ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ..!

By Kannadaprabha News  |  First Published Dec 21, 2020, 10:29 AM IST

ಗ್ರಾಪಂ ಚುನಾವಣೆ ಸಿದ್ಧತೆಗಾಗಿ ಕರೆದ ಸಭೆಯಲ್ಲಿ ದೂರುಗಳ ಸರಮಾಲೆ| ಅಲ್ಲಂ ವೀರಭದ್ರಪ್ಪನವರ ಎದುರಿಗೆ ಗೊಂದಲ ಉಂಟಾಗಿ, ಭಿನ್ನಮತ ಸ್ಫೋಟ| 
 


ಹರಪನಹಳ್ಳಿ(ಡಿ.21): ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ಧತೆಗಾಗಿ ಪಟ್ಟಣದ ಆರ್‌ಎಸ್‌ಎನ್‌ ಶಾಲಾ ಆವರಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಸಭೆಯಲ್ಲಿ ವೀಕ್ಷಕ ಅಲ್ಲಂ ವೀರಭದ್ರಪ್ಪನವರ ಎದುರಿಗೆ ಗೊಂದಲ ಉಂಟಾಗಿ, ಭಿನ್ನಮತ ಸ್ಫೋಟಗೊಂಡಿತು.

ಸಭೆ ಪೂರ್ಣಗೊಂಡು ವಂದನಾರ್ಪಣೆ ಹೇಳುವಾಗ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಅವರು ವೇದಿಕೆಯ ಮುಂಭಾಗಕ್ಕೆ ಆಗಮಿಸಿ ಅಲ್ಲಂ ವೀರಭದ್ರಪ್ಪ ಅವರ ಬಳಿ ಈ ಸಭೆಗೆ ನಮಗೆ ಆಹ್ವಾನವಿಲ್ಲ, ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Latest Videos

undefined

ಆಗ ಅಲ್ಲಂ ವೀರಭದ್ರಪ್ಪ ಅವರು ತಮ್ಮದು ಏನಾದರೂ ಇದ್ದರೆ ಲಿಖಿತವಾಗಿ ಕೊಡಿ ಎಂದು ಹೇಳಿದರು. ಆಗ ಹಲುವಾಗಲು ಗ್ರಾಮದ ಮುಖಂಡ ಕಿತ್ತೂರು ಕೊಟ್ರಪ್ಪ ಅವರು ಮಧ್ಯ ಪ್ರವೇಶಿಸಿ ನಮ್ಮ ತಾಲೂಕಿನಲ್ಲಿ ಕಾಂಗ್ರೆಸ್‌ ದಿಕ್ಕೆ ಇಲ್ಲದ ಪಕ್ಷವಾಗಿದೆ. ಈ ಸಭೆಗೆ ನಮಗೂ ಆಹ್ವಾನ ಇಲ್ಲ. ನಾವು ಯಾರ ಹತ್ತಿರ ಹೋಗಬೇಕು ಎಂದು ಅವರು ಪ್ರಶ್ನಿಸಿದರು. ಹೀಗಾದರೆ ಪಕ್ಷ ಕಟ್ಟುವುದು ಹೇಗೆ? ಪಕ್ಷ ಉಳಿಯುತ್ತದೆಯಾ? ಇಡೀ ತಾಲೂಕು ಪ್ರವಾಸ ಮಾಡಿ ಎಂದು ಏರುಧ್ವನಿಯಲ್ಲಿ ಮಾತನಾಡಿದರು.

ಝಣ ಝಣ ಕಾಂಚಾಣ: ಒಂದು ವೋಟಿಗೆ 1 ರಿಂದ 2 ಸಾವಿರ, ಮತದಾರರಿಗೆ ಬಗೆಬಗೆಯ ಆಫರ್‌!

ಕಲ್ಲಹಳ್ಳಿ ಗೋಣೆಪ್ಪ ಅವರು ಸಭೆಗೆ ಕಾರ್ಯಕರ್ತರಿಗೆ ಕರೆದಿಲ್ಲ, ಒಂದು ಫೋನ್‌ ಇಲ್ಲ, ಹೆಸರಿಗೆ ಜಿಲ್ಲಾಧ್ಯಕ್ಷರು ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಸದಸ್ಯ ಹುಲ್ಲಿಕಟ್ಟಿಚಂದ್ರಪ್ಪ ಅವರು ಕಾರ್ಯಕರ್ತರು ನಿಷ್ಠಾವಂತರಾಗಿದ್ದೇವೆ, ಮುಖಂಡರಲ್ಲಿ ಗುಂಪುಗಾರಿಕೆ ಇದೆ, ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವಾಗಬೇಕು ಎಂದರು. ಮತ್ತೂರು ಬಸವರಾಜ ಸಹ ಧ್ವನಿಗೂಡಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಎಚ್‌.ಕೆ. ಹಾಲೇಶ, ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ಏಕೆ ಕರೆದಿಲ್ಲ? ಇನ್ನೂ ಅನೇಕ ಮುಖಂಡರು ಬಂದಿಲ್ಲ, ಗುಂಪುಗಾರಿಕೆ ಮಾಡಿಕೊಂಡು ಬೇರೆಯವರ ಮೇಲೆ ಹಾಕುತ್ತಾರೆ, ಎಲ್ಲರನ್ನೂ ಕರೆಯಿಸಿ ಎಂದು ತಾಕೀತು ಮಾಡಿದರು. ಮುಖಂಡ ಪಿ.ಎಲ್‌. ಪೋಮ್ಯನಾಯ್ಕ ಅವರು ಪಕ್ಷದ ವೇದಿಕೆಯಲ್ಲಿಯೇ ಎಲ್ಲರೂ ಕೆಲಸ ಮಾಡಬೇಕು ಎಂದರು. ಆಗ ವೀಕ್ಷಕ ಅಲ್ಲಂ ವೀರಭದ್ರಪ್ಪ ಅವರು, ಎಲ್ಲರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಲೆಂದು ಇಲ್ಲಿ ಬೈದು, ಇಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರಿಗೆ ಬಹಳ ಸಲ ಫೋನ್‌ ಮಾಡಿದ್ದೇನೆ ಎಂದು ಉತ್ತರಿಸಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಸೇರಿ ಒಂದು ಕಮಿಟಿ ರಚಿಸಿ ತಾಲೂಕಿನಲ್ಲಿ ಪ್ರವಾಸ ಮಾಡಿ ಜಿಲ್ಲಾಧ್ಯಕ್ಷರು ಮೇಲುಸ್ತುವಾರಿ ನಡೆಸಿ ನನಗೆ ವರದಿ ಕೊಡಿ ಎಂದು ಸೂಚಿಸಿದರು. ಸಭೆಗೆ ಕೆಲವರನ್ನು ಆಹ್ವಾನ ನೀಡದಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ, ಆದರೂ ಬಂದಿದ್ದಕ್ಕೆ ಸಂತೋಷ ಎಂದು ಹೇಳಿದರು. ಒಟ್ಟಿನಲ್ಲಿ ಅನೇಕರು ಸಭೆಗೆ ಆಹ್ವಾನ ನೀಡಿಲ್ಲ ಎಂಬುದು ಸೇರಿದಂತೆ ವಿವಿಧ ದೂರನ್ನು ಹೇಳಿದರು. ಸಭೆಯಲ್ಲಿ ಅತ್ಯಂತ ಕಡಿಮೆ ಕಾರ್ಯಕರ್ತರು ಇದ್ದುದೆ ಇಲ್ಲಿಯ ಕಾಂಗ್ರೆಸ್‌ ಪರಿಸ್ಥಿತಿಯನ್ನು ಸಾರುತ್ತಿತ್ತು.
 

click me!