ಬೆಂಗಳೂರು (ಸೆ.14): ಉಡುಪಿಯ ಶಿರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತ ಬಾಲಕನ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಗತ್ಯ ಸಹಕಾರ ಹಾಗೂ ನೆರವು ಕಲ್ಪಿಸಲು ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ (ನ್ಯಾಯಾಲಯದ ಮಿತ್ರ) ಹೈಕೋರ್ಟ್ ಸೋಮವಾರ ನೇಮಿಸಿ ಆದೇಶಿಸಿದೆ.
ಇದೇ ವೇಳೆ, ಶಂಕರಾಚಾರ್ಯರು ಸೇರಿದಂತೆ ಸಾಕಷ್ಟುಆಚಾರ್ಯರು ಸಣ್ಣವಯಸ್ಸಿನಲ್ಲಿಯೇ ಪೀಠಾಧಿಪತಿಗಳಾಗಿದ್ದಾರೆ. ಬಾಲ ಸನ್ಯಾಸಿಗಳು ಮಠಾಧಿಪತಿಗಳಾಗುವುದನ್ನು ನಿರ್ಬಂಧಿಸುವ ಯಾವುದಾದರೂ ಕಾನೂನು ಇದೆಯೇ ಎಂದು ನ್ಯಾಯಾಲಯ ಕೇಳಿದೆ.
undefined
ಶಿರೂರು ಮಠಕ್ಕೆ ಬಾಲ ಸಂನ್ಯಾಸಿ ಉತ್ತರಾಧಿಕಾರಿ ನೇಮಕ ಅಪಸ್ವರ; ಸೋದೆ ಶ್ರೀಗಳಿಂದ ಸ್ಪಷ್ಟನೆ
ಈ ಕುರಿತು ಶಿರೂರು ಮಠ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಅವರ ನೇತೃತ್ವದ ವಿಭಾಗೀಯ ಪೀಠ, ಅಮಿಕಸ್ ಕ್ಯೂರಿ ಅವರಿಗೆ ಅರ್ಜಿಯ ಪ್ರತಿ ಹಾಗೂ ಇತರೆ ಎಲ್ಲ ದಾಖಲೆಗಳನ್ನು ಅರ್ಜಿದಾರರು ಒದಗಿಸಬೇಕು. ಸರ್ಕಾರವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿ ಅಂತಿಮ ವಿಚಾರಣೆಯನ್ನು ಸೆ.23ಕ್ಕೆ ನಿಗದಿಪಡಿಸಿತು.
ಉಡುಪಿ ಶಿರೂರು ಮಠದ ಭಾವಿ ಯತಿಗಳ ಸಂನ್ಯಾಸಾಶ್ರಮ ಸ್ವೀಕಾರ
ಇದಕ್ಕೂ ಮುನ್ನ ಸೋದೆ ವಾದಿರಾಜ ಮಠದ ಪರ ವಕೀಲರು, ಉಡುಪಿಯ ಅಷ್ಟಮಠಗಳಲ್ಲಿ ಬಾಲ ಸನ್ಯಾಸಿಗಳನ್ನು ಮಠದ ಪೀಠಾಧಿಪತಿಗಳನ್ನಾಗಿ ಮಾಡುವ ಪರಂಪರೆ ಹಾಗೂ ಸಂಪ್ರದಾಯ ತಲೆಮಾರುಗಳಿಂದ ಇದೆ. ಶಂಕಾರಾಚಾರ್ಯರು 12ನೇ ವಯಸ್ಸಿನಲ್ಲಿ, ಮಧ್ವಾಚಾರ್ಯರು 10ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಪೀಠಾಧಿಪತಿಗಳಾಗಿದ್ದರು. ಬಾಲಸನ್ಯಾಸಿಗೆ ದೀಕ್ಷೆ ಕೊಡಿಸಿ, ಅವರಿಗೆ ಧರ್ಮಶಾಸ್ತ್ರ, ವೇದ ಹಾಗೂ ಉಪನಿಷತ್ ಬೋಧಿಸಿ ಅವರನ್ನು ಪೀಠಾಧಿಪತಿಗಳನ್ನಾಗಿ ಮಾಡಲಾಗುವುದು. ಅದನ್ನು ಬಲವಂತವಾಗಿ ಹೇರುವುದಿಲ್ಲ. ಮಧ್ವ ಪರಂಪರೆಯಂತೆ ಬಾಲ ಸನ್ಯಾಸಿಯನ್ನು ಪೀಠಾಧಿಪತಿಯನ್ನಾಗಿ ನೇಮಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ. ಬಾಲ ಸನ್ಯಾಸಿ ಪೀಠಾಧಿಪತಿ ಮಾಡುವುದನ್ನು ತಡೆಯಲು ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ವಿವರಿಸಿದರು.
ಅರ್ಜಿದಾರ ಪರ ವಕೀಲರು, 16 ವರ್ಷದ ಬಾಲಕನನ್ನು ಪೀಠಾಧಿಪತಿಯನ್ನಾಗಿ ನೇಮಿಸಲಾಗಿದೆ. ಇದರಲ್ಲಿ ಮಕ್ಕಳ ಹಕ್ಕು ಸೇರಿದಂತೆ ಹಲವು ಅಂಶಗಳಿವೆ. ಸುಪ್ರೀಂಕೋರ್ಟ್ ನ ತೀರ್ಪುಗಳಿವೆ. ಹಾಗಾಗಿ ನ್ಯಾಯಾಲಯ ಅವುಗಳನ್ನು ಪರಿಶೀಲಿಸಿ ಈ ವಿಚಾರವನ್ನು ತೀರ್ಮಾನಿಸಬೇಕಿದೆ ಎಂದು ಕೋರಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಇದು ಗಂಭೀರ ವಿಚಾರವಾಗಿದೆ. ಶಂಕರಾಚಾರ್ಯರು ಸೇರಿದಂತೆ ಸಾಕಷ್ಟುಆಚಾರ್ಯರು ಸಣ್ಣವಯಸ್ಸಿನಲ್ಲಿಯೇ ಪೀಠಾಧಿಪತಿಗಳಾಗಿದ್ದಾರೆ. ಬಾಲ ಸನ್ಯಾಸಿಗಳು ಮಠಾಧಿಪತಿಗಳಾಗುವುದನ್ನು ನಿರ್ಬಂಧಿಸುವ ಯಾವುದಾದರೂ ಕಾನೂನು ಇದೆಯೇ, ಈ ವಿಚಾರದಲ್ಲಿ ಶಾಸನಗಳು ಏನು ಹೇಳುತ್ತವೆ, ಅರ್ಜಿದಾರರು ಈ ವಿಚಾರದಲ್ಲಿ ಸಿವಿಲ್ ದಾವೆ ಹೂಡಬಹುದಲ್ಲವೇ ಎಂದು ಪ್ರಶ್ನಿಸಿತು.
ಅಂತಿಮವಾಗಿ ಅರ್ಜಿ ಸಂಬಂಧ ನ್ಯಾಯಾಲಯಕ್ಕೆ ಅಗತ್ಯ ನೆರವು ಕಲ್ಪಿಸಲು ಹಿರಿಯ ವಕೀಲ ನಾಗಾನಂದ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿತು.