'ಆಸ್ಪತ್ರೆಗೆ ಹೋದರೆ ಸಾಯಿಸ್ತಾರೆ, ದಯವಿಟ್ಟು ಮನೆಯಲ್ಲೇ ಇರಿ'

By Kannadaprabha NewsFirst Published Apr 30, 2021, 7:56 AM IST
Highlights

ಕಣ್ಣೀರಿಟ್ಟು ಮನವಿ ಮಾಡಿದ 11 ವರ್ಷದ ಬಾಲಕಿ| ಆಸ್ಪತ್ರೆಯಲ್ಲಿ ಆಕ್ಸಿಜನ್‌ ದೊರಕದೆ ಮೃತಪಟ್ಟ ತಂದೆ| ಗಣ್ಯರು ಮೃತರಾದರೆ ಬೀದಿಯಲ್ಲಿ ಮೃತದೇಹ ಇರಿಸುತ್ತಿದ್ದರೇ ಎಂದು ಮೃತನ ಮಹಿಳಾ ಸಂಬಂಧಿ ಹಿಡಿಶಾಪ| 
 

ಬೆಂಗಳೂರು(ಏ.30): 'ಕೊರೋನಾ ಬಂದಿದೆ ಎಂದು ದಯವಿಟ್ಟು ಯಾರೂ ಆಸ್ಪತ್ರೆಗೆ ಹೋಗಬೇಡಿ. ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಿ. ಮನೆಯಲ್ಲಿದ್ದರೆ ಬದುಕುವ ಸಾಧ್ಯತೆಯಾದರೂ ಇರುತ್ತದೆ. ಆಸ್ಪತ್ರೆಗೆ ಹೋದರೆ ಆಕ್ಸಿಜನ್‌ ಮತ್ತು ಹಾಸಿಗೆ ಕೊಡದೆ ಸಾಯಿಸಿಬಿಡುತ್ತಾರೆ.' ಇದು ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ಹೋದರೂ ಆಕ್ಸಿಜನ್‌ ದೊರಕದೆ ಮೃತಪಟ್ಟ ವ್ಯಕ್ತಿಯೊಬ್ಬನ 11 ವರ್ಷದ ಮಗಳು ಕಣ್ಣೀರಿಟ್ಟು ಜನತೆಯಲ್ಲಿ ಮಾಡಿದ ಮನವಿ.

45 ವರ್ಷದ ಆನಂದ್‌ಗೆ ಇತ್ತೀಚೆಗೆ ಕೊರೋನಾ ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಬಿಬಿಎಂಪಿಯ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಹಲವು ಆಸ್ಪತ್ರೆ ಸುತ್ತಾಡಿದರೂ ಎಲ್ಲೂ ಹಾಸಿಗೆ ಮತ್ತು ಆಕ್ಸಿಜನ್‌ ಸಿಗಲಿಲ್ಲ. ಅಂತಿಮವಾಗಿ ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಸೋಂಕಿತನನ್ನು ಕರೆದೊಯ್ಯಲಾಗಿತ್ತು. ಆದರೆ ಅಲ್ಲೂ ಹಾಸಿಗೆ ಸಿಗಲಿಲ್ಲ. ಕೊನೆಗೆ ಆಕ್ಸಿಜನ್‌ ಕೊರತೆ ಉಂಟಾಗಿ ಆತ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಆಸ್ಪತ್ರೆ ಮುಂದೆ ಕಣ್ಣೀರು ಹಾಕುತ್ತಾ ಗೋಳಾಡಿದ ಮೃತನ ಪತ್ನಿ, ಆಕ್ಸಿಜನ್‌ ಕೊಡದಿರುವುದೇ ಪತಿ ಸಾವಿಗೆ ಕಾರಣ. ಪತಿ ಆಕ್ಸಿಜನ್‌ ಸಿಕ್ಕರೆ ನಾನು ಬದುಕುವೆ ಎನ್ನುತ್ತಿದ್ದರು. ಬಿಬಿಎಂಪಿ ಸಹಾಯದಿಂದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಬಂದರೂ ಇಲ್ಲಿ ಯಾರೂ ನಮ್ಮನ್ನು ಕ್ಯಾರೆ ಎಂದಿಲ್ಲ. ಇನ್ನೂ ಶವ ಕೂಡ ಕೊಟ್ಟಿಲ್ಲ ಎಂದು ನೊಂದು ನುಡಿದರು.

ಒಂದೇ ದಿನಕ್ಕೆ ತಣ್ಣಗಾಯ್ತು ಕರ್ಫ್ಯೂ ಬಿಸಿ: ಯಾವುದೇ ಭಯವಿಲ್ಲದೆ ಜನರ ಓಡಾಟ..!

ರಾಮಯ್ಯ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತನ 11 ವರ್ಷದ ಪುತ್ರಿ, ಹಾಸಿಗೆ ಬೇಕೆಂದು ಹಲವು ಆಸ್ಪತ್ರೆಗಳಿಗೆ ಸುತ್ತಾಡಿದೆವು. ಎಲ್ಲೂ ನನ್ನ ತಂದೆಯನ್ನು ದಾಖಲಿಸಿಕೊಂಡಿಲ್ಲ. ಬಿಬಿಎಂಪಿಗೆ ಕರೆ ಮಾಡಿ ಎಂದರು. ಹತ್ತಾರು ನಂಬರ್‌ಗಳನ್ನು ಬರೆದುಕೊಂಡು ಕರೆ ಮಾಡಿದರೂ ಬಿಬಿಎಂಪಿ ಸರಿಯಾಗಿ ಸ್ಪಂದಿಸಿಲ್ಲ. ಬಿಬಿಎಂಪಿ ಸಹಾಯದಿಂದಲೇ ರಾಮಯ್ಯ ಆಸ್ಪತ್ರೆಗೆ ದಾಖಲಿಸಲು ಬಂದೆವು. ನಿನ್ನೆ ಇಡೀ ದಿನ ಕಾದೆವು. ಎಷ್ಟುಮನವಿ ಮಾಡಿದರೂ ಆಕ್ಸಿಜನ್‌ ಇದ್ದರೂ ಕೊಟ್ಟಿಲ್ಲ. ಐಸಿಯು ಹಾಸಿಗೆ ನೀಡಿ ಒಂದೆರಡು ಲೀಟರ್‌ ಆಕ್ಸಿಜನ್‌ ನೀಡಿದ್ದರೂ ನಮ್ಮಪ್ಪ ಬದುಕುತ್ತಿದ್ದರು. ಈಗ ನನ್ನ ತಂದೆ ಇಲ್ಲ. ಮುಂದೆ ನನ್ನನ್ನು ಯಾರು ಸಾಕಿ ಸಲಹುತ್ತಾರೆ? ಅಮ್ಮನ ಕೈಯಲ್ಲಿ ದುಡಿಯಲು ಆಗುವುದಿಲ್ಲ ಎಂದು ಕಣ್ಣೀರಿಟ್ಟಳು.

ರಾಜಕಾರಣಿಗಳಿಗೆ ಎಲ್ಲವೂ ಸಿಗುತ್ತದೆ:

ರಾಜಕಾರಣಿಗಳು, ಸಚಿವರಿಗೆ ಉಸಿರಾಟದ ತೊಂದರೆಯಾದರೆ ಆಕ್ಸಿಜನ್‌ ಅವರ ಮನೆಗೇ ಕಳಿಸುತ್ತಾರೆ. ಆದರೆ, ಜನ ಸಾಮಾನ್ಯರಿಗೆ ಆಕ್ಸಿಜನ್‌ ಇದ್ದರೂ ಕೊಡಲ್ಲ. ಆಕ್ಸಿಜನ್‌ ಕೊಡದೆ ಸಾವನ್ನಪ್ಪಿದವರ ಶವವನ್ನು ರಸ್ತೆಯಲ್ಲಿ ಹಾಕುತ್ತಾರೆ. ಅದೇ ಗಣ್ಯರು ಮೃತರಾದರೆ ಬೀದಿಯಲ್ಲಿ ಮೃತದೇಹ ಇರಿಸುತ್ತಿದ್ದರೇ ಎಂದು ಮೃತನ ಮಹಿಳಾ ಸಂಬಂಧಿ ಹಿಡಿಶಾಪ ಹಾಕಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!