ಬಿಜೆಪಿ ಕುಟುಂಬಕ್ಕೆ ಸೊಸೆಯಾಗಿ ಬಂದಿದ್ದೇನೆ: ಪಾಟೀಲ|ಕುಟುಂಬದವರೆಲ್ಲ ಪರಿಚಯವಾಗಲು ಸ್ವಲ್ಪ ಸಮಯಾವಕಾಶ ಬೇಕು|ಕ್ಷೇತ್ರದ ಅಭಿವೃದ್ಧಿಗಾಗಿ ಬಣಕಾರ, ನಾನು ಒಂದಾಗಿದ್ದೇವೆ|
ರಟ್ಟೀಹಳ್ಳಿ(ನ.25): ಬಿಜೆಪಿ ಕುಟುಂಬಕ್ಕೆ ನಾನು ಸೊಸೆಯಂತೆ ಇತ್ತೀಚೆಗೆ ಬಂದಿದ್ದೇನೆ. ಕೇವಲ 10 ದಿನಗಳ ಸಂಸಾರ ಮಾಡಿದ್ದೇನೆ. ಎಲ್ಲರನ್ನೂ ಅರ್ಥ ಮಾಡಿಕೊಳ್ಳಲು ಸಮಯಾವಕಾಶಬೇಕು. ನಾನು ಎಲ್ಲರನ್ನೂ ಪರಿಚಯ ಮಾಡಿಸಿಕೊಂಡು ಮಾತನಾಡಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಯು.ಬಿ. ಬಣಕಾರ ಮತ್ತು ಬಿ.ಸಿ. ಪಾಟೀಲ ಎಂಬ ಎರಡು ಗುಂಪಿಲ್ಲ, ಅವು ನಮ್ಮ ಎರಡು ಕಣ್ಣುಗಳಿದ್ದಂತೆ. ನಾವು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಒಂದಾಗಿದ್ದೇವೆ. ಕಾರ್ಯಕರ್ತರೂ ಒಂದಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಾನು ಮತ್ತು ಬಣಕಾರ ಒಂದೇ ವೇದಿಕೆಯಲ್ಲಿ ಇರುತ್ತೇವೆ ಎಂದು ಯಾರೂ ಊಹಿಸಿಕೊಂಡಿರಲಿಲ್ಲ. ಮೈತ್ರಿ ಸರ್ಕಾರ 6-7 ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಉತ್ತರ ಕರ್ನಾಟಕದ ತಾರತಮ್ಯ, ತಾಲೂಕಿಗೆ ಆದ ಅನ್ಯಾಯವನ್ನು ಗಮನಿಸಿ ಕೆಟ್ಟಮುಖ್ಯಮಂತ್ರಿ, ಸರ್ಕಾರವನ್ನು ಕೆಡವಲು ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಹೊರಬಂದಿದ್ದೇನೆ. ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯಕ್ಕೆ ಅಂಟಿಕೊಂಡಿದ್ದ ಶನಿ ಹರಿದಿದೆ ಎಂದರು.
ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಎಂಪಿ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ 8 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ಆದರೆ, ಹಾವೇರಿ ಜಿಲ್ಲೆಗೆ 1 ಸಾವಿರ ಕೋಟಿ ಕೊಡಲು ಹಣ ಇರಲಿಲ್ಲ. ಮೆಡಿಕಲ್ ಕಾಲೇಜಿಗೆ ಅನುದಾನ ಕೇಳಿದರೆ ಹಣ ಎಲ್ಲಿದೆ ಬ್ರದರ್ ಎಂದು ಹೇಳಿದರು. ಆದರೆ, ಯಡಿಯೂರಪ್ಪನವರು ಸಿಎಂ ಆಗುತ್ತಿದ್ದಂತೆ ಸರ್ವಜ್ಞ ಏತ ನೀರಾವರಿ ಯೋಜನೆಗೆ 185 ಕೋಟಿ, ಹಾವೇರಿ ಮೆಡಿಕಲ್ ಕಾಲೇಜಿಗೆ 600 ಕೋಟಿ, ಕುಮುದ್ವತಿ ಬ್ಯಾರೇಜ್ ನಿರ್ಮಾಣಕ್ಕೆ 18 ಕೋಟಿ ಅನುದಾನ ಕೊಟ್ಟಿದ್ದಾರೆ. ಹೀಗಾಗಿ ಬಿಎಸ್‌ವೈ ಕಾಮಧೇನು ಇದ್ದಂತೆ ಎಂದು ಬಣ್ಣಿಸಿದರು.
ಜಾತಿ ಒಡೆದವರಿಂದ ನೀತಿ ಪಾಠ:
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಕಿತ್ತುಕೊಂಡಿದ್ದ ಕಾಂಗ್ರೆಸ್ಸಿಗರು ತಮ್ಮ ಸರ್ಕಾರದ ಅವಧಿಯಲ್ಲಿ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾವೇರಿಗೆ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಬಹಿರಂಗಪಡಿಸಬೇಕು. ಹಾವೇರಿಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್‌ಅನ್ನು ಗದಗ ಜಿಲ್ಲೆಗೆ ಒಯ್ದರು. ಆರೂವರೆ ವರ್ಷ ಹಾವೇರಿ ಜಿಲ್ಲೆಗೆ ಕಾಂಗ್ರೆಸ್ ಯಾವುದೇ ಕೊಡುಗೆ ಕೊಡಲಿಲ್ಲ. ಅಧಿಕಾರ ಸಿಕ್ಕಾಗ ಜಾತಿ ಒಡೆದವರು ಈಗ ನೀತಿಪಾಠ ಹೇಳುತ್ತಿದ್ದಾರೆ. ಆಗ ಸಮಾಜ ಒಡೆಯುವ ಕೆಲಸ ಮಾಡುತ್ತೀರಿ. ವಿರೋಧ ಪಕ್ಷದಲ್ಲಿದ್ದಾಗ ನೀತಿ ಹೇಳುತ್ತೀರಿ. ನಿಮ್ಮಲ್ಲಿ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.
ಸಿಎಂ ಯಡಿಯೂರಪ್ಪನವರು ಯಾವುದೇ ಭೇದ- ಭಾವ ಮಾಡದೇ ಎಲ್ಲದಕ್ಕೂ ಅನುದಾನ ಕೊಟ್ಟಿದ್ದಾರೆ. ಕನಕ ಪೀಠಕ್ಕೆ 40 ಕೋಟಿ, ಬಾಡದ ಅರಮನೆಗೆ 14 ಕೋಟಿ, ವಾಲ್ಮೀಕಿ ಪೀಠಕ್ಕೆ 5 ಕೋಟಿ, ಭೋವಿ ಅಭಿವೃದ್ಧಿ ಮಂಡಳಿ ರಚಿಸಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಯು.ಬಿ. ಬಣಕಾರ, ಬಿ.ಸಿ. ಪಾಟೀಲ ಒಂದಾದ ಬಳಿಕ ರಾಜಕೀಯ ಚಿತ್ರಣ ಬದಲಾಗಿದೆ. ಈಗಾಗಲೇ ಪಾಟೀಲ ಗೆಲುವಿನ ಮುನ್ನುಡಿ ಬರೆದಿದ್ದು, ದಾಖಲೆಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಕ್ಷೇತ್ರದ ಜನತೆ ತಾಲೂಕಿನ ಭವಿಷ್ಯದ ಅಭಿವೃದ್ಧಿ ದೃಷ್ಠಿಯಿಂದ ಪಾಟೀಲ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಪಕ್ಷ ಕೆಲವೇ ವರ್ಗಗಳ ಅಭಿವೃದ್ಧಿ ಚಿಂತನೆ ಮಾಡುತ್ತಿತ್ತು. ಆದರೆ, ಯಡಿಯೂರಪ್ಪ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಅಭಿವೃದ್ಧಿ ಚಿಂತನೆ ಮಾಡುವ ಏಕೈಕ ಮುಖ್ಯಮಂತ್ರಿ ಎಂದರು.
ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ ಮಾತನಾಡಿ, ಎರಡು ತಾಲೂಕಿನ ಅಭಿವೃದ್ಧಿ ಈ ಎರಡು ಜೊಡೆತ್ತಿನಿಂದ ಸಾಧ್ಯ ಎಸ್.ಸಿ, ಎಸ್.ಟಿ ಜನಾಂಗ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದರು.
ಮುಖಂಡ ಕೆ.ಪಿ. ನಂಜುಂಡಿ ಮಾತನಾಡಿ, ನಾನು ಕಾಂಗ್ರೆಸ್‌ನಲ್ಲಿ 16 ವರ್ಷ ಪ್ರಾಮಾಣಿಕವಾಗಿ ದುಡಿದರೂ ನಮ್ಮನ್ನು ಗುರುತಿಸದೆ ದೂಡಲ್ಪಟ್ಟರು, ಅದಕ್ಕಾಗಿ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ನಮ್ಮ ಪಕ್ಷ ಬೆಂಬಲಿಸಬೇಕೆಂದು ಹೇಳಿದರು.
ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಮಾತನಾಡಿದರು. ಸಭೆಯಲ್ಲಿ ಜಿಪಂ, ತಾಪಂ, ಗ್ರಾಪಂ ಸದಸ್ಯರು, ಬಿ.ಜೆ.ಪಿ.ಶಕ್ತಿ ಘಟಕದ ಅಧ್ಯಕ್ಷ ಎಸ್.ಬಿ. ಪಾಟೀಲ, ದೇವರಾಜ ನಾಗಣ್ಣನವರ, ಶಂಕರ ಚೆನ್ನಗೌಡ್ರ, ರಾಜು ಪವಾರ, ವೀರನಗೌಡ ಮಕರಿ, ಕುಮಾರ ಪಾಟೀಲ, ಬಸವರಾಜ ಚಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.