ಕೆಎಸ್‌ಒಯುಗೆ ಮಾತ್ರ ದೂರಶಿಕ್ಷಣ: ಪುನರ್‌ಪರಿಶೀಲಿಸಲು ಸಿಎಂ ಬಳಿ ಮನವಿ

By Kannadaprabha NewsFirst Published Jun 18, 2020, 11:13 AM IST
Highlights

ಈಚಿನ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರಶಿಕ್ಷಣದ ಮೂಲಕ ನಡೆಸುತ್ತಿರುವ ಕೋರ್ಸುಗಳಿಗೆ ಅನುಮತಿ ರದ್ದುಗೊಳಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾತ್ರ ದೂರಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದಾಗಿ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿಯೋಗ ಮುಖ್ಯಮಂತ್ರಿಯನ್ನು ಕೋರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜೂ.18): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾತ್ರ ದೂರಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದಾಗಿ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. 

ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲಸಚಿವ ಪ್ರೊ. ಎಸ್‌.ಎಸ್‌. ಪಾಟೀಲ್‌ ಮತ್ತು ಸಿಂಡಿಕೇಟ್‌ ಸದಸ್ಯರನ್ನು ಒಳಗೊಂಡ ನಿಯೋಗ ಈ ಸಂಬಂಧ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿತು.

ಈಚಿನ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರಶಿಕ್ಷಣದ ಮೂಲಕ ನಡೆಸುತ್ತಿರುವ ಕೋರ್ಸುಗಳಿಗೆ ಅನುಮತಿ ರದ್ದುಗೊಳಿಸಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾತ್ರ ದೂರಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದಾಗಿ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿಯೋಗ ಮುಖ್ಯಮಂತ್ರಿಯನ್ನು ಕೋರಿದೆ. ದೂರಶಿಕ್ಷಣ ಕೋರ್ಸ್‌ಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅನುಷ್ಠಾನಗೊಳಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕುವೆಂಪು ವಿವಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದು, 2019-20ರ ವರೆಗೂ ಯಾವುದೇ ತಡೆಗಳಿಲ್ಲದೆ ಯುಜಿಸಿ ಮಾನ್ಯತೆಯನ್ನು ಮುಂದುವರೆದುಕೊಂಡು ಬಂದಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ನಾಮಪತ್ರಕ್ಕೆ ಇಂದು ಕೊನೆ ದಿನ; ಜೆಡಿಎಸ್‌ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ

ಕೊರೋನಾ ಹಿನ್ನೆಲೆ ಎನ್‌ಐಆರ್‌ಎಫ್‌ ಶ್ರೇಣಿಯಲ್ಲಿ ಪ್ರಥಮ 100 ಸ್ಥಾನ ಪಡೆದ ವಿಶ್ವವಿದ್ಯಾಲಯಗಳಲ್ಲಿ ದೂರ ಶಿಕ್ಷಣ ಮತ್ತು ಆನ್‌ಲೈನ್‌ ಕೋರ್ಸುಗಳನ್ನು ಪ್ರಾರಂಭಿಸಲು ಅನುಮತಿ ನೀಡುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ಘೋಷಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡಾ ಇದಕ್ಕೆ ಪೂರಕವಾಗಿದ್ದು, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗೆ ದೂರಶಿಕ್ಷಣ ನೀಡುವ ಅನುಮತಿ ರದ್ದುಗೊಳಿಸುವ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಕೋರಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ದೂರಶಿಕ್ಷಣ ನೀಡಲು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು, ಮುಕ್ತ ವಿಶ್ವವಿದ್ಯಾಲಯಗಳ ಜೊತೆಗೆ ಇಂದಿರಾ ಗಾಂ​ಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವೂ ಯುಜಿಸಿಯಿಂದ ಮಾನ್ಯತೆ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ದೂರಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ತಮಗೆ ಸೂಕ್ತವೆನಿಸುವ ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಳ್ಳುವ ನೈಸರ್ಗಿಕ ನ್ಯಾಯವನ್ನು ಸರ್ಕಾರ ಪರಿಗಣಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಈ ಸಂದರ್ಭ ಉಪಮುಖ್ಯಮಂತ್ರಿ ಅಶ್ವತ್ಧನಾರಾಯಣ್‌, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಸಿಂಡಿಕೇಟ್‌ ಸದಸ್ಯರಾದ ಧರ್ಮಪ್ರಸಾದ್‌, ಬಳ್ಳೇಕೆರೆ ಸಂತೋಷ್‌, ಎಚ್‌.ಬಿ. ರಮೇಶ್‌ ಬಾಬು, ರಾಮಲಿಂಗಪ್ಪ, ಎಸ್‌.ಆರ್‌. ನಾಗರಾಜ್‌, ಕುವೆಂಪು ವಿವಿ ದೂರಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಡಾ. ಜೆ. ನಾರಾಯಣ್‌ ಇತರರು ಉಪಸ್ಥಿತರಿದ್ದರು.
 

click me!