ಕಾಡಿನಿಂದ ಮೈಸೂರಿಗೆ ದಸರಾ ಗಜಪಡೆ ಆಗಮನ

By Kannadaprabha News  |  First Published Sep 14, 2021, 8:48 AM IST
  • ಅ.7ರಿಂದ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ
  • ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಸೋಮವಾರ ಚಾಲನೆ

 ವೀರನಹೊಸಹಳ್ಳಿ (ಸೆ.14):  ಅ.7ರಿಂದ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮವಾದ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಸೋಮವಾರ ಚಾಲನೆ ದೊರೆಯಿತು. ದಸರೆಯಲ್ಲಿ ಭಾಗವಹಿಸುವ ಗಜಪಡೆಯ 8 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿ ಮೈಸೂರಿಗೆ ಆಗಮಿಸಿದವು.

ಕೋವಿಡ್‌ ಆತಂಕದ ನಡುವೆ ಕಳೆದ ಬಾರಿಯಂತೆ ದಸರಾ ಹಬ್ಬವನ್ನು ಈ ಬಾರಿಯೂ ಸರಳವಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಸರೆಯ ಮೊದಲ ಅತಿಥಿಗಳಾದ ಆನೆಗಳ ಪಯಣಕ್ಕೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮೊದಲು ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು. ಬಳಿಕ ಬೆಲ್ಲ, ಕಬ್ಬು, ತೆಂಗಿನಕಾಯಿ, ಹಣ್ಣುಗಳನ್ನು ತಿನ್ನಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.

Tap to resize

Latest Videos

"

ಈ ಬಾರಿ ಮೈಸೂರು ದಸರಾಗೆ ದುಬಾರೆಯ ಮೂರು ಆನೆಗಳು ಮಾತ್ರ ಭಾಗಿ

ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯ ನೇತೃತ್ವದಲ್ಲಿ ವಿಕ್ರಮ, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ, ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಆನೆಗಳು ಲಾರಿ ಮೂಲಕ ಮಧ್ಯಾಹ್ನ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ತಲುಪಿದವು. ಅಶ್ವತ್ಥಾಮ ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. ಸೆ.16 ರಂದು ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ಅಲ್ಲೇ ಗಜಪಡೆಯು ಬಿಡಾರ ಹೂಡಿ, ಪ್ರತಿದಿನ ತಾಲೀಮು ನಡೆಸಲಿವೆ.

click me!