
ಬೆಂಗಳೂರು(ಏ.01): ಇನ್ನು ಮುಂದೆ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಐದು ಸಾವಿರ ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣವುಳ್ಳ ಕಟ್ಟಡ ನಿರ್ಮಾಣದ ವೇಳೆ ಕಡ್ಡಾಯವಾಗಿ ಕಸ ವಿಂಗಡಣೆ, ವಿಲೇವಾರಿ(Garbage Disposal) ಮತ್ತು ಸಂಸ್ಕರಣೆಗೆ ಪ್ರತ್ಯೇಕ ಸ್ಥಳ ಮೀಸಲಿಡುವುದು ಕಡ್ಡಾಯ ಹಾಗೂ ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿಯನ್ನು ಕಟ್ಟಡದ ಮಾಲಿಕರೇ ಮಾಡಬೇಕು. ಅಗತ್ಯವಿದ್ದರೆ ಪಾಲಿಕೆ ಗುರುತಿಸಿದ ಸೇವಾದಾರರ ಮೂಲಕ ಸೇವೆ ಪಡೆಯುವಂತೆ ಸೂಚಿಸಿ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಆದೇಶಿಸಿದ್ದಾರೆ.
ಈ ನಿಯಮ ಕೇವಲ ಜನ ಸಾಮಾನ್ಯರು, ವ್ಯಾಪಾರಸ್ಥರು, ಉದ್ಯಮಿಗಳಿಗೆ ಮಾತ್ರ ಅನ್ವಯವಾಗದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೇರಿದ ಎಲ್ಲ ಇಲಾಖೆಯ ಕಟ್ಟಡಗಳು ಪಾಲಿಸಬೇಕಾಗುತ್ತದೆ. ಈ ಕುರಿತು ಸರ್ಕಾರದ ಅಧಿಸೂಚನೆ ನಿರೀಕ್ಷಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
BBMP ಸಂಧಾನ ಯಶಸ್ವಿ: ಕಸ ಸಂಗ್ರಹ ಮತ್ತೆ ಶುರು
ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ(Solid Waste Management) ಉಪನಿಯಮ-2020ರ ಪ್ರಕಾರ ನಗರದಲ್ಲಿ ಹೋಟೆಲ್, ರೆಸ್ಟೋರೆಂಟ್, ಅಪಾರ್ಚ್‌ಮೆಂಟ್, ಕಾರ್ಖಾನೆ, ಐಟಿ ಪಾರ್ಕ್, ಬೇಕರಿ, ಐಸ್‌ಕ್ರಿಂ ಪಾರ್ಲರ್, ಸರ್ಕಾರಿ ಕಚೇರಿ ಒಳಗೊಂಡಂತೆ ದಿನಕ್ಕೆ 100 ಕೆ.ಜಿ.ಗಿಂತ ಹೆಚ್ಚಿನ ಪ್ರಮಾಣ ತ್ಯಾಜ್ಯ ಉತ್ಪಾದಕರು (ಬೃಹತ್ ತ್ಯಾಜ್ಯ ಉತ್ಪಾದಕರು) ತಮ್ಮಲ್ಲಿ ಉತ್ಪಾದನೆ ಆಗುವ ಕಸವನ್ನು ತಮ್ಮ ಆವರಣದಲ್ಲಿಯೇ ಸಂಸ್ಕರಿಸಬೇಕಾಗುತ್ತದೆ. ಇದರ ಅನ್ವಯ ಮುಂದಿನ ದಿನಗಳಲ್ಲಿ ನಗರದಲ್ಲಿ 5 ಸಾವಿರ ಚದರ ಮೀಟರ್‌ಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ನಿರ್ಮಾಣದ ವೇಳೆ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಸ್ಥಳಾವಕಾಶ ಇದ್ದರೆ ವೈಜ್ಞಾನಿಕವಾಗಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸ್ಥಳಾವಕಾಶ ಇರದಿದ್ದರೆ, ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿಕೊಂಡು ತಾವೇ ಸಂಸ್ಕರಿಸಬೇಕು. ಇಲ್ಲವಾದರೆ, ಪಾಲಿಕೆಯ ನೋಂದಾಯಿತ ತ್ಯಾಜ್ಯ ಸಂಸ್ಕರಣೆದಾರರ ಸೇವೆಯನ್ನು ಪಡೆದು ಅದಕ್ಕೆ ಪಾಲಿಕೆ ನಿಗದಿ ಪಡಿಸಿದ ಶುಲ್ಕ ಪಾವತಿಸಬೇಕಾಗುತ್ತದೆ. ಆಹಾರ ಮತ್ತು ಹಸಿ ತ್ಯಾಜ್ಯವನ್ನು ನೋಂದಾಯಿತ ಹಂದಿ ಸಾಕಣಿಕೆದಾರರಿಗೆ ನೀಡಬಹುದಾಗಿದೆ.
BBMP: ಬೆಂಗ್ಳೂರಲ್ಲಿ ಕಸ ವಿಲೇವಾರಿ ಸ್ಥಗಿತ: ಗಬ್ಬೆದ್ದು ನಾರುವ ಆತಂಕ..!
ಬೃಹತ್ ತ್ಯಾಜ್ಯ ಉತ್ಪಾದಕರು ಬಯೋ ಮಿಥೇನೇಶನ್ ಮತ್ತು ಕಾಂಪೋಸ್ಟಿಂಗ್ ಮೂಲಕ ತಯಾರಿಸಿದ ಗೊಬ್ಬರನ್ನು ನಿಗದಿ ಪಡಿಸಿದ ದರದ ಅನ್ವಯ ಸರ್ಕಾರಿ ತೋಟಗಾರಿಕೆಗಳಿಗೆ, ನೋಂದಾಯಿತ ಸಂಸ್ಥೆಗಳಿಗೆ ಮಾರಾಟ ಮಾಡಬಹುದಾಗಿದೆ. ಇನ್ನು ಒಣ ತ್ಯಾಜ್ಯವನ್ನು ಬಿಬಿಎಂಪಿಯ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ಅಥವಾ ಪಾಲಿಕೆಯಿಂದ ನೋಂದಾಯಿತ ಸೇವಾದಾರರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ರವಾನಿಸಬೇಕು. ವಿಲೇವಾರಿ ನಿಯಮ ಉಲ್ಲಂಘನೆ ದೃಢಪಟ್ಟರೆ ನಿಯಮ ಪ್ರಕಾರ ದಂಡ ಅಥವಾ ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಬೃಹತ್ ತ್ಯಾಜ್ಯ ಉತ್ಪಾದಕರು
ಅಪಾರ್ಟ್‌ಮೆಂಟ್‌ಗಳು(Apartments), ಒಂದೇ ಆವರಣದಲ್ಲಿ 100 ಘಟಕಕ್ಕಿಂತ ಹೆಚ್ಚಿನ ಸಮುದಾಯಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಿದ ಅಧೀನಕ್ಕೆ ಒಳಪಡುವ ಇಲಾಖೆಯ ಎಲ್ಲ ಕಚೇರಿಗಳು, ಧಾರ್ಮಿಕ ಮತ್ತು ದತ್ತಿ ಇಲಾಖೆಯಡಿ ಬರುವ ದೇವಸ್ಥಾನ ಮತ್ತು ಎಲ್ಲ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಶಾಲಾ-ಕಾಲೇಜುಗಳು, ಹಾಸ್ಟೆಲ್, ಪಿಜಿ, ವಿಶ್ವವಿದ್ಯಾನಿಲಯಗಳು, ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಕೃಷಿ ಉತ್ಪನ್ನ ಮಾರುಕಟ್ಟೆ, ಹಾಲು ಮಾರಾಟಗಾರರು, ಹಾಪ್‌ಕಾಮ್ಸ್, ಕೈಗಾರಿಕೆ, ಕಾರ್ಖಾನೆ, ಬೇಕರಿ, ರೆಸ್ಟೋರೆಂಟ್, ಹೋಟೆಲ್, ಕಲ್ಯಾಣ ಮಂಟಪ, ಸೂಪರ್ ಮಾರ್ಕೆಟ್, ಮಾಲ್, ಕ್ಲಬ್, ಪೆಟ್ರೋಲ್ ಬಂಕ್, ಸರ್ವಿಸ್ ಗ್ಯಾರೇಜ್, ಸಲೂನ್, ಐಸ್‌ಕ್ರೀಂ ಪಾರ್ಲರ್, ಫಾಸ್ಟ್ ಫುಡ್, ಚಾಟ್ಸ್ ಸೆಂಟರ್ ಹಾಗೂ ಗುಡಿ ಕೈಗಾರಿಕೆಗಳನ್ನು ಬೃಹತ್ ಅಥವಾ 100 ಕೆ.ಜಿಗಿಂತ ಹೆಚ್ಚಿನ ತ್ಯಾಜ್ಯ ಉತ್ಪಾದಕರು ಎಂದು ಪರಿಗಣಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 18 ಸಾವಿರ ಬೃಹತ್ ತ್ಯಾಜ್ಯ ಉತ್ಪಾದಕರಿದ್ದಾರೆ ಎಂದು ಗುರುತಿಸಲಾಗಿದೆ.