ತೆರಿಗೆ ಬಾಕಿ ಉಳಿಸಿಕೊಂಡ್ರೆ ಆಸ್ತಿ ಮುಟ್ಟುಗೋಲು

By Kannadaprabha NewsFirst Published Oct 10, 2020, 8:55 AM IST
Highlights

ತೆರಿಗೆ ಬಾಕಿದಾರರ ಆಸ್ತಿ ಮುಟ್ಟುಗೋಲು| ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ ನೋಟಿಸ್‌ ಜಾರಿಗೊಳಿಸಿ| ಆಗಲೂ ತೆರಿಗೆ ಕಟ್ಟದಿದ್ದರೆ ವಾರೆಂಟ್‌ ಜಾರಿಗೊಳಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ: ಗುಪ್ತಾ|
 

ಬೆಂಗಳೂರು(ಅ.10):  ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಪಾಲಿಕೆ ಕಂದಾಯ ವಿಭಾಗದ ಆಸ್ತಿ ತೆರಿಗೆ ಸಂಗ್ರಹ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ ನೋಟಿಸ್‌ ಜಾರಿಗೊಳಿಸಬೇಕು. ಆಗಲೂ ತೆರಿಗೆ ಪಾವತಿಸದಿದ್ದರೆ ವಾರೆಂಟ್‌ ಜಾರಿಗೊಳಿಸಿ ಆ ಆಸ್ತಿಗಳನ್ನು ಮುಟ್ಟುಗೋಲು ಅಥವಾ ಬೀಗಮುದ್ರೆ ಹಾಕಬೇಕು. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಆಸ್ತಿಗೆ ತೆರಿಗೆ ಸಂಗ್ರಹದಲ್ಲಿ ವಿಳಂಬ ಮಾಡದೆ, ಆದಾಯ ಕ್ರೋಢೀಕರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಇನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗದ ಆಸ್ತಿಗಳನ್ನು ಕೂಡಲೇ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು. ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿಸಿದ್ಧಪಡಿಸಿ, ಬಾಕಿ ಮೊತ್ತವನ್ನು ಸಂಗ್ರಹಿಸಬೇಕು. ಆಸ್ತಿ ತೆರಿಗೆ ಸಂಗ್ರಹಿಸಲು ಸಮಗ್ರ ಯೋಜನೆ ರೂಪಿಸಿ, ಆಸ್ತಿಗಳನ್ನು ಪರಿಶೀಲಿಸಿ ತೆರಿಗೆ ಸಂಗ್ರಹಿಸಬೇಕು. ಜಿಐಎಸ್‌ ಮ್ಯಾಪಿಂಗ್‌, ಡ್ರೋನ್‌ ಸೇರಿದಂತೆ ಇತರೆ ತಂತ್ರಜ್ಞಾನ ಸಮರ್ಥವಾಗಿ ಬಳಸಿಕೊಳ್ಳಕೊಂಡು ಪಾಲಿಕೆಗೆ ಹೆಚ್ಚು ಆದಾಯ ಬರುವಂತೆ ಕೆಲಸ ಮಾಡಬೇಕು ಎಂದರು.

ಆಸ್ತಿ ತೆರಿಗೆ ಕಟ್ಟದಿದ್ದರೆ ಚರಾಸ್ತಿ ಜಪ್ತಿ..!

ಪಾಲಿಕೆಗೆ ಬರುವ ಆದಾಯ ಮೂಲಗಳನ್ನು ಹೆಚ್ಚಿಸಬೇಕು. ಸರ್ಕಾರದಿಂದ ಬರುವ ಆದಾಯವನ್ನು ಅವಲಂಬಿಸದೆ ಪಾಲಿಕೆಗೆ ವಿವಿಧ ಮೂಲಗಳಿಂದ ಬರುವ ಆದಾಯದ ಪ್ರಮಾಣವನ್ನು ಹೆಚ್ಚಳ ಮಾಡಬೇಕು. ನಿಗದಿತ ಅವಧಿಯಲ್ಲಿ ಹೆಚ್ಚು ತೆರಿಗೆ ಸಂಗ್ರಹಕ್ಕೆ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾತನಾಡಿ, ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 100 ಸುಸ್ತಿದಾರರ ಪಟ್ಟಿಸಿದ್ಧಪಡಿಸಿ, ಅವರಿಗೆ ನೋಟಿಸ್‌ ಜಾರಿಗೊಳಿಸಬೇಕು ಎಂದು ಹೇಳಿದರು.

ಪ್ರತಿ ವಾರ ಪರಿಶೀಲನಾ ಸಭೆ:

ಆಸ್ತಿ ಮಾಲೀಕರು ‘ಸ್ವಯಂ ಮೌಲ್ಯಮಾಪನ ಯೋಜನೆ’ ಅಡಿ ಘೋಷಣೆ ಮಾಡಿಕೊಂಡಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಪ್ರತಿ ವಲಯದಲ್ಲೂ ‘ಖಾತಾ ಮೇಳ’ ಏರ್ಪಡಿಸಿ, ಆಸ್ತಿ ಮಾಲೀಕರಿಗೆ ನಿಗದಿಯ ಸಮಯದಲ್ಲಿ ಖಾತೆಗಳನ್ನು ನೀಡಬೇಕು. ಈ ಮೂಲಕ ಹೆಚ್ಚು ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಪ್ರತಿ ವಾರ ಪರಿಶೀಲನಾ ಸಭೆ ನಡೆಸಬೇಕು ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚಿಸಿದರು.

2,039 ಕೋಟಿ ರು. ಆಸ್ತಿಗೆ ತೆರಿಗೆ ಸಂಗ್ರಹ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 19.80 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 2,039 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈಗಾಗಲೇ ವಲಯ ಹಾಗೂ ವಾರ್ಡ್‌ವಾರು 100 ಸುಸ್ತಿದಾರರ ಪಟ್ಟಿಸಿದ್ಧಪಡಿಸಲಾಗಿದೆ. ನೋಟಿಸ್‌ ಹಾಗೂ ವಾರೆಂಟ್‌ ಜಾರಿಗೊಳಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಆಸ್ತಿಗೆ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗದ ಆಸ್ತಿಗಳನ್ನು ಒಂದು ತಿಂಗಳಲ್ಲಿ ಸರ್ವೇ ಮಾಡಿಸಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ವಿಶೇಷ ಆಯುಕ್ತ ಬಸವರಾಜು ಅವರು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

Morning Express:

"

click me!