ಜಿಲ್ಲೆಗೊಂದು ಸುಸ್ಥಿರ ಪ್ರವಾಸೋದ್ಯಮ ನೀತಿ ಅಗತ್ಯ; ಸಿ.ಟಿ.ರವಿ

By Kannadaprabha News  |  First Published Oct 21, 2022, 11:54 AM IST

ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮುಂದೊಂದು ದಿನ ನಡೆಯಬಹುದಾದ ಸಂಘರ್ಷ ತಪ್ಪಿಸಲು ಜಿಲ್ಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.


ಚಿಕ್ಕಮಗಳೂರು (ಅ.21) : ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮುಂದೊಂದು ದಿನ ನಡೆಯಬಹುದಾದ ಸಂಘರ್ಷ ತಪ್ಪಿಸಲು ಜಿಲ್ಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಚಾದ್ರಿ ಸೇರಿ ದೇಶದ 18 ಕಡೆ ಶೀಘ್ರ ರೋಪ್‌ವೇ: ಕೇಂದ್ರದಿಂದ ಟೆಂಡರ್‌

Tap to resize

Latest Videos

ಜಿಲ್ಲೆ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ. ನಿತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರಿಗೆ ಸ್ವಲ್ಪ ಕಿರಿಕಿರಿಯೂ ಆಗುತ್ತಿದೆ. ಹೀಗೆ ಹೆಚ್ಚುತ್ತಾ ಹೋದಲ್ಲಿ ಮುಂದೊಂದು ದಿನ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಸಂಘರ್ಷ ನಡೆಯುವ ಸಂಭವವಿದೆ. ಅದು ತಪ್ಪಬೇಕಾದರೆ ಸುಸ್ಥಿರ ಪ್ರವಾಸೋದ್ಯಮ ನೀತಿ ರೂಪಿಸುವ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ ಎಂದರು. ಬೇರೆ ಜಿಲ್ಲೆಗಳಿಗಿಂತ ಅಭಿವೃದ್ಧಿಯಲ್ಲಿ ನಾವು ಹಿಂದಿದ್ದೇವೆ ಎನ್ನುವಂತೆ ಆಗಬಾರದೆಂಬ ದೃಷ್ಟಿಯಿಂದ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಚಿಕ್ಕಮಗಳೂರಿನ ಅಭಿವೃದ್ಧಿಗಾಗಿ ಸಾಕಷ್ಟುಹೆಜ್ಜೆ ಹಾಕಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘ ನಗರದಲ್ಲಿ ನಿರ್ಮಿಸುತ್ತಿರುವ ನೌಕರರ ಭವನಕ್ಕೆ ಹೆಚ್ಚುವರಿ 3 ಕೋಟಿ ರು. ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಸರ್ಕಾರಿ ನೌಕರರ ಓಪಿಎಸ್‌ ಮತ್ತು ಎನ್‌ಪಿಎಸ್‌ ಬಗ್ಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಿಸುವ ಚಿಂತನೆ ಹಲವು ವರ್ಷಗಳಿಂದ ಇತ್ತು. 6 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅದನ್ನು ನೆರವೇರಿಸಿದ್ದಾರೆ ಎಂದ ಅವರು, ನೌಕರರ ಭವನದ ನಿರ್ಮಾಣಕ್ಕೆ ಶಾಸಕ ಸಿ.ಟಿ. ರವಿ ಕಾಳಜಿ ಮತ್ತು ಶ್ರಮದಿಂದಾಗಿ ರಾಜ್ಯ ಸರ್ಕಾರ 4 ಕೋಟಿ ರು. ನೀಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಶಾಸಕ ಸಿ.ಟಿ.ರವಿ ಸಹಕಾರದಿಂದಾಗಿ ನೌಕರರ ಭವನಕ್ಕೆ 1 ಕೋಟಿ ರು. ಅನುದಾನ ದೊರೆತಿದ್ದು, ಜೊತೆಗೆ ಶಾಸಕರ ಅನುದಾನದಲ್ಲೂ 10 ಲಕ್ಷ ರು. ನೀಡಿದ್ದಾರೆ ಎಂದು ತಿಳಿಸಿದರು. ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಶಾಸಕ ಸಿ.ಟಿ. ರವಿ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ನೌಕರರ ಭವನ ಹಾಗೂ ರಿಯಾಯಿತಿ ದರದ ನೌಕರರ ಕ್ಯಾಂಟೀನ್‌ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ತಹಶೀಲ್ದಾರ್‌ ವಿನಾಯಕ ಸಾಗರ್‌, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್‌, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಬಿ.ಬಿ. ಕಾಂತರಾಜು, ಅಧೀಕ್ಷಕ ಅಭಿಯಂತ ಕೆ. ವೈ. ಜಗದೀಶ್‌, ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಓಂಕಾರಸ್ವಾಮಿ, ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಡಾ. ಜಗದೀಶ್‌, ರಾಜ್ಯ ಪರಿಷತ್‌ ಸದಸ್ಯ ಎಸ್‌.ಬಿ. ಪೂರ್ಣೇಶ್‌, ಈಶ್ವರಪ್ಪ, ಕೃಷ್ಣಕುಮಾರ್‌, ಸುರೇಶ್‌, ಯೋಗೀಶ್‌, ರಾಜೇಂದ್ರ ಉಪಸ್ಥಿತರಿದ್ದರು.

ಬೋನಸ್‌ ಬೇಡ; ಮಾರ್ಕ್ಸ್ ಕೊಡಿ

ಮುಂಬರುವ ಚುನಾವಣೆ ವೇಳೆ ತಮಗೆ ಮತ್ತು ತಮ್ಮ ಪಕ್ಷಕ್ಕೆ ಬೋನಸ್‌ ಕೊಡಬೇಡಿ, ಸಾಧನೆಯ ರಿಪೋರ್ಚ್‌ ನೋಡಿ ವಾಸ್ತವಿಕ ನೆಲೆಯಲ್ಲಿ ಮಾರ್ಕ್ಸ್ ಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಸರ್ಕಾರಿ ನೌಕರರಿಗೆ ಮನವಿ ಮಾಡಿದರು.

ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮತ್ತು ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ನೌಕರರ ಭವನಕ್ಕೆ ಶಾಸಕರ ಕೊಡುಗೆ, ಅವರ ಕಾಳಜಿ ಮತ್ತು ಸಾಧನೆಗಳನ್ನು ಪ್ರಶಂಸಿಸಿ ಸಂಘ ಮತ್ತು ಸರ್ಕಾರಿ ನೌಕರರು ಸದಾ ಅವರೊಂದಿಗಿರುತ್ತಾರೆ, ಅವರಿಗೆ ಉತ್ತಮ ಮಾರ್ಕ್ಸ್ ಕೊಡುತ್ತಾರೆ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ನಾವೆಲ್ಲಾ ಅನ್ನದ ಋುಣ ಮತ್ತು ಮಣ್ಣಿನ ಋುಣ ತೀರಿಸಬೇಕು, ಅದನ್ನು ತೀರಿಸದಿದ್ದರೆ ನಮ್ಮ ಬದುಕಿಗೆ ಅರ್ಥವಿರುವುದಿಲ್ಲ. ಆ ನಿಟ್ಟಿನಲ್ಲಿ ಋುಣ ತೀರಿಸುವ ಕೆಲಸ ಮಾಡಿದ್ದೇವೆ ಎಂದರು.

ಐಷಾರಾಮಿ ಪ್ರವಾಸಕ್ಕೆ ಬಂತು ಸುಸಜ್ಜಿತ ಕ್ಯಾರವಾನ್‌!

ಚುನಾವಣೆ ವೇಳೆ ನನಗೆ ಮತ್ತು ಪಕ್ಷಕ್ಕೆ ಬೋನಸ್‌ ಮಾರ್ಕ್ಸ್ ಕೊಡಿ ಎಂದು ನಾನು ಕೇಳುವುದಿಲ್ಲ. ಮೌಲ್ಯಮಾಪನ ಮಾಡಬೇಕಾದರೆ ಸರಿಯಾಗಿ ಮಾಡಿ ಎಂದಷ್ಟೇ ನಾನು ಕೇಳುವುದು, ವ್ಯಾಲ್ಯುವೇಷನ್‌ ವೇಳೆ ಜಾತಿ ಮೇಲೆ ಅಥವಾ ಆಮಿಷಕ್ಕೊಳಗಾಗಿ ಮಾಡಬೇಡಿ. ರಿಪೋರ್ಚ್‌ ಕಾರ್ಡ್‌ ನೋಡಿ ಅದರ ಮೇಲೆ ಅಂಕ ನೀಡಿ ಎಂದು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ಇರುವವರಿಂದ ಕೆಲಸವಾಗಬೇಕು, ಗೌರವಯುತ ನಡವಳಿಕೆ ಹೊಂದಿರಬೇಕೆಂದು ಅಪೇಕ್ಷಿಸುತ್ತೀರಿ. ನಮ್ಮ ಊರಿನ ಮರ್ಯಾದೆ ಎತ್ತಿ ಹಿಡಿಯುವಂತೆ ಇರಬೇಕು ಎಂದು ಬಯಸುತ್ತೀರಿ. ಈ ಅಪೇಕ್ಷೆಗೆ ತಕ್ಕಂತೆ ಇದ್ದಲ್ಲಿ ಮಾತ್ರ ಅಂತವರಿಗೆ ನೀವು ಮಾರ್ಕ್ಸ್ ಕೊಡಿ ಎಂದು ಸಲಹೆ ಮಾಡಿದರು. ಮೆರಿಟ್‌ನಲ್ಲೇ ಮುಂದೆ ಹೋಗಬೇಕೆಂದು ನಾನು ಬಯಸುತ್ತೇನೆ, ಅದಕ್ಕೆ ತಕ್ಕಂತೆ ಮಾರ್ಕ್ಸ್ ಕೊಡಿ ಎಂದರು.

click me!