ಯಾದಗಿರಿಯ ಬಳೆ ವ್ಯಾಪಾರಿ ಸೋಂಕಿತನ ರಿಪೋರ್ಟ್ ಕಲಬುರಗಿಯಲ್ಲಿ ನೆಗೆಟಿವ್ ಬಂದಿತ್ತು| ತಂದೆ, ಮಗಳಿಗೆ ಪಾಸಿಟಿವ್ : ಹೇರ್ ಕಟಿಂಗ್ ಮಾಡಿಸಿದ್ದ ಕ್ಷೌರಿಕನೂ ಕ್ವಾರಂಟೈನ್| ನೆಗಟಿವ್ ಬಂದ ಮೇಲೂ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ವೈದ್ಯ ಲೋಕಕ್ಕೂ ಸವಾಲು|
ಆನಂದ್ ಎಂ. ಸೌದಿ
ಯಾದಗಿರಿ(ಮೇ.24): ಕೋವಿಡ್-19 ರಿಪೋರ್ಟ್ ನೆಗೆಟಿವ್ ಬಂದಿತ್ತೆಂಬ ಕಾರಣದಿಂದ ಮೂರು ದಿನಗಳ ಹಿಂದಷ್ಟೇ ಕಲಬುರಗಿಯ ಜಿಮ್ಸ್ (ಗುಲ್ಬರ್ಗ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವಾಪಸ್ಸಾಗಿದ್ದ ಯಾದಗಿರಿ ನಗರದ ದುಕಾನವಾಡಿ ಪ್ರದೇಶದ ವ್ಯಕ್ತಿಯೊಬ್ಬರಿಗೆ ಯಾದಗಿರಿಯಲ್ಲಿ ಸೋಂಕು ಪತ್ತೆಯಾಗಿರುವುದು (ಪಾಸಿಟಿವ್) ಆಘಾತ ಮೂಡಿಸಿದೆ.
undefined
ಶನಿವಾರ ಯಾದಗಿರಿ ಜಿಲ್ಲೆಯಲ್ಲಿ ಪತ್ತೆಯಾದ 72 ಪ್ರಕರಣಗಳಲ್ಲಿ ನಗರದ ದುಕಾನವಾಡಿ ಪ್ರದೇಶದಲ್ಲಿರುವ 38 ವರ್ಷದ ಬಳೆ ವ್ಯಾಪಾರಿ (ಪಿ-1758) ಹಾಗೂ 14 ತಿಂಗಳುಗಳ ಪುಟ್ಟ ಹೆಣ್ಣು ಮಗುವಿನಲ್ಲಿ (ಪಿ-1874) ಸೋಂಕು ಕಂಡು ಬಂದಿದೆ ಎಂದೆನ್ನಲಾಗಿದ್ದರಿಂದ ಅವರನ್ನು ಶನಿವಾರ ಬೆಳಿಗ್ಗೆಯೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆಗೆ ತೆರಳಿ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜೊತೆಗೆ, ಸೋಂಕಿತನ ಪತ್ನಿಯೂ ಸಹ ತೆರಳಿದ್ದಾರೆ.
ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಲು ಕಾರ್ಮಿಕನ ಯತ್ನ: ಹಿಡಿಯಲು ಹೋದ ASI ಮೇಲೆ ಹಲ್ಲೆ
ದೇಹದಲ್ಲಿ ಪದೇ ಪದೇ ರಕ್ತ ಕಡಿಮೆಯಾಗುತ್ತಿರುವ (ಅಪ್ಲಾಸ್ಟಿಕ್ ಅನೀಮಿಯಾ) ರೋಗದಿಂದ ಬಳಲುತ್ತಿದ್ದ ೩೮ ವರ್ಷದ ಸದರಿ ಬಳೆ ವ್ಯಾಪಾರಿ, ಹೋಮಿಯೋಪಥಿ ಚಿಕಿತ್ಸೆಗೆಂದು ಮಹಾರಾಷ್ಟ್ರದ ಪುಣೆಯಲ್ಲಿರುವ ಆದಿತ್ಯ ಆಸ್ಪತ್ರೆಗೆ ತೆರಳಿದ್ದಾಗ, ಲಾಕ್ ಡೌನ್‌ನಿಂದಾಗಿ ಅಲ್ಲಿಯೇ ಸಿಲುಕಿದ್ದರು.
