ಸೂಕ್ತ ಚಿಕಿತ್ಸೆ ದೊರೆಯದೆ ಕೊರೋನಾಗೆ ವೈದ್ಯ ಬಲಿ: ಆಸ್ಪತ್ರೆಯಲ್ಲೇ ಬೆಡ್‌ ಸಿಗದೆ ಪರದಾಟ

By Kannadaprabha News  |  First Published Oct 10, 2020, 9:08 AM IST

ತಾವು ಸೇವೆ ಸಲ್ಲಿಸುತ್ತಿದ್ದ ಇಎಸ್‌ಐ ಆಸ್ಪತ್ರೆಯಲ್ಲೇ ಬೆಡ್‌ ಸಿಗದೆ ಪರದಾಟ| ಎರಡ್ಮೂರ ಆಸ್ಪತ್ರೆಗಳಿಗೆ ಅಲೆದಾಟ| ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಾವು| ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಿಗೂ ಎನ್‌-95 ಮಾಸ್ಕ್‌ ನೀಡುತ್ತಿಲ್ಲ| 


ಬೆಂಗಳೂರು(ಅ.10): ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರೊಬ್ಬರು ಸೂಕ್ತ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾರೆ.

ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಡಾ.ವಿ. ಬಸವರಾಜು (40) ಮೃತ ವೈದ್ಯ. ಬಸವರಾಜು ಅವರಿಗೆ 15 ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ವೇಳೆ ಸ್ವತಃ ವೈದ್ಯರಾಗಿದ್ದರಿಂದ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. 5 ದಿನಗಳ ಬಳಿಕ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಉಸಿರಾಟ ಸಮಸ್ಯೆ ಉಂಟಾಗಿತ್ತು.

Latest Videos

undefined

ಈ ವೇಳೆ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಚಿಕಿತ್ಸೆಗೆ ಬಂದರೆ ಆಕ್ಸಿಜನ್‌ ವ್ಯವಸ್ಥೆಯುಳ್ಳ ಬೆಡ್‌ ಲಭ್ಯವಾಗಿಲ್ಲ. ಹೀಗಾಗಿ ಮಾರ್ಥಾಸ್‌ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲೂ ಬೆಡ್‌ ದೊರೆತಿಲ್ಲ. ಬಳಿಕ ಸಕ್ರಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶ್ವಾಸಕೋಶ ಸಮಸ್ಯೆ ಹೆಚ್ಚಾಗಿದ್ದರಿಂದ ಬಳಿಕ ಮಲ್ಲೇಶ್ವರದ ಅಪೋಲೊ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ವ್ಯವಸ್ಥೆಯೊಂದಿಗೆ ಚಿಕಿತ್ಸೆ ನೀಡಲಾಯಿತು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ಬೆಳಗಾವಿಯೊಂದರಲ್ಲಿಯೇ ಕೋವಿಡ್‌ನಿಂದ 110 ಶಿಕ್ಷಕರು ಸಾವು

ಪತ್ನಿಗೂ ಸೋಂಕು:

ಮೃತ ವೈದ್ಯರ ಪತ್ನಿ ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿಯೇ ಶುಶ್ರೂಷಕರಾಗಿ ಕೆಲಸ ಮಾಡುತ್ತಿದ್ದು, ಅವರಿಗೂ ಸೋಂಕು ತಗುಲಿದೆ. ಮೃತ ವೈದ್ಯರಿಗೆ 5 ವರ್ಷದ ಮಗು ಇದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದ ವೈದ್ಯರನ್ನೇ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ದೂರಿದ್ದಾರೆ.

ಎನ್‌-95 ಮಾಸ್ಕ್‌ ನೀಡಲ್ಲ:

ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಿಗೂ ಎನ್‌-95 ಮಾಸ್ಕ್‌ ನೀಡುತ್ತಿಲ್ಲ. ವಾರಕ್ಕೆ ಒಂದೇ ಮಾಸ್ಕ್‌ ನೀಡುತ್ತಿದ್ದಾರೆ. ಹೀಗಾಗಿ ವೈದ್ಯರೂ ಸಹ ತಮ್ಮ ಜೀವ ರಕ್ಷಿಸಿಕೊಳ್ಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಅಡಿ ಬರುವ ಆಸ್ಪತ್ರೆಗೆ ಅನುದಾನದ ಕೊರತೆ ಇಲ್ಲ. ಆದರೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ವೈದ್ಯರು ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣಾ ಪರಿಕರ ಸರಬರಾಜು ಆಗುತ್ತಿಲ್ಲ ಎಂದು ವೈದ್ಯರು ದೂರಿದ್ದಾರೆ.
 

click me!