
ಬೀದರ್(ನ.03): ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಸಿಕ್ಕ ಅಧಿಕಾರವನ್ನು ನಿಭಾಯಿಸುವಲ್ಲಿ ಹಾಗೂ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಪರಿಹಾರ ಒದಗಿಸಿಕೊಡುವಲ್ಲಿ ವಿಫಲವಾಗಿ, ಇಲ್ಲ ಸಲ್ಲದ ಹೇಳಿಕೆಗಳು ನೀಡಿ, ಜನರ ಮನಸ್ಸನ್ನು ಬೆರೆಡೆ ಸೆಳೆಯುವ ಕೆಳಮಟ್ಟದ ರಾಜಕೀಯ ಮಾಡುತ್ತಿರುವುದು ಅವರ ಯೋಗ್ಯತೆ ಏನೆಂಬುದು ತೋರಿಸುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿರುಗೇಟು ನೀಡಿದ್ದಾರೆ.
ಉಸ್ತುವಾರಿ ಸಚಿವರಾಗಿ ಈಶ್ವರ ಖಂಡ್ರೆಯವರು, ಭಾಲ್ಕಿ ಪಟ್ಟಣದಲ್ಲಿ ಸಹೋದರಿ, ನ್ಯಾಯವಾದಿ ಧನಲಕ್ಷ್ಮಿ ಬಳತೆಯವರನ್ನು ಮಧ್ಯರಾತ್ರಿ ಬಂಧಿಸಿ, ಎಸಗಲಾದ ದೌರ್ಜನ್ಯವನ್ನು ಖಂಡಿಸದೆ ಇರುವುದು ನಾಚಿಕೆಗೇಡಿತನ. ಈ ದೌರ್ಜನ್ಯದ ಹಿಂದೆ ಈಶ್ವರ ಖಂಡ್ರೆಯವರ ಕೈವಾಡವಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾಗೆ ಟಿಕೆಟ್ ಸಿಗಲ್ಲವೆಂಬ ಬಯ: ಈಶ್ವರ ಖಂಡ್ರೆ ವ್ಯಂಗ್ಯ
ಸಚಿವರಾಗಿ ಕಳೆದ 5 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿಲ್ಲ, ರಾಜ್ಯದಿಂದ ಅನುದಾನ ತರುವ ಸಣ್ಣ ಪ್ರಯತ್ನವು ಮಾಡಿಲ್ಲ. ಕೇವಲ ನನ್ನನ್ನು ಟೀಕಿಸುವ ಕೆಲಸ ಮಾತ್ರ ಮಾಡುತ್ತಿದ್ದಿರಿ. ಇದೇನಾ ನಿಮ್ಮ ಕಾರ್ಯವೈಖರಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಈಶ್ವರ ಖಂಡ್ರೆಗೆ ಪ್ರಶ್ನಿಸಿದ್ದಾರೆ.
ಸಿಪೇಟ್ ಕಾಲೇಜು ಪ್ರಾರಂಭಕ್ಕೆ ತಾವು ಅಡ್ಡಿ ಮಾಡಿರುವ ವಿಷಯ ಹೊಸದೇನಲ್ಲ, ರಾಜ್ಯದಿಂದ ಮೊದಲು 50 ಕೋಟಿ ರು. ಅನುದಾನ ಕೊಟ್ಟು ಸಿಪೇಟ್ ಬಗ್ಗೆ ಮಾತನಾಡಿ, ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಸಂಕಿರ್ಣ ಪ್ರಾರಂಭಿಸಿ, ಔರಾದ ಹಾಗೂ ಮೇಹಕರ್ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಿ, ಬೀದರ-ನಾಂದೇಡ ಹೊಸ ರೈಲ್ವೆ ಲೈನ್‌ಗೆ ರಾಜ್ಯದಿಂದ ಒಪ್ಪಿಗೆ ಪತ್ರ ನೀಡಿ, ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣಕ್ಕೆ ನಮ್ಮ ಸರ್ಕಾರ 200 ಕೋಟಿ ಅನುದಾನ ಒದಗಿಸಿ ಕಾಮಗಾರಿ ಪ್ರಾರಂಭಿಸಿದ್ದೇವೆ, ಆ ಕಾಮಗಾರಿ ಮುಂದುವರೆಸಲು ಉಳಿದಿರುವ 400 ಕೋಟಿ ಅನುದಾನ ಒದಗಿಸಿಕೊಡಿ ಎಂದು ಹೇಳಿದ್ದಾರೆ.