆರವೇರಿಸಿ ಕೊಡಬೇಕು. ಪದವಿ ವಿದ್ಯಾಭ್ಯಾಸವನ್ನು ಕಡಿತಗೊಳಿಸಿಕೊಳ್ಳದೆ ಸ್ನಾತಕೋತ್ತರ ಪದವಿ, ಸಂಶೋಧನೆಗಳಿಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸಾಯಿನಾಥ್ ಮಲ್ಲಿಗೆಮಾಡು ಅಧ್ಯಕ್ಷತೆ ವಹಿಸಿದ್ದರು. ಪಿಯು ಕಾಲೇಜಿನ ಪ್ರಾಂಶುಪಾಲೆ ನಯನಕುಮಾರಿ, ಉಪ ಪ್ರಾಂಶುಪಾಲೆ ಎನ್. ಭಾರತಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಜ್ಯೋತಿಲಕ್ಷ್ಮಿ ಜಿ. ಕಾವ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ರಿಯಾ ಮತ್ತು ಪದಾಧಿಕಾರಿಗಳು ಇದ್ದರು.