ತಾಯಿ ಪಶ್ಚಿಮ ಬಂಗಾಳದಲ್ಲಿ, ಮಕ್ಕಳು ಕೂಡ್ಲಿಗಿಯಲ್ಲಿ| ವಯಸ್ಸಿಗೆ ಬಂದ 3 ಮಕ್ಕಳು ಕರ್ನಾಟಕದಲ್ಲಿ ಅನಾಥರಾಗಿದ್ದು, ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ| 4 ತಿಂಗಳು ದೂರವಾಗಿರುವ ತಾಯಿ ಮಕ್ಕಳನ್ನು ಒಂದು ಮಾಡುವ ಅಗತ್ಯವಿದೆ|
ಕೂಡ್ಲಿಗಿ(ಮೇ.24): ಪಶ್ಚಿಮ ಬಂಗಾಳದ ಕುಟುಂಬವೊಂದು ಕೊರೋನಾ ಹೊಡೆತಕ್ಕೆ ತತ್ತರಿಸಿದೆ. ಗಂಡ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಲ್ಲಿರುವ ಮನೆಯೂ ಈಗ ಅಂಫಾನ್ ಚಂಡಮಾರುತದಿಂದ ಜಖಂ ಆಗಿದೆ. ಹೀಗಾಗಿ, ತಾಯಿ (ಪರ್ಶಿಯಾ)ಗೆ ತನ್ನ ಮೂವರು ಮಕ್ಕಳನ್ನು ಸೇರಲು ಕರ್ನಾಟಕಕ್ಕೆ ಬರಲು ಆಗುತ್ತಿಲ್ಲ. ಹೀಗಾಗಿ, ಸರ್ಕಾರ, ಸಂಘ-ಸಂಸ್ಥೆಗಳು ಈ ಮಹಿಳೆಗೆ ತನ್ನ ಮಕ್ಕಳನ್ನು ಸೇರಲು ಅವಕಾಶ ಮಾಡಿಕೊಡಲು ಮುಂದಾಗಬೇಕಿದೆ.
ವಯಸ್ಸಿಗೆ ಬಂದ 3 ಮಕ್ಕಳು ಕರ್ನಾಟಕದಲ್ಲಿ ಅನಾಥರಾಗಿದ್ದು, ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ತಂದೆಯನ್ನು ಕಳೆದುಕೊಂಡು, ತಾಯಿಯಿಂದ ದೂರವಿರುವ 18 ವರ್ಷದ ಜನಾತುನ್ ಫಿರ್ದೋಸ್, 17 ವರ್ಷದ ಹಕ್ಲೀಮಾ, 14 ವರ್ಷದ ರಹಿಮಾ ಬಿಸ್ವಾಸ್ ತಂದೆಯ ಸಾವು, ತಾಯಿ ದೂರವಾಗಿರುವ ನೋವನ್ನು ನುಂಗಿಕೊಂಡು ಜೀವನ ದೂಡುತ್ತಿದ್ದಾರೆ. 4 ತಿಂಗಳು ದೂರವಾಗಿರುವ ತಾಯಿ ಮಕ್ಕಳನ್ನು ಒಂದು ಮಾಡುವ ಅಗತ್ಯವಿದೆ.
ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!
ಪರ್ಶಿಯಾ ಕುಟುಂಬ ಕಳೆದ 15 ವರ್ಷಗಳಿಂದ ಕೂಡ್ಲಿಗಿಯಲ್ಲಿ ವಾಸವಾಗಿದ್ದಾರೆ. ಇವರು ಇಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ತಿಂಗಳ ಹಿಂದೆ ಪರ್ಶಿಯಾ ಅತ್ತೆ ಮೃತಪಟ್ಟಿದ್ದರು. ಆಗ ದಂಪತಿ ಅಲ್ಲಿಗೆ ತೆರಳಿದ್ದರು. ಲಾಕ್ಡೌನ್ನಿಂದ ಅಲ್ಲೇ ಸಿಲುಕಿಕೊಂಡಿದ್ದರು. ಕಳೆದ ವಾರ ಪರ್ಶಿಯಾ ಪತಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಇದರಿಂದ ಪರ್ಶಿಯಾ ಅಲ್ಲಿ ಒಬ್ಬಂಟಿಯಾಗಿದ್ದಾರೆ.
ನಮ್ಮ ತಂದೆ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ನಮ್ಮ ಹೆಂಚಿನ ಮನೆ ಸಹ ಈಗ ಅಂಫಾನ್ ಚಂಡಮಾರುತದಿಂದ ಜಖಂ ಆಗಿ ಮನೆ ತುಂಬಾ ನೀರು ತುಂಬಿದೆಯಂತೆ. ತಾಯಿ ಮೊಬೈಲ್ ಮೂಲಕ ತಿಳಿಸಿದ್ದು ಅವರಲ್ಲಿ ಅತಂತ್ರರಾಗಿದ್ದಾರೆ. ನಮ್ಮ ತಾಯಿ ಕರ್ನಾಟಕಕ್ಕೆ ಬರಬೇಕೆಂದರೆ ಬಸ್ಸಿಲ್ಲ, ಕಾರು ಬಾಡಿಗೆ ಮಾಡಿಕೊಂಡು ಬರಬೇಕಾದರೆ ಹದಿನೆಂಟು ಸಾವಿರ ಆಗುತ್ತದಂತೆ. ಅಷ್ಟೊಂದು ಹಣ ನಮ್ಗೆ ಎಲ್ಲಿಂದ ಬರಬೇಕು ಎಂದು ತಮ್ಮ ಗೋಳನ್ನು ಹೇಳಿಕೊಳ್ಳುತ್ತಾರೆ ಅನಾಥವಾಗಿರುವ ಜನಾತುನ್ ಫಿರ್ದೋಸ್.