
ಮೈಸೂರು (ಜೂ.08): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾದ ಕ್ಯಾಬಿನೆಟ್ ದರ್ಜೆಯ ಮೊದಲ ಮಂತ್ರಿಮಂಡಲದ ಪಟ್ಟಿಯಲ್ಲಿ ದಲಿತ ನಾಯಕ ಹೆಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ವಿವಿಧ ಸಂಘಟನೆಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯವೆದ್ದಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿರುವ ನಡುವೆಯೇ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವರುಣ ಕ್ಷೇತ್ರದ ಶಾಸಕ ಹೆಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವ ವಿಚಾರ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಮಹದೇವಪ್ಪ ಅವರ ಹೆಸರು ಕೈ ತಪ್ಪಿರುವುದಕ್ಕೆ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಹೆಚ್.ಸಿ. ಮಹದೇವಪ್ಪ ಅವರು ಕೇವಲ ರಾಜಕಾರಣಿಯಲ್ಲ, ದಲಿತ ಚಳುವಳಿಯಿಂದ ಬೆಳೆದು ಬಂದ ನಾಯಕ ಎಂದು ಹೇಳಿದರು. ದಲಿತ ಸಮುದಾಯದ ಪರವಾಗಿ ಹಲವು ವರ್ಷಗಳಿಂದ ಧ್ವನಿ ಎತ್ತಿರುವ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್.ಸಿ. ಮಹದೇವಪ್ಪ ನಡುವೆ ದೀರ್ಘಕಾಲದ ರಾಜಕೀಯ ಸ್ನೇಹ ಹಾಗೂ ಸಂಘಟನಾ ಬಲವಿದೆ. ಹಳೆ ಮೈಸೂರು ಭಾಗದಲ್ಲಿ ಈ ಇಬ್ಬರು ನಾಯಕರ ಪ್ರಭಾವ ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದು, ಮಹದೇವಪ್ಪ ಅವರನ್ನು ಕಡೆಗಣಿಸುವುದು ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಇಲ್ಲದೆ ಮಹದೇವಪ್ಪ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವಂತೆ, ಮಹದೇವಪ್ಪ ಇಲ್ಲದೆ ಸಿದ್ದರಾಮಯ್ಯ ಮತ್ತು ಅವರ ಪುತ್ರನ ರಾಜಕೀಯ ಬೆಳವಣಿಗೆಯೂ ಸುಲಭವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಸೇರಿದಂತೆ ಹಳೆ ಮೈಸೂರು ಭಾಗದ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹದೇವಪ್ಪ ಅವರಿಗೆ ಪ್ರಭಾವವಿದ್ದು, ಅವರನ್ನು ಸಚಿವ ಸಂಪುಟದಿಂದ ಹೊರಗಿಡುವುದರಿಂದ ಕಾಂಗ್ರೆಸ್‌ಗೆ ಚುನಾವಣಾ ಮಟ್ಟದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದೇ ತಿಂಗಳ 10ರಂದು ಸುತ್ತೂರಿನಲ್ಲಿ ವರುಣ ಕ್ಷೇತ್ರದ ದಲಿತ ಸಮುದಾಯದ ಮಹತ್ವದ ಸಭೆಯನ್ನು ಆಯೋಜಿಸಲಾಗಿದ್ದು, ಕ್ಷೇತ್ರದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ಹೆಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮಹದೇವಪ್ಪ ಅವರನ್ನು ನಿರ್ಲಕ್ಷಿಸಿದರೆ ದಲಿತ ಸಮುದಾಯದಲ್ಲಿ ಅಸಮಾಧಾನ ಹೆಚ್ಚಾಗಬಹುದು. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ದುಬಾರಿಯಾಗಬಹುದು ಎಂದು ಡಿಎಸ್ಎಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಹೈಕಮಾಂಡ್ ಈ ಬೇಡಿಕೆಯನ್ನು ಹೇಗೆ ಪರಿಗಣಿಸುತ್ತದೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.