ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿ ಹಸುವಿನ ಜೀವ ಉಳಿಸಿದ ಪಶುವೈದ್ಯರ ತಂಡ| ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಸತತ 3 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಕರು ಹೊರಗೆ ತೆಗೆಯಲು ಯಶಸ್ವಿಯಾದ ಪಶುವೈದ್ಯರು|
ರಾಣಿಬೆನ್ನೂರು(ಆ.21): ಹಸುವಿನ ಗರ್ಭದಲ್ಲೇ ಕರು ಮೃತಪಟ್ಟ ಹಿನ್ನೆಲೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿ ಪಶುವೈದ್ಯರ ತಂಡ ಹಸುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿರುವ ಘಟನೆ ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಡಾ. ನವೀನಕುಮಾರ ಆರ್.ಎಚ್. ನೇತೃತ್ವದ ಪಶುವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ. ಗ್ರಾಮದ ರಾಮನಗೌಡ ಕಬ್ಬಕ್ಕಿ ಎಂಬವರಿಗೆ ಸೇರಿದ ಮಿಶ್ರತಳಿ ಹಸು ಕರು ಹಾಕುವಾಗ ಸಮಸ್ಯೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಸುಣಕಲ್ಲಬಿದರಿ ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎಚ್.ಆರ್. ನಾಯಕ ಅವರು ತಪಾಸಣೆ ನಡೆಸಿ, ಕರು ಸಾವಿಗೀಡಾಗಿ ಬಾವು ಬಂದಿದ್ದು, ಗರ್ಭಕೋಶದೊಳಗೆ ತಲೆ ಅಡ್ಡವಾಗಿ ಸಿಕ್ಕಿಹಾಕಿಕೊಂಡಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಮಾತ್ರವೇ ಕರು ಹೊರಗೆ ತೆಗೆಯಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಶಿಗ್ಗಾಂವಿ: ಚಲಿಸುತ್ತಿದ್ದ ಲಾರಿ ಟೈರ್ ಸ್ಫೋಟ, ಸುಟ್ಟು ಕರಕಲಾದ ಟ್ರಕ್
ಹಸುವಿನ ಮಾಲೀಕರು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರಿಂದ ರಾಣಿಬೆನ್ನೂರು ತಾಲೂಕು ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನೀಲಕಂಠ ಅಂಗಡಿ, ಸಾತೇನಹಳ್ಳಿ ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ. ನವೀನಕುಮಾರ ಆರ್.ಎಚ್., ಡಾ.ರಾಘವೇಂದ್ರ ಎಲಿವಾಳ, ಡಾ. ಶ್ರಾವ್ಯ ಜಿ.ಎಸ್., ಡಾ. ವಿನಯಕುಮಾರ, ಎಂ.ಎಸ್. ಬುಳಾಬುಳ್ಳಿ ಅವರ ತಂಡ ಸತತ 3 ಗಂಟೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ಕರುವನ್ನು ಹೊರಗೆ ತೆಗೆಯಲು ಯಶಸ್ವಿಯಾಗಿದ್ದಾರೆ. ಆ ಮೂಲಕ ಹಸುವಿನ ಜೀವ ಉಳಿಸಿದ್ದಾರೆ. ಈಗ ಹಸು ಆರೋಗ್ಯವಾಗಿದೆ.