ಲಾಕ್ ಡೌನ್ ಸಡಿಲಿಕೆ ನಂತರ, ಮೇ 16 ರಂದು ಖಾಸಗಿ ಕಾರಿನಲ್ಲಿ ಯಾದಗಿರಿಗೆ ಆಗಮಿಸಿದ ಅವರನ್ನು ಯರಗೋಳ ಚೆಕ್ಪೋಸ್ಟ್‌ನಲ್ಲಿ ಸಿಬ್ಬಂದಿಗಳು ಪರಿಶೀಲಿಸಿ, ಇಲ್ಲಿನ ಆಯುಷ್ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ನಡೆಸಲಾಗಿತ್ತು. ರಕ್ತ ಹೀನತೆಯಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಪರೀಕ್ಷೆಗೆ ಮುದ್ನಾಳ್ ರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಕಲಬುರಗಿಯ ಜಿಮ್ಸ್‌ಗೆ ಶಿಫಾರಸ್ಸು ಮಾಡಲಾಗಿತ್ತು.
ಕಲಬುರಗಿಯ ಜಿಮ್ಸ್‌ನಲ್ಲಿ ಮೇ 16 ರಂದೇ ದಾಖಲಾದ ಇವರ ಗಂಟಲು ದ್ರವ ಮಾದರಿ ಪಡೆದು ಕೋವಿಡ್ ಟೆಸ್ಟ್ (ಆರ್‍ಟಿ-ಪಿಸಿಆರ್)ಸಹ ನಡೆಸಲಾಗಿತ್ತು. ಮೇ 20 ರಂದು ಜಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ. ಡಿಸ್ಜಾರ್ಜ್ ಸಮರಿಯಲ್ಲಿ ಕೋವಿಡ್ ನೆಗೆಟಿವ್ ಎಂದು ಬರೆಯಲಾಗಿದೆ. ಆದರೆ, ಯಾದಗಿರಿಯಲ್ಲಿ ಮತ್ತೊಮ್ಮೆ ಇವರ ಟೆಸ್ಟ್ ನಡೆಸಿ, ಆರೋಗ್ಯದ ದೃಷ್ಟಿಯಿಂದ ಅವರನ್ನು ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೆ, ಶನಿವಾರದ ರಿಪೋರ್ಟ್ ಬಂದಾಗ ಆಘಾತ ಮೂಡಿಸಿದೆ. ಕಲಬುರಗಿಯಲ್ಲಿ ರಿಪೋರ್ಟ್ ನೆಗೆಟಿವ್ ಹಾಗೂ ಯಾದಗಿರಿಯಲ್ಲಿ ಪಾಸಿಟಿವ ಬಂದಿರೋದು ಅಚ್ಚರಿ ಮೂಡಿಸಿದೆ. ಜೊತೆಗೆ, ಸೋಂಕಿತ ವ್ಯಕ್ತಿ ಮನೆ ಪಕ್ಕದಲ್ಲಿನ ಹೇರ್ ಕಟಿಂಗ್ ಸೆಲೂನಿನಲ್ಲಿ ಕ್ಷೌರ ಮಾಡಿಸಿಕೊಂಡಿದ್ದರಿಂದ, ಕ್ಷೌರಿಕನನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನೆಗಟಿವ್ ಬಂದ ಮೇಲೂ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ವೈದ್ಯ ಲೋಕಕ್ಕೂ ಸವಾಲಾಗದಂತಾಗಿದೆ.