ಕಂಬಳವೀರ ಶ್ರೀನಿವಾಸ ಗೌಡ ಹೊಸ ದಾಖಲೆ

By Kannadaprabha News  |  First Published Mar 29, 2021, 8:11 AM IST

ದಕ್ಷಿಣ ಕನ್ನಡ ಜಿಲ್ಲೆಯ ಕಕ್ಕೆಪದವುನಲ್ಲಿ ನಡೆದ ಕಂಬಳದಲ್ಲಿ ಕೋಣಗಳನ್ನು ಕೇವಲ 8.78 ಸೆಕುಂಡುಗಳಲ್ಲಿ 100 ಮೀಟರ್‌ ಗುರಿ ಮುಟ್ಟಿಸಿ ಇದುವರೆಗಿನ ಅತೀ ವೇಗದ ದಾಖಲೆಯನ್ನು ಶ್ರೀನಿವಾಸ್ ಗೌಡ ನಿರ್ಮಿಸಿದ್ದಾರೆ.
 


ಉಡುಪಿ (ಮಾ.29):  ಕಂಬಳ ಕ್ರೀಡೆಯ ಉಸೇನ್‌ ಬೋಲ್ಟ್ ತಾನೇ ಎಂಬುದನ್ನು ಅಶ್ವತ್ಥಪುರ ಶ್ರೀನಿವಾಸ ಗೌಡರು ಭಾನುವಾರ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಕ್ಕೆಪದವುನಲ್ಲಿ ನಡೆದ ಕಂಬಳದಲ್ಲಿ ಕೋಣಗಳನ್ನು ಕೇವಲ 8.78 ಸೆಕುಂಡುಗಳಲ್ಲಿ 100 ಮೀಟರ್‌ ಗುರಿ ಮುಟ್ಟಿಸಿ ಇದುವರೆಗಿನ ಅತೀ ವೇಗದ ದಾಖಲೆಯನ್ನು ನಿರ್ಮಿಸಿದ್ದಾರೆ.

ಶ್ರೀನಿವಾಸ ಗೌಡ ಅವರೇ ಕಳೆದ ವಾರ ವೇಣೂರುನಲ್ಲಿ ನಡೆದ ಕಂಬಳದಲ್ಲಿ 8.89 ಸೆಕುಂಡುಗಳ ದಾಖಲೆಯನ್ನು ನಿರ್ಮಿಸಿದ್ದರು. ಅದನ್ನು ಅವರೇ ಭಾನುವಾರ ಕಕ್ಕೆಪದವುನಲ್ಲಿ 0.11 ಸೆಕುಂಡುಗಳಲ್ಲಿ ಮುಳುಗಿಸಿಬಿಟ್ಟಿದ್ದಾರೆ. ಅವರು ಮಿಜಾರು ಪ್ರಸಾದ್‌ ನಿಲಯದ ಶಕ್ತಿಪ್ರಸಾದ್‌ ಅವರು ಮಾಲೀಕರಾಗಿರುವ ಪುಟ್ಟ- ಅಪ್ಪು ಕೋಣಗಳನ್ನು ಓಡಿಸಿ ಈ ದಾಖಲೆಯನ್ನು ಬರೆದಿದ್ದಾರೆ.

Tap to resize

Latest Videos

7 ಕಂಬಳ - 18 ಪದಕ: ಈ ಬಾರಿಯ ಕಂಬಳದ ಸೀಸನ್‌ನಲ್ಲಿ ಅತೀ ಹೆಚ್ಚು 18 ಪದಕಗಳನ್ನು ಗೆದ್ದು ಕಂಬಳ ಕ್ರೀಡೆಯಲ್ಲಿ ತಾನೇ ಚಾಂಪಿಯನ್‌ ಎಂಬುದನ್ನೂ ಶ್ರೀನಿವಾಸ ಗೌಡ ನಿರೂಪಿಸಿದ್ದಾರೆ. ಅವರು ಕಳೆದ ವರ್ಷ 15 ಕಂಬಳಗಳಲ್ಲಿ 46 ಪದಕಗಳನ್ನು ಗೆದ್ದು ಚಾಂಪಿಯನ್‌ ಆಗಿದ್ದರು, ಮಾತ್ರವಲ್ಲ 3 ಕಂಬಳಗಳಲ್ಲಿ, ನಾಲ್ಕೂ ವಿಭಾಗಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದರು. ಈ ವರ್ಷ ಕೊರೋನಾದಿಂದಾಗಿ ಕೇವಲ 7 ಕಂಬಳಗಳನ್ನಷ್ಟೇ ನಡೆಸಲಾಗಿದ್ದು, ಅವುಗಳಲ್ಲಿ14 ಪ್ರಥಮ ಮತ್ತು 4 ದ್ವಿತೀಯ ಪದಕಗಳನ್ನು ಗೆದ್ದಿರುವುದು ಕೂಡ ದಾಖಲೆಯೇ ಆಗಿದೆ. ಶ್ರೀನಿವಾಸ ಗೌಡರು ಹಗ್ಗ ಹಿರಿಯ ವಿಭಾಗದಲ್ಲಿ 7 ಪ್ರಥಮ, 2 ದ್ವಿತೀಯ, ಹಗ್ಗ ಕಿರಿಯ ವಿಭಾಗದಲ್ಲಿ 4 ಪ್ರಥಮ, ನೆಗಿಲು ಹಿರಿಯ ವಿಭಾಗದಲ್ಲಿ 3 ಪ್ರಥಮ, 1 ದ್ವಿತೀಯ ಮತ್ತು ನೆಗಿಲು ಕಿರಿಯ ವಿಭಾಗದಲ್ಲಿ 1 ದ್ವಿತೀಯ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.

ಮಂಗಳೂರು ಕಂಬಳದಲ್ಲಿ ನಿಶಾಂತ್‌ ಕೂಟ ದಾಖಲೆ ...

6 ಜೋಡಿ ಕೋಣ ಫೈನಲಿಗೇರಿಸಿದ್ದರು!

ಶ್ರೀನಿವಾಸ ಗೌಡರು ಕಕ್ಕೆಪದವಿನಲ್ಲಿ ನಡೆದ ಕಂಬಳದ 4 ವಿಭಾಗಗಳಲ್ಲಿ 6 ಜೋಡಿ ಕೋಣಗಳನನ್ನು ಓಡಿಸಿದ್ದು, ಎಲ್ಲವೂ ಫೈನಲಿಗೇರಿದ್ದವು. ಅವುಗಳಲ್ಲಿ ಹಗ್ಗ ಹಿರಿಯ ಮತ್ತು ನೆಗಿಲು ಹಿರಿಯ ವಿಭಾಗಗಳ ಫೈನಲ್‌ನಲ್ಲಿ ಅವರಿಗೆ ಅವರೇ ಎದುರಾಳಿಯಾಗಿದ್ದರು. ಕೊನೆಗೆ ಅವರು ಫೈನಲಿಗೇರಿಸಿದ್ದ 2 ಜೋಡಿ ಕೋಣಗಳನ್ನು ಬೇರೆಯವರು ಓಡಿಸಿದರು. ಆದರೆ ಅವರು ನೆಗಿಲು ಕಿರಿಯ ವಿಭಾಗದ ಫೈನಲಿನಲ್ಲಿ ಭಾಗವವಹಿಸಲಿಲ್ಲ, ಉಳಿದ 3 ವಿಭಾಗಗಳಲ್ಲಿ ಪ್ರಥಮ ಬಹುಮಾನಗಳನ್ನು ಶ್ರೀನಿವಾಸ ಗೌಡರೇ ಗೆದ್ದರು.

click me!