ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಸಂಸತ್ತಿಗೆ ಆರಿಸಿ ಕಳುಹಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ಅತ್ತ ಸತೀಶ್ ಡಿಕೆಶಿ ತಮ್ಮುರಿಗೆ ಬಂದರೂ ಬಾರದೆ ವಿಚಿತ್ರ ನಡೆ ಪ್ರದರ್ಶಿಸಿದ್ದಾರೆ.
ಬೆಳಗಾವಿ (ಮಾ.29): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಸಂಸತ್ತಿಗೆ ಆರಿಸಿ ಕಳುಹಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಲಿದೆ. ಹೈಕಮಾಂಡ್, ಪಕ್ಷದ ನಾಯಕರು, ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಒಮ್ಮತದಿಂದ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ. ಸತೀಶ್ ಅವರಿಗೆ ಒಂದು ವಾರದ ಹಿಂದೆಯೇ ಬಿ ಫಾರಂ ನೀಡಿದ್ದೇವೆ. ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಹಾಗಾಗಿಯೇ ಬೆಳಗಾವಿಗೆ ಬಂದಿದ್ದೇವೆ ಎಂದರು.
ಬೆಳಗಾವಿ ಬೈಎಲೆಕ್ಷನ್: ಸ್ಪರ್ಧೆ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಕೂಡ ಒಂದು ದಿನ ಈ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಈ ಭಾಗದ ಜನತೆಯ ಧ್ವನಿಯಾಗಿ ಸತೀಶ್ ಜಾರಕಿಹೊಳಿ ಅವರು ಸಂಸದ ಆಗುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಎಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಸ್ವಾಗತಕ್ಕೆ ಬಾರದ ಸತೀಶ್ ಜಾರಕಿಹೊಳಿ!
ಬೆಳಗಾವಿ: ಉಪ ಚುನಾವಣೆ ಪ್ರಚಾರಕ್ಕಾಗಿ ಭಾನುವಾರ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಸ್ವಾಗತ ಕೋರಲು ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಉಪ ಚುನಾವಣೆ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವು ನಾಯಕರು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಆದರೆ, ಜಿಲ್ಲೆಯಲ್ಲಿದ್ದರೂ ಸತೀಶ್ ಜಾರಕಿಹೊಳಿ ಮಾತ್ರ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಿದ್ದರು. ಸತೀಶ್ ಜಾರಕಿಹೊಳಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಡಿ.ಕೆ.ಶಿವಕುಮಾರ್ ಅದಕ್ಕೆಂದೇ ಬೆಳಗಾವಿಗೆ ಆಗಮಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ನಡೆ ಹಲವು ಚರ್ಚೆಗೆ ಕಾರಣವಾಗಿದೆ.