
ಉಡುಪಿ (ಅ.21) :ವಿಶ್ವದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನೆಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ತುಳುನಾಡಿನ ಸಮಗ್ರ ದೈವಾರಾಧಕರು ಕೂಡ ಚೇತನ್ ಹೇಳಿಕೆಯನ್ನು ಖಂಡಿಸಿದ್ದಾರೆ. ನಟ ಚೇತನ್(Chetan) ಹೇಳಿಕೆಯ ಕುರಿತಾಗಿ ತುಳುನಾಡಿ(Tulunadu)ನ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿರುವ ಚಿಂತಕ ಶ್ರೀಕಾಂತ್ ಶೆಟ್ಟಿ(Shrikant Shetty) ಪ್ರತಿಕ್ರಿಯಿಸಿದ್ದು, ಅದರ ಪೂರ್ಣಪಾಠ ಹೀಗಿದೆ.
'ಸುಂದರವಾದ ಸೋಜಿಗವೆಲ್ಲ ಕಣ್ಣ ಮುಂದೆ ಇದೆ...' ಮಗಳೊಂದಿಗೆ ಕಾಂತಾರದ 'ಶಿವ'ನ ಸಲಿಗೆ!
ಅಘೋಷಿತ ಯುದ್ದ ನಡೆಯುತ್ತಿದೆ!
ಕಲ್ಚರಲ್ ನ್ಯಾಷನಲಿಸಂ(Cultural Nationalism) ಮತ್ತು ಕಲ್ಚರಲ್ ಮಾವೋಯಿಸಂ(Cultural Maoism) ಎಂದು ಭಾರತ ದೇಶದಲ್ಲಿ ಅಘೋಷಿತವಾದ ಯುದ್ದ ನಡೆಯುತ್ತಿದೆ. ಕಲ್ಚರಲ್ ಮಾವೋಯಿಸಂ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಉದಾಹರಣೆ ಚೇತನ್ ನೀಡಿರುವ ಹೇಳಿಕೆ.
ಕರಾವಳಿಯಲ್ಲಿ ನಡೆಯುವ ದೈವಾರಾಧನೆ ಹಿಂದೂ ಧರ್ಮದ ಭಾಗವಲ್ಲ ಎಂಬ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಮಾಜದಲ್ಲಿ, ಮುಖ್ಯವಾಗಿ ಕರಾವಳಿ ಭಾಗದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ವಿಷಬೀಜಗಳಿಗೆ ಕರಾವಳಿಯಲ್ಲಿ ಮೊಳಕೆ ಒಡೆಯಲು ಅವಕಾಶ ಇಲ್ಲ ಎಂದರು.
ಚೇತನ್ ಗೆ ಅಧಿಕಾರವಿಲ್ಲ
ಕರಾವಳಿಯ ಪ್ರತಿ ದೇವಸ್ಥಾನದ ಒಳಗೆ ದೈವಸ್ಥಾನವಿದೆ. ಪ್ರತಿ ದೈವಸ್ಥಾನದಲ್ಲಿ ದೇವರನ್ನು ಸ್ತುತಿ ಮಾಡುತ್ತಾರೆ. ದೇವರಿಗೊಂದು ಕಾಯಿ ಕಾಣಿಕೆ ಇಡುವ ಕ್ರಮ ಇದೆ. ಪಂಜುರ್ಲಿ(Panjurli), ಗುಳಿಗ(Guliga), ಜುಮಾದಿ(Jumadi) ಪ್ರತಿಯೊಂದು ದೈವಗಳ ಪಾಡ್ದನದ ಹಿನ್ನಲೆ ಗಮನಿಸಿದಾಗ ಪೌರಾಣಿಕ, ತಂತ್ರೋಕ್ತ, ತಾಂತ್ರಿಕ ದೇವತೆಗಳ ಉಲ್ಲೇಖಗಳು ಬರುತ್ತದೆ. ಇದನ್ನು ನಿರಾಕರಣೆ ಮಾಡಲು ಎಲ್ಲಿಯೋ ಕುಳಿತಿರುವ ಚೇತನ್ ಗೆ ಅಧಿಕಾರ ಇಲ್ಲ ಎಂದು ಕಿಡಿಕಾರಿದರು.
ಹಿಂದು ಧರ್ಮದ ಐಕ್ಯತೆ ಒಡೆಯುವ ಪ್ರಯತ್ನ
ನಾಥ ಪರಂಪರೆ,ಜೋಗಿಗಳು, ಶಾಕ್ತ ಪರಂಪರೆಯ ಅನೇಕ ಶಕ್ತಿಗಳಿವೆ, ವೈದಿಕ ಪರಂಪರೆಯ ಶೈವ ಪರಂಪರೆಯ ದೇವತೆಗಳಿವೆ. ವೈದಿಕ ಮತ್ತು ಅವೈದಿಕ ಎಂದು ಎರಡು ವಿಭಾಗ ಮಾಡುತ್ತಿದ್ದಾರೆ. ಆದರೆ ಜೋಕುಮಾರಸ್ವಾಮಿ, ಮಲೆಮಹದೇಶ್ವರ ಇವರೆಲ್ಲ ಹಿಂದೂ ಧರ್ಮದ ಭಾಗಗಳಲ್ಲ ಎಂದು ಹೇಳಿ ಹಿಂದು ಧರ್ಮದ ಐಕ್ಯತೆಯನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದರು
ಚೇತನ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮತ್ತು ಅದರ ಆಶಯದಡಿಯಲ್ಲಿ ಬಂದ ಕಾನೂನುಗಳಲ್ಲಿ ನಿಮಗೋಸ್ಕರ ಒಂದು ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳಬೇಕು. ಪ್ರತಿ ಬಾರಿ ಹಿಂದೂಗಳೆಂದು ಬರೆದುಕೊಂಡು ನಂತರ ನಾವು ಹಿಂದು ಧರ್ಮದ ಭಾಗವಲ್ಲ ಎನ್ನುವುದು, ಮುಸಲ್ಮಾನರ ಸೂಫೀಸಂ ಭಾರತದ ಪರಂಪರೆಗೆ ಸೇರಿದ್ದು ಎಂದು ಹೇಳಿ ಅದನ್ನು ಕಲಬೆರಕೆ ಮಾಡುವ ಹುಚ್ಚಿದೆ.
ಬೇರೆ ಯಾವುದೋ ಸಿದ್ದಾಂತಗಳನ್ನು ತಂದು ನಮ್ಮ ಜೊತೆ ಬೆರಕೆ ಹಾಕುವ ಆತುರ ಕಾಣಿಸಿಕೊಳ್ಳುತ್ತದೆ. ಆದರೆ ನಮ್ಮ ಒಳಗಡೆ ಇರುವ ಅನೇಕ ವಿಚಾರಗಳನ್ನು ನಮ್ಮಿಂದ ಪ್ರತ್ಯೇಕಗೊಳಿಸುವ ನಿರಂತರ ಪ್ರಯತ್ನವನ್ನು ತಾವು ಮಾಡುತ್ತಿರುವುದನ್ನು ಗಮನಿಸಿದ್ದೇವೆ. ರಾಜೀವ್ ಮಲ್ಹೋತ್ರ(Rajeev Malhotra) ಅವರು ಬ್ರೇಕಿಂಗ್ ಇಂಡಿಯಾ(Breaking India) ಎಂಬ ಕೃತಿಯಲ್ಲಿ ಯಾವ್ಯಾವ ರೀತಿಯಲ್ಲಿ ದೇಶದ ಸಾಂಸ್ಕೃತಿಕ ಬುನಾದಿಯನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಈ ಎಲ್ಲಾ ಶಕ್ತಿಗಳು ಮಾಡುತ್ತವೆ ಎಂದು ಬಹಳ ಚೆನ್ನಾಗಿ ಅಧ್ಯಯನ ಮಾಡಿ ಬರೆದಿದ್ದಾರೆ ಎಂದರು.
ಕಾಂತಾರದ ಅಬ್ಬರಕ್ಕೆ ಬಿಲದಲ್ಲಿ ಅವಿತಿದ್ದ ಎಲ್ಲಾ ದೇಶ, ಹಿಂದು ವಿರೋಧಿ ಶಕ್ತಿಗಳು ಹೊರಗೆ ಬಂದಿದ್ದಾರೆ. ಚೇತನ್ ಒಳ್ಳೆಯ ಚಿತ್ರದ ಮೂಲಕ ರಿಷಬ್ ಶೆಟ್ಟಿ(Rishab shetty)ಯವರಿಗೆ ಕೌಂಟರ್ ಮಾಡಬೇಕು. ವಿವಾದಾತ್ಮಕ ಹೇಳಿಕೆ ನೀಡಿ ಪ್ರೈಮ್ ಟೈಮ್ ಅಲ್ಲಿ ಟಿವಿ ಡಿಬೇಟ್ ನಲ್ಲಿ ಭಾಗವಹಿಸುವುದನ್ನು ಬಿಡಬೇಕು. ನಟ ಅನ್ನುವ ಹೆಸರನ್ನು ಬಳಸಿಕೊಂಡಿದ್ದೀರಿ, ಚಿತ್ರ ಮಾಡುವ ಮೂಲಕ ಉತ್ತರಿಸಿ. ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ನಾವು ನೋಡುತ್ತೇವೆ ಎಂದು ಸಲಹೆ ನೀಡಿದರು
ಹಿಂದು ಸಮಾಜದ ಜೊತೆಗೆ ದೈವಾರಾಧನೆ ಯಾವ ರೀತಿ ಮಿಳಿತವಾಗಿದೆ ಎಂಬುದಕ್ಕೆ ಅನೇಕ ಪುರಾವೆಗಳಿವೆ. ತುಳುನಾಡಿನಲ್ಲಿ ಉಳ್ಳಾಯ, ಉಳ್ಳಾಲ್ತಿ ಆರಾಧಾನೆ ಮಾಡುತ್ತೇವೆ ಅದು ಶಿವ ಶಕ್ತಿಯ ಸ್ವರೂಪದ ಆರಾಧನೆ. ಜನರು ತಮ್ಮ ಕಲ್ಪನೆಗೆ ಅನುಗುಣವಾಗಿ ಶಿವ ಶಕ್ತಿಯನ್ನು ಆರಾಧನೆ ಮಾಡುತ್ತಾ ಬಂದಿದ್ದಾರೆ. ಇದೇ ಭಾರತೀಯ ಸಂಸ್ಕೃತಿಯ ವಿಶೇಷತೆ.
ಸೆಮೆಟಿಕ್ ಮತ ಹಾಗೂ ಪೆಗನ್ಸ್ ಮತಗಳಿರುವ ವ್ಯತ್ಯಾಸ. ನಾವು ದೇವತೆಗಳನ್ನು ಕಲ್ಪಿಸಕೊಳ್ಳಬಹುದು. ನಮ್ಮ ಸುತ್ತಮುತ್ತ ವಿಚಾರಗಳನ್ನು ಜೋಡಿಸಿಕೊಂಡು ಪೂಜಿಸಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಈಶ್ವರ ಇಲ್ಲಿಯೇ ಕೃಷಿ ಮಾಡುತ್ತಾನೆ, ಗದ್ದೆಯಲ್ಲಿ ಬೇಟೆಯಾಡುತ್ತಾನೆ, ಅಲ್ಲಿ ಅವನಿಗೆ ಹಂದಿಯ ಮರಿ ಸಿಗುತ್ತದೆ. ಆ ಮರಿ ಘಟ್ಟವನ್ನು ಇಳಿದು ಕೆಳಗೆ ಬರುತ್ತದೆ. ಇಲ್ಲಿ ಅವನು ಬೇರೆ ಬೇರೆ ಜಾಗಗಳಿಗೆ ಹೋಗಿ ಕಾರಣಿಕವನ್ನು ಮೆರೆಯುತ್ತಾನೆ. ಪಂಜುರ್ಲಿ ದೈವ ಆಗುತ್ತಾನೆ. ಲಕ್ಷಾಂತರ ವರ್ಷಗಳಿಂದ ಈ ಕಥೆಗಳು ನಡೆದು ಬಂದಿದೆ. ಯಾವುದೋ 2-3 ಸಾವಿರ ವರ್ಷಗಳ ಹಿಂದೆ ಯಾವುದೋ ಪುಸ್ತಕದ ಆಧಾರದಲ್ಲಿ ಬಂದಂತಹ ರಿಲೀಜನ್ ಆಫ್ ಬುಕ್ಸ್ ರೀತಿಯ ಕಥೆಗಳಲ್ಲ. ಇದು ತಲೆ ತಲಾಂತರಗಳಿಂದ ಬಂದಿರುವುದು ಎಂದರು
ಪ್ರಕೃತಿಯನ್ನು ಆರಾಧಿಸುವ ಅಂಶವೇ ದೈವಾರಾಧನೆಯ ಮೂಲ ಅಂತಸತ್ವ. ದೈವಾರಾಧನೆಯನ್ನು ಭಾರತೀಯ ಸಂಸ್ಕೃತಿಯಿಂದ ಪ್ರತ್ಯೇಕಗೊಳಿಸಬೇಕು, ಹಿಂದು ಧರ್ಮದಿಂದ ಪ್ರತ್ಯೇಕಗೊಳಿಸಬೇಕು ಎಂಬ ಎಡಪಂಥೀಯರ ಪ್ರಯತ್ನಕ್ಕೆ ಮುಂದಿನ ದಿನಗಳಲ್ಲಿ ತರ್ಕಬದ್ದವಾದ ಉತ್ತರ ನೀಡುತ್ತೇವೆ ಎಂದರು
ದೈವಾರಾಧನೆಯಲ್ಲಿ ಗ್ರಾಮದ ಅಸ್ರಣ್ಣರು ಎನ್ನುವ ಒಂದು ಸ್ಥಾನಮಾನವಿದೆ. ಸಾವಿರ ವರ್ಷಗಳಿಂದ ಗಮನಿಸಿದರೂ ಗ್ರಾಮದಲ್ಲಿ ಯಾರು ಬ್ರಾಹ್ಮಣರಿದ್ದಾರೆ ಅವರಿಗೆ ಮೊದಲನೇ ಸ್ಥಾನ ನಂತರ ಜೈನರು, ಬಂಟರು ಈ ರೀತಿಯ ವರ್ಗಿಕೃತ ವ್ಯವಸ್ಥೆ ದೈವಾರಾಧನೆಯಲ್ಲಿದೆ. ಈ ಪದ್ದತಿಯನ್ನು ಮುಂಡಾಳ, ಬಾಕುಡ, ಪರವ, ಪಂಬದ, ನಲಿಕೆ ಈ ಎಲ್ಲಾ ಜನಾಂಗಗಳು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆ. ಇದು ವರ್ಣ ವ್ಯವಸ್ಥೆ ಅಲ್ಲ, ಇದು ವೈವಿಧ್ಯತೆ. ಇದರಲ್ಲಿ ವೈರುಧ್ಯ ಇಲ್ಲ. ಆ ಎಲ್ಲಾ ಸಮಾಜಗಳು ಸೇರಿದಾಗ ಒಂದು ಗ್ರಾಮವಾಗುತ್ತದೆ. ಹಾಗಾಗಿ ಗ್ರಾಮದ ಎಲ್ಲಾ ವರ್ಗಗಳಿಗೂ ದೈವಾರಾಧನೆ ಕೊಡಿಅಡಿಯಲ್ಲಿ ಒಂದೊಂದು ಚಾಕರಿ ಇದೆ ಎಂದರು
ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು , ನಟ ಚೇತನ್‌ಗೆ ಸಚಿವ ಸುನೀಲ್ ಕುಮಾರ್ ಟಾಂಗ್
ಇತ್ತೀಚಿನ ದಿನಗಳಲ್ಲಿ ನಾವು ಕೂಡ ಕೆಲವೊಮ್ಮೆ ದೈವಾರಾಧನೆ ವೈದಿಕದ ಹಿನ್ನಲೆಯಿಂದ ಬಂದಿಲ್ಲ ಎನ್ನುತ್ತೇವೆ. ಯಾಕೆಂದರೆ ಅದರ ವ್ಯಾಪಾರಿಕರಣ ಆಗುತ್ತಿದೆ. ಯಾರೋ ಬಂದು ಅದರ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ನಾವು ಖಂಡಿಸುತ್ತೇವೆ. ಆದರೆ ವೈದಿಕವೋ, ಅವೈದಿಕವೋ, ತಾಂತ್ರಿಕವೋ ಇವೆಲ್ಲವೂ ನಿರ್ಣಯ ಮಾಡುವ ಹಕ್ಕು ಅದನ್ನು ನಂಬುವ ವ್ಯಕ್ತಿಗಿದೆ. ಚೇತನ್ ನಂತಹ ಕಮ್ಯುನಿಸ್ಟರಿಗಿಲ್ಲ. ಈ ಬಿರುಕುಗಳನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಕಮ್ಯುನಿಸ್ಟರು ತುಳುನಾಡಿನ ದೈವಾರಾಧನೆಯಲ್ಲಿ ಮೂಗು ತೂರಿಸಬಾರದು ಎಂದು ಎಚ್ಚರಿಕೆ ನೀಡಿದರು.