ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ ಏನೂ ಬೇಡ, ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರೆಯುವೆ: ರಾಮಲಿಂಗಾರೆಡ್ಡಿ ಯೂ ಟರ್ನ್

Published : Jun 08, 2026, 06:15 PM IST
 Ramalinga Reddy

ಸಾರಾಂಶ

ಈ ಹಿಂದೆ ಖಾತೆ ಹಂಚಿಕೆಯಿಂದ ಮುನಿಸಿಕೊಂಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ, ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ತಮಗೆ ನೀಡಲಾದ ಜಲಸಂಪನ್ಮೂಲ ಇಲಾಖೆಯಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದು, ಬೆಂಗಳೂರು ಉಸ್ತುವಾರಿ ಸೇರಿದಂತೆ ಬೇರೆ ಯಾವುದೇ ಖಾತೆಯೂ ಬೇಡವೆಂದು ಖಡಾಖಂಡಿತವಾಗಿ ಹೇಳಿದ್ದಾರೆ.  

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಹಿಂದೆ ಮುನಿಸಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು ತಮ್ಮ ನಿಲುವನ್ನು ಈಗ ಬದಲಿಸಿದ್ದು, ತಮಗೆ ಸದ್ಯ ಹಂಚಿಕೆಯಾಗಿರುವ ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲೇ ತಾವು ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಉಸ್ತುವಾರಿ ನನಗೆ ಬೇಡ, ಕೊಟ್ಟರು ಬೇಡ ಅಂತಿನಿ. ತಮಗೆ ಬೇರೆ ಯಾವುದೇ ಇಲಾಖೆಯ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮೊದಲ ಅಧಿಕೃತ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಖಾತೆ ಹಂಚಿಕೆ ಹಾಗೂ ಬೆಂಗಳೂರು ಉಸ್ತುವಾರಿಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ಅತ್ಯಂತ ನೇರವಾಗಿಯೇ ಉತ್ತರಿಸಿದರು.

ಖಾತೆ ಬದಲಾವಣೆಯೂ ಬೇಡ, ಬೆಂಗಳೂರು ಉಸ್ತುವಾರಿಯೂ ಬೇಡ!

ನನಗೆ ಇನ್ನೊಂದು ಖಾತೆ ಬೇಡವೇ ಬೇಡ. ಸದ್ಯ ನನಗೆ ನೀಡಿರುವ ಇಲಾಖೆಯಲ್ಲೇ ನಾನು ಮುಂದುವರಿಯುತ್ತೇನೆ. ಸರ್ಕಾರದಲ್ಲಿ ಖಾತೆಗಾಗಿ ಕಾಯುತ್ತಿರುವ ಬೇರೆ ಶಾಸಕರು ಮತ್ತು ನಾಯಕರಿದ್ದಾರೆ, ಹೊಸ ಖಾತೆಗಳನ್ನು ಅವರಿಗೆ ಕೊಡಲಿ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ನಾನು ಯಾವತ್ತೂ ಬೆಂಗಳೂರು ಉಸ್ತುವಾರಿಗಾಗಿ ಬೇಡಿಕೆ ಇಟ್ಟಿಲ್ಲ. ಒಂದು ವೇಳೆ ಅವರಾಗಿ ತಂದುಕೊಟ್ಟರೂ ನಾನು ಅದನ್ನು ತಿರಸ್ಕರಿಸುತ್ತೇನೆ, ನನಗೆ ಉಸ್ತುವಾರಿ ಹುದ್ದೆ ಬೇಡ ಎಂದು ಸ್ಪಷ್ಟಪಡಿಸಿದರು.

ಈ ಇಲಾಖೆಯು ದೇಶದ ಬೆನ್ನೆಲುಬಾದ ರೈತರಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ನಾನು ಈ ಹಿಂದೆಯೂ ಕೃಷಿ ಸಚಿವನಾಗಿ ಯಶಸ್ವಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಹೈಕಮಾಂಡ್ ಮುಂದೆ ಇಂತಹದೇ ಇಲಾಖೆ ಬೇಕು ಎಂದು ನಾನು ಯಾವತ್ತೂ ಕೇಳಿದವನಲ್ಲ. ಖಾತೆಗಳ ಬದಲಾವಣೆಗಾಗಿ ನಾನು ದೆಹಲಿಗೆ ಹೋಗಿಯೇ ಇಲ್ಲ ಎಂದರು.

ಹಿಂದಿನ ಸಾಧನೆಗಳನ್ನು ಸ್ಮರಿಸಿದ ಸಚಿವರು

ಈ ಹಿಂದೆ ತಾವು ನಿಭಾಯಿಸಿದ ಸಾರಿಗೆ ಹಾಗೂ ಮುಜರಾಯಿ ಇಲಾಖೆಗಳ ದಿನಗಳನ್ನು ನೆನಪಿಸಿಕೊಂಡ ಸಚಿವರು, ತಮಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು. ನನಗೆ ಹಿಂದೆ ಸಾರಿಗೆ ಇಲಾಖೆಯ ಜವಾಬ್ದಾರಿ ನೀಡಿದಾಗ ಸಂಸ್ಥೆಯು ತೀವ್ರ ಸಾಲದ ಸುಳಿಯಲ್ಲಿ ಸಿಲುಕಿತ್ತು. ಆದರೆ, ನನ್ನ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಘಟಿತ ಶ್ರಮದಿಂದಾಗಿ ಸಾರಿಗೆ ಸಂಸ್ಥೆಗೆ ಬರೋಬ್ಬರಿ 425 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದವು. ನಾನು ಈವರೆಗೆ ಕೆಲಸ ಮಾಡಿದ ಎಲ್ಲಾ ಇಲಾಖೆಗಳಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಯಾವುದೇ ಇಲಾಖೆಯಲ್ಲೂ ಕೆಟ್ಟ ಹೆಸರು ತಂದ ಉದಾಹರಣೆ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೆಮ್ಮೆಯಿಂದ ನುಡಿದರು.

ನೀರಾವರಿ ಅಧಿಕಾರಿಗಳೊಂದಿಗೆ ಮೊದಲ ಸಭೆ: ಭದ್ರಾ ನೀರು ಬಿಡುಗಡೆಗೆ ಸಜ್ಜು

ಖಾತೆ ಬೇಡ ಎಂದಿದ್ದ ಸಚಿವರು, ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಭರದಿಂದ ಕೆಲಸಕ್ಕೆ ಇಳಿದಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಸುದೀರ್ಘ ಮೊದಲ ಪರಿಶೀಲನಾ ಸಭೆ ನಡೆಸಿದರು. ಇಲಾಖೆಯ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಹಾಗೂ ರಾಜ್ಯದ ನಾಲ್ಕು ಪ್ರಮುಖ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ (MD) ಸಭೆ ನಡೆಸಿದ ಸಚಿವರು, ಪ್ರಸ್ತುತ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳು ಹಾಗೂ ವಿವಿಧ ಕಾಮಗಾರಿಗಳ ಪ್ರಗತಿಯ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.

ಸುದ್ದಿಗೋಷ್ಠಿಯಲ್ಲಿ ಸಚಿವರು ಹಂಚಿಕೊಂಡ ಪ್ರಮುಖ ನಿರ್ಧಾರಗಳು:

ನಿಗಮಗಳ ಸಭೆ: ಕೃಷ್ಣ ಜಲಭಾಗ್ಯ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲಶಕ್ತಿ ಹಾಗೂ ಕಾವೇರಿ ನೀರಾವರಿ ನಿಗಮಗಳ ಪ್ರಗತಿ ಪರಿಶೀಲನೆಗಾಗಿ ಈ ವಾರದ ಶುಕ್ರವಾರ ಹಾಗೂ ಮುಂದಿನ ವಾರ ಎರಡು ಹಂತಗಳಲ್ಲಿ ಪ್ರತ್ಯೇಕ ನಿಗಮವಾರು ಸಭೆಗಳನ್ನು ಕರೆಯಲಾಗಿದೆ.

ಬೆಂಗಳೂರು ನೀರಿನ ಸಮಸ್ಯೆ: ರಾಜಧಾನಿ ಬೆಂಗಳೂರಿನಲ್ಲಿ ತಲೆದೋರುತ್ತಿರುವ ಕುಡಿಯುವ ನೀರಿನ ಅಭಾವವನ್ನು ಕಾಯಂ ಆಗಿ ತಗ್ಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಲಾಗಿದ್ದು, ಸೂಕ್ತ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ.

ಭದ್ರಾ ಮೇಲ್ದಂಡೆ ಯೋಜನೆ: ರಾಜ್ಯದ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಕೊನೆಯ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳ ಒಳಗಾಗಿ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಇಲಾಖೆಯ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿರುವುದರಿಂದ, ಮುಂದಿನ ವಾರ ತಾವು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಚಿವರು ಪ್ರಕಟಿಸಿದರು. ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಅನುಮೋದನೆ ಹಾಗೂ ಅನುದಾನ ಕೋರಲಿದ್ದಾರೆ. ಇದೇ ವೇಳೆ ಕರ್ನಾಟಕ ಮೂಲದ ಕೇಂದ್ರ ಸಚಿವರು ಹಾಗೂ ರಾಜ್ಯದ ಎಲ್ಲಾ ಸಂಸದರನ್ನು ಒಟ್ಟಾಗಿ ಭೇಟಿಯಾಗಿ, ರಾಜ್ಯದ ನೀರಾವರಿ ಹಿತರಕ್ಷಣೆಗಾಗಿ ಪಕ್ಷಾತೀತವಾಗಿ ಒಟ್ಟಾಗಿ ಧ್ವನಿ ಎತ್ತುವಂತೆ ಮನವಿ ಮಾಡುವುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ: ಧಾರವಾಡದ ಯುವಕರ ಐತಿಹಾಸಿಕ ಸಾಧನೆ