ಕೊಪ್ಪಳ (ಜು.30): ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಹೆಸರಿನ ಖಾತೆಯೊಂದರಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮನ್ನು ಭೇಟಿ ಮಾಡಿದ್ದರು ಎನ್ನುವುದನ್ನು ಹೇಳಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಇದನ್ನು ತಕ್ಷಣ ಸಂಸದ ಸಂಗಣ್ಣ ಕರಡಿ ಅವರು ತಳ್ಳಿ ಹಾಕಿದ್ದು, ನಾನು ಡಿಕೆಶಿ ಅವರನ್ನು ಭೇಟಿ ಮಾಡಿಯೇ ಇಲ್ಲ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
ಏನಿದು ವಿವಾದ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಹೆಸರಿನ ಖಾತೆಯೊಂದರಲ್ಲಿ ಹೀಗೆ ಟ್ವೀಟ್ ಮಾಡಲಾಗಿದೆ. ನನ್ನ ನಿವಾಸದಲ್ಲಿ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ, ಶಾಸಕರಾದ ಬಸನಗೌಡ ದದ್ದಲ್, ಪಿ.ಟಿ. ಪರಮೇಶ್ವರ ನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್, ಮಾಜಿ ಮಂತ್ರಿಗಳಾದ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಭೇಟಿ ಮಾಡಿ, ಪಕ್ಷವನ್ನು ಬೇರು ಮಟ್ಟದಿಂದ ಬಲಗೊಳಿಸುವ ಬಗ್ಗೆ ಚರ್ಚೆ ನಡೆಸಿದೆವು ಎಂದಿದೆ.
ದಿಢೀರ್ ಅಂತ ಪಂಚಮಸಾಲಿಗೆ 2 ಎ ಮೀಸಲಾತಿ ನೀಡಲು ಸಾಧ್ಯವಿಲ್ಲ: ಸಂಸದ ಕರಡಿ
ಅದಕ್ಕೊಂದು ಫೋಟೋ ಸಹ ಜೋಡಿಸಲಾಗಿದೆ. ಹೀಗೆ ಹೆಸರು ಹೇಳಿದ ಎಲ್ಲರೂ ಆ ಫೋಟೋದಲ್ಲಿ ಇದ್ದಾರೆ. ಆದರೆ, ಸಂಸದ ಸಂಗಣ್ಣ ಕರಡಿ ಅವರು ಮಾತ್ರ ಆ ಫೋಟೋದಲ್ಲಿ ಕಾಣುತ್ತಿಲ್ಲ. ಅವರನ್ನು ಹೊಲುವ ಫೋಟೋಗಳು ಇಲ್ಲ. ಆದರೂ ಸಂಸದ ಸಂಗಣ್ಣ ಕರಡಿ ಅವರ ಹೆಸರು ಯಾಕೆ ಹಾಕಿದರು ಎನ್ನುವುದೇ ಈಗ ಎದ್ದಿರುವ ಪ್ರಶ್ನೆ.
ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ನಾನಾ ಮುಖದಿಂದಲೂ ಚರ್ಚೆಯಾಗುತ್ತಿವೆ. ಸಂಸದ ಸಂಗಣ್ಣ ಕರಡಿ ಅವರು ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳಲು ಹೋಗಿದ್ದಾರೆ ಎಂದು ಆಡಿಕೊಳ್ಳಲಾಗುತ್ತಿದೆ.
ಸಂಸದರ ನಿರಾಕರಣೆ
ಆದರೆ, ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಸಂಸದರು, ನಾನು ದೆಹಲಿಯಲ್ಲಿ ಲೋಕಸಭಾ ಅಧಿವೇಶನದಲ್ಲಿ ಇರುವಾಗ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಲು ಹೇಗೆ ಸಾಧ್ಯ? ನಾನು ಯಾರನ್ನೂ ಭೇಟಿ ಮಾಡಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಬಿಜೆಪಿ ವಾಟ್ಸ್‌ಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದಾರೆ.