ರಾಜ್ಯೋತ್ಸವ ಪ್ರಶಸ್ತಿಯಲ್ಲಿ ನಡೆದಿದ್ಯಾ ತಾರತಮ್ಯ...?

By Girish GoudarFirst Published Nov 4, 2023, 12:00 AM IST
Highlights

ಎಸ್‌ಪಿ ಕಚೇರಿಯಲ್ಲಿರುವ ಕಾರವಾರ ಶಾಸಕ‌ ಸತೀಶ್ ಸೈಲ್ ಅವರ ಪತ್ನಿಯ ಸಹೋದರಿ ಹಾಗೂ ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜನೆಯಾಗಿ ಆರು ತಿಂಗಳಷ್ಟೇ ಪೂರೈಸಿದ ಅಧಿಕಾರಿಯೋರ್ವರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿರುವುದು ಗಮರ್ನಾಹ ಅಂಶ. 

ಉತ್ತರಕನ್ನಡ(ನ.04):  ಉತ್ತರಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣೆಯಾದ ಬಳಿಕ ಇದೀಗ ಸಾಕಷ್ಟು ವಿರೋಧ ವ್ಯಕ್ತವಾಗತೊಡಗಿದೆ. ಆಯ್ಕೆ ಸಮಿತಿಯನ್ನು ಕಡೆಗಣಿಸಿರುವ ಜಿಲ್ಲಾಧಿಕಾರಿ, ಸರ್ವಾಧಿಕಾರಿ ಧೋರಣೆ ನಡೆಸಿ, ಪ್ರಾದೇಶಿಕ ನ್ಯಾಯ ಕೂಡ ನೀಡದೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಎಸ್‌ಪಿ ಕಚೇರಿಯಲ್ಲಿರುವ ಕಾರವಾರ ಶಾಸಕ‌ ಸತೀಶ್ ಸೈಲ್ ಅವರ ಪತ್ನಿಯ ಸಹೋದರಿ ಹಾಗೂ ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜನೆಯಾಗಿ ಆರು ತಿಂಗಳಷ್ಟೇ ಪೂರೈಸಿದ ಅಧಿಕಾರಿಯೋರ್ವರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿರುವುದು ಗಮರ್ನಾಹ ಅಂಶ. 

ಉತ್ತರ ಕನ್ನಡ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರಕ್ಕೆ ಪಾದಯಾತ್ರೆ

ಅಂದಹಾಗೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಕೆಲವು ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ರಚಿಸಲಾಗುತ್ತಿತ್ತು. ಈ ವರ್ಷ ಕೂಡಾ ಆಯ್ಕೆ ಸಮಿತಿ ರಚಿಸಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷರಿಗೆ ಪತ್ರ ರವಾನಿಸಲಾಗಿತ್ತು. ಆದರೆ, ಸಭೆ ನಡೆಸದೇ, ಒಂದು ದಿನ ಮುಂಚಿತವಾಗಿಯೇ ತಮ್ಮ ಕಾರ್ಯಾಲಯದಲ್ಲಿ ಅಧಿಕಾರಿಗಳು ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆಸಿರುವುದು ತಿಳಿದುಬಂದಿದೆ. ಜಿಲ್ಲಾಧಿಕಾರಿಗಳು ಹಾಗೂ ಅವರ ಇಲಾಖಾ ಅಧಿಕಾರಿಗಳು ಶಿಷ್ಠಾಚಾರಕ್ಕೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಮತ್ತು ಆಯ್ಕೆ ಸಮಿತಿಯ ಯಾವ ಸದಸ್ಯರ ಗಮನಕ್ಕೂ ತಂದಿಲ್ಲ ಎನ್ನಲಾಗಿದೆ. 

ಸಾರ್ವಜನಿಕ ಕ್ಷೇತ್ರದ 17 ಪ್ರಶಸ್ತಿಗಳಲ್ಲಿ ಕರಾವಳಿಯ ಒಂದೇ ತಾಲೂಕಿಗೆ  ಐದು ಪ್ರಶಸ್ತಿಗಳು ಹಾಗೂ ಮತ್ತೆರಡು ಕರಾವಳಿ ತಾಲೂಕಿಗೆ ತಲಾ ನಾಲ್ಕು ಪ್ರಶಸ್ತಿಗಳನ್ನು ನೀಡಲಾಗಿದ್ದು, ರಂಗಭೂಮಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಅಲ್ಲದೇ, ಜಿಲ್ಲೆಯಿಂದ ಹೊರಗಿರುವ ವ್ಯಕ್ತಿಗಳಿಗೂ ಕೂಡಾ ಪ್ರಶಸ್ತಿ ನೀಡಲಾಗಿದೆ ಎಂದು ದೂರಲಾಗಿದೆ. 

ಈ ವರ್ಷ ಅಗತ್ಯಕ್ಕಿಂತ  ಹೆಚ್ಚಾಗಿ ಇಲಾಖೆ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ರೆ, ದಾಂಡೇಲಿ, ಹಳಿಯಾಳ, ಜೊಯಿಡಾ, ಮುಂಡಗೋಡ, ಸಿದ್ದಾಪುರಕ್ಕೆ ಒಂದೇ ಒಂದು ಪ್ರಶಸ್ತಿ ಬಂದಿಲ್ಲ. ಇದು ರಾಜಕೀಯ ಒತ್ತಡವೋ ಅಥವಾ ಸಚಿವರು, ಶಾಸಕರ ಹಸ್ತಕ್ಷೇಪವೋ ಎಂದು ಸ್ಪಷ್ಠಪಡಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